ರೋಗಿಗಳಲ್ಲಿ ಧೈರ್ಯ ತುಂಬಿದ ಸವಿತಾ
ಬೀದರ್: 2007ರಲ್ಲಿ ವಿದ್ಯಾ ವಿಕಾಸ್ ನರ್ಸಿಂಗ್ ಕಾಲೇಜಿನಲ್ಲಿ ಜಿಎನ್‌ಎಂ ಪೂರ್ಣಗೊಳಿಸಿರುವ ಸವಿತಾ ಕೋರೆ ಅವರು ಬೀರಿ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2008 ರಿಂದ 2018 ರವರೆಗೆ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡಿದ್ದಾರೆ. 2018ರಿಂದ ಬ್ರಿಮ್ಸ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸವಿತಾ ಕೋರೆ ಅವರನ್ನು ಮಾರ್ಚ್‌ನಲ್ಲಿ ಕೋವಿಡ್-ವಾರ್ಡ್‌ಗೆ ನಿಯೋಜನೆ ಮಾಡಲಾಗಿದ್ದು, ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಸೇವೆ ಕೊಡುವುದನ್ನು ಮುಂದುವರಿಸಿದ್ದಾರೆ. ಕರ್ತವ್ಯದ ಹೊರತಾಗಿಯೂ ವೃದ್ಧ ರೋಗಿಗಳಿಗೆ ಆಹಾರ ನೀಡುವುದು, ವಿಶ್ರಾಂತಿ ಕೊಠಡಿಗಳಿಗೆ ಕರೆದೊಯ್ಯುವುದು, ಫಿಜಿಯೊ ಥೆರಪಿ ಚಿಕಿತ್ಸೆ ನೀಡುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಕೋವಿಡ್ ಸೋಂಕಿನ ಭಯ ಹೋಗಲಾಡಿಸಲು ರೋಗಿಗಳಿಗೆ ನೆರವಾಗಿದ್ದಾರೆ. ಆಸ್ಪತ್ರೆಯಿಂದ ಮುಕ್ತರಾದ ನಂತರ ತಮ್ಮನ್ನು ತಾವು ಹೇಗೆ ನೋಡಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಿ ರೋಗಿಗಳು ಆತಂಕದಿಂದ ಹೊರಗೆ ಬರುವಂತೆ ಮಾಡಿದ್ದಾರೆ.
ಆರಂಭದಲ್ಲಿ ಕೋವಿಡ್ ಭಯ ಇದ್ದ ಕಾರಣ ತಮ್ಮ ಇಬ್ಬರು ಮಕ್ಕಳನ್ನು ಊರಿಗೆ ಕಳಿಸಿದ್ದರು. ನಂತರ ಹೇಗೋ ಕೋವಿಡ್ ಸೋಂಕು ತಗುಲಿತು. ಪತಿ, 9 ವರ್ಷದ ಮಗ ಹಾಗೂ 6 ವರ್ಷದ ಮಗಳು ಪ್ರಾಥಮಿಕ ಸಂಪರ್ಕಕ್ಕೆ ಬಂದ ಕಾರಣ ಅವರಿಗೂ ಚಿಕಿತ್ಸೆ ಕೊಡಬೇಕಾಯಿತು. ಈಗ ಎಲ್ಲರೂ ಗುಣಮುಖರಾಗಿದ್ದಾರೆ. ಕೋವಿಡ್ ಹೊಸ ಅನುಭವ ನೀಡಿದೆ. ರೋಗಿಗಳಿಗೆ ಇನ್ನಷ್ಟು ಧೈರ್ಯ ತುಂಬಲು ಸಾಧ್ಯವಾಗಿದೆ ಎಂದು ಸವಿತಾ ಹೇಳುತ್ತಾರೆ.
***
ಜನರಲ್ಲಿ ಅರಿವು ಮೂಡಿಸಿದ ಸಂಗೀತಾ
ಬೀದರ್: ಕಮಲನಗರ ಪೊಲೀಸ್ ಠಾಣೆ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಂಗೀತಾ ಮಹದೇವ್ ಗಾಯಕವಾಡ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಉತ್ತಮ ಸೇವೆ ಮಾಡಿ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು 2007-08ರಲ್ಲಿ ಸೇವೆಗೆ ಸೇರಿದ್ದಾರೆ. 2017ರಲ್ಲಿ ಕಮಲನಗರ ಪೊಲೀಸ್ ಠಾಣೆಗೆ ಸೇವೆಗೆ ಹಾಜರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಗಡಿಯಲ್ಲಿರುವ ಕಮಲನಗರ ಠಾಣೆಯ ಪೊಲೀಸರಿಗೆ ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿನ ಕೆಲಸದ ಹೊರೆ ಬಿದ್ದಿತ್ತು. ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ಜನ ತಂಡೋಪ ತಂಡಪವಾಗಿ ಗಡಿ ಆಚೆಯಿಂದ ರಾಜ್ಯಕ್ಕೆ ಬರುತ್ತಿದ್ದರು. ಯಾರು, ಎಲ್ಲಿಂದ ಬಂದಿದ್ದಾರೆ, ಎಲ್ಲಿಗೆ ಹೊರಟಿದ್ದಾರೆ ಎನ್ನುವುದನ್ನು ಮಾಹಿತಿ ಪಡೆಯಬೇಕಿತ್ತು. ಜತೆಗೆ ಅವರಿಗೆ ಕೋವಿಡ್ ಸೋಂಕಿನ ತಿಳಿವಳಿಕೆಯನ್ನೂ ನೀಡಬೇಕಿತ್ತು. ಈ ಕೆಲಸವನ್ನು ಸಂಗೀತಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಮಾಸ್ಕ್ ಹಾಕಿಕೊಳ್ಳದವರಿಗೆ ಕಡ್ಡಾಯವಾಗಿ ಧರಿಸುವಂತೆ ತಿಳಿವಳಿಕೆ ನೀಡುತ್ತಿದ್ದರು. ಸ್ಯಾನಿಟೈಸರ್ ಸಿಂಪಡಣೆ, ಪ್ರಯಾಣಿಕರ, ಪಾದಚಾರಿಗಳ ಜ್ವರ ತಪಾಸಣೆ ಮಾಡಿ ಕ್ವಾರಂಟೈನ್‌ಗೆ ಕಳಿಸಲಾಗುತ್ತಿತ್ತು. ಕೆಲವರು ವಾದಿಸುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದರು ಅಂತಹವರಿಗೆ ತಿಳಿವಳಿಕೆ ನೀಡಿ ಮನ ವೊಲಿಸಿದ್ದಾರೆ.
‘ನಿಮ್ಮ ತಂದೆ, ತಾಯಿ, ಪತ್ನಿ ಹಾಗೂ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಬೇಡಿ’ ಎಂದು ತಿಳಿವಳಿಕೆ ನೀಡಿ ಎಲ್ಲರ ಬಗ್ಗೆಯೂ ಯೋಚಿಸಿ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವಂತೆ ಮಾಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಮಹಾರಾಷ್ಟ್ರದಿಂದ ಅತಿ ಹೆಚ್ಚು ಜನ ನಡೆದುಕೊಂಡು ಬೀದರ್ ಜಿಲ್ಲೆಗೆ ಬಂದರು. ಅದರಲ್ಲಿ ಕೆಲವರು ಸೋಂಕಿತರೂ ಇದ್ದರು. ಸೋಂಕಿತ ವ್ಯಕ್ತಿತ ಸಂಪರ್ಕಕ್ಕೆ ಬಂದವರು ಇದ್ದರು. ಇವರೆಲ್ಲರ ಮಧ್ಯೆಯೇ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
***
ನಿರ್ಗತಿಕರಿಗೆ ನೆರವಾದ ಮೊಹಮ್ಮದ್ ಸೋಯೊಬೋದ್ದಿನ್
ಬೀದರ್: ನಗರದ ಸಮಾನ ಮನಸ್ಕ 20 ಯುವಕರ ತಂಡ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್.ಆರ್.ಎಫ್) ಹೆಸರಲ್ಲಿ ಸಂಘಟನೆ ಹುಟ್ಟು ಹಾಕಿ ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಿರ್ಗತಿಕರ ಹಾಗೂ ಬಡವರ ಹಸಿವು ನೀಗಿಸುವ ಕೆಲಸ ಮಾಡಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಹೋಟೆಲ್ ಹಾಗೂ ಚಹಾ ಅಂಗಡಿಗಳು ಬಾಗಿಲು ಮುಚ್ಚಿದವು. ಮಾರುಕಟ್ಟೆಗಳಲ್ಲಿ ಅಂಗಡಿಗಳು ತೆರೆದುಕೊಂಡಿರಲಿಲ್ಲ. ನಿರ್ಗತಿಕರು ಅನ್ನ ಇಲ್ಲದೆ ಪರದಾಡ ತೊಡಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಸಹಾಯಕ ಉಪಾಹಾರ ದೊರೆಯದೆ ತೊಂದರೆ ಅನುಭವಿಸಿದಾಗ ಎಚ್.ಆರ್.ಎಫ್ ಯುವಕರ ತಂಡ ತಮ್ಮ ಸ್ವಂತ ಖರ್ಚಿನಲ್ಲಿ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದೆ.
ಓಲ್ಡ್‌ಸಿಟಿಯ ನಿವಾಸಿಗಳಾದ ಮೊಹಮ್ಮದ್ ಸೋಯೊಬೋದ್ದಿನ್ ನೇತೃತ್ವದಲ್ಲಿ ಮಹಮ್ಮದ್ ಜಾಕೀರ್, ಮಹಮ್ಮದ್ ರಹೀಸ್, ರೋಹನ್ ಕುಮಾರ ಹಾಗೂ ಫೈಜಾನ್ ನಿರ್ಗತಿಕರಿಗೆ ನೆರವಾಗಿದ್ದಾರೆ. ಇವರಿಂದ ಪ್ರೇರಣೆ ಪಡೆದ 15 ಜನ ಸಂಘಟನೆಯಲ್ಲಿ ಸೇರಿ ಕೈಲಾದ ನೆರವು ನೀಡಿದ್ದಾರೆ.
ಮೊದಲ ಹತ್ತು ದಿನ ಆಲೂಭಾತ್ ಹಾಗೂ ನೀರಿನ ಪಾಕೆಟ್ ಹಂಚಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರಿಗೂ ಆಹಾರ ಹಂಚಿದ್ದಾರೆ. ಓಲ್ಡ್‌ಸಿಟಿಯಲ್ಲಿ ಕೋವಿಡ್ ಸೋಂಕು ತಗುಲಿದ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್‌ನಿಂದ ಸಮಯಕ್ಕೆ ಸರಿಯಾಗಿ ಆಹಾರ ಪೂರೈಕೆಯಾಗದ ಕಾರಣ ಜನ ಸಂಘಟನೆಯ ಬಳಿ ಸಹಾಯಕ್ಕಾಗಿ ಕೈಚಾಚಿದರು. ನಂತರ ಅವರಿಗೂ ಆಹಾರ ವಿತರಿಸಿದ್ದಾರೆ.
ಲಾಕ್‌ಡೌನ್ ನಂತರ ಕೆಲಸ ಕಳೆದುಕೊಂಡ ಕಡು ಬಡವರಿಗೆ ತಲಾ 8 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ ಹಿಟ್ಟು, 1 ಕೆ.ಜಿ ಎಣ್ಣೆ, 1 ಕೆ.ಜಿ. ಬೇಳೆ ಹಾಗೂ ಎರಡು ಸಾಬೂನು ಕೊಟ್ಟಿದ್ದಾರೆ. ನಗರದ ಲಾಡ್ಜ್‌ಗಳಲ್ಲಿ ಆಶ್ರಯ ಪಡೆದಿದ್ದ ಉತ್ತರ ಭಾರತದ 70ಕ್ಕೂ ಅಧಿಕ ಕಾರ್ಮಿಕರಿಗೂ ನೆರವು ನೀಡಿದ್ದಾರೆ.
‘ಬಡವರಿಗೆ ಊಟ ಕೊಟ್ಟು ಫೋಟೊ ತೆಗೆಸಿಕೊಂಡು ಪ್ರಚಾರ ಪಡೆಯುವ ಉದ್ದೇಶ ನಮಗಿಲ್ಲ. ಸಹಾಯ ಪಡೆದವರ ಜತೆ ಎಲ್ಲಿಯೂ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿಲ್ಲ’ ಎಂದು ಎಚ್.ಆರ್.ಎಫ್ ಪ್ರಮುಖ ಮೊಹಮ್ಮದ್ ಸೋಯೊಬೋದ್ದಿನ್ ಹೇಳುತ್ತಾರೆ.
***
ಔಷಧಿ, ಆಹಾರ ವಿತರಿಸಿದ ‘ಟೀಮ್ ಯುವಾ’
ಬೀದರ್ ಓಲ್ಡ್‌ಸಿಟಿಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವುದು ದೃಢಪಟ್ಟಾಗ ಜಿಲ್ಲಾಡಳಿತ ಕಂಟೈನ್‌ಮೆಂಟ್ ಪ್ರದೇಶವನ್ನಾಗಿ ಘೋಷಣೆ ಮಾಡಿತು. ಬಡ ಕೂಲಿಕಾರರು ಹೆಚ್ಚು ಸಮಸ್ಯೆಗೆ ಸಿಲುಕಿದರು. ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವವರ ಕೊರತೆ ಕಂಡು ಬಂದಿತು. ಈ ಅವಧಿಯಲ್ಲಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದವರು ಟೀಮ್ ಯುವಾದ ವಿನಯ ಮಾಳಗೆ.
ಯವಕರ ತಂಡ ರಚಿಸಿಕೊಂಡು ದಾನಿಗಳ ಸಹಕಾರದಿಂದ 17,000ಕ್ಕೂ ಹೆಚ್ಚು ಆಹಾರದ ಪ್ಯಾಕೆಟ್‌ಗಳನ್ನು ಬಡವರಿಗೆ ಒದಗಿಸಿದರು. 1480 ಆಹಾರದಾನ್ಯದ ಪಾಕೇಟ್‌ಗಳನ್ನು ಮಾಡಿ ಬಡವರಿಗೆ ಹಂಚಿದ್ದಾರೆ. ಅಗತ್ಯವಿರುವ ಕುಟುಂಬಗಳಿಗೆ ತರಕಾರಿ ಮತ್ತು ಹಣ್ಣುಗಳನ್ನು ಸಹ ವಿತರಣೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ಏಪ್ರಿಲ್‌ನಲ್ಲಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದವು. ಜನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದು ಹಾಗೂ ಔಷಧಿಗಳನ್ನು ತರುವುದು ಕಷ್ಟವಾಯಿತು. ಆಗ ಟೀಮ್ ಯುವಾದ ಯುವಕರು 40 ರೋಗಿಗಳಿಗೆ ಅವರು ಇರುವಲ್ಲಿಗೆ ಹೋಗಿ ಔಷಧಿ ವಿತರಿಸುವ ಕಾರ್ಯವನ್ನು ಮಾಡಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.
ಹೈದರಾಬಾದ್ ಹಾಗೂ ಬೆಂಗಳೂರಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಿದ್ದ ಇಬ್ಬರು ರೋಗಿಗಳಿಗೆ ನೆರವು ನೀಡಿದ್ದಾರೆ. ವೃದ್ಧಾಪ್ಯ ಪಿಂಚಣಿ ಸಮಸ್ಯೆಗಳನ್ನು ಇತರ ಸಂಸ್ಥೆಗಳ ನೆರವಿನಿಂದ ಪರಿಹರಿಸಲು ಪ್ರಯತ್ನಿಸಿದ್ದಾರೆ.
ಬೀದರ್‌ನಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ತಿಳಿವಳಿಕೆಯನ್ನೂ ನೀಡಿದ್ದಾರೆ. ಸುಮಾರು 770 ವಲಸೆ ಕಾರ್ಮಿಕರನ್ನು ಗುರುತಿಸಿ ಅವರಿಗೆ ಆಹಾರ ನೀರು ಒದಗಿಸಿದ್ದಾರೆ. ಬೇರೆ ರಾಜ್ಯಗಳಿಗೆ ಹೋಗಲು ಬಯಸಿದ್ದ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲು ಸಹಕರಿಸಿದ್ದಾರೆ.
1600 ಮಾಸ್ಕ್ ಹಾಗೂ 400 ಕೈಗವಸುಗಳನ್ನು ಆರೋಗ್ಯ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರಿಗೆ ವಿತರಿಸಿದರು. ಡಿಯುಡಿಸಿ ಬೀದರ್ ಆದೇಶದಂತೆ ನಾವು ಸಿಎಂಸಿ ಸಿಬ್ಬಂದಿಯೊಂದಿಗೆ ನಗರ ನೈರ್ಮಲ್ಯಕ್ಕಾಗಿ ಸ್ವಯಂಸೇವಕರನ್ನು ಒದಗಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಬೀದರ್‌ನ ವಿವಿಧ ಪ್ರದೇಶಗಳಲ್ಲಿ 600 ಹಾಲಿನ ಪಾಕೇಟ್ ವಿತರಿಸಿ ಬಡವರಿಗೆ ನೆರವಾಗಿದ್ದಾರೆ.
* ವರದಿ: ಚಂದ್ರಕಾಂತ ಮಸಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.