ADVERTISEMENT

ಹಂದಿಗಳ ತಾಣವಾದ ರೈಲ್ವೆ ನಿಲ್ದಾಣ ಆವರಣ: ರೋಗದ ಭಯದಲ್ಲಿ ಸುತ್ತಲಿನ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 6:50 IST
Last Updated 15 ಫೆಬ್ರುವರಿ 2024, 6:50 IST
ಹಂದಿಗಳ ತಾಣವಾಗಿರುವ ಕಮಲನಗರ ರೈಲ್ವೆ ನಿಲ್ದಾಣ
ಹಂದಿಗಳ ತಾಣವಾಗಿರುವ ಕಮಲನಗರ ರೈಲ್ವೆ ನಿಲ್ದಾಣ   

ಕಮಲನಗರ: ಪಟ್ಟಣದ ರೈಲ್ವೆ ನಿಲ್ದಾಣವನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣಗೊಳಿಸಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದರ ಆವರಣವು ಹಂದಿಗಳ ವಾಸಸ್ಥಾನ ಹಾಗೂ ಬಹಿರ್ದೆಸೆಗೆ ಸೂಕ್ತ ಎನ್ನುವಂತಾಗಿದೆ.

ರೈಲ್ವೆ ನಿಲ್ದಾಣಕ್ಕೆ ಸುತ್ತಲೂ ಗೋಡೆ ಇದೆ. ಆದರೂ ಪಕ್ಕದ ನಿವಾಸಿಗಳು ಹಾಗೂ ಕೆಲವು ಅಂಗಡಿಗಳವರು ಗೂಡಿಸಿದ ಕಸ ಕಡ್ಡಿಯನ್ನು ರೈಲು ನಿಲ್ದಾಣದ ಸ್ಥಳದಲ್ಲಿ ಹಾಕುವುದು ಕಂಡು ಬರುತ್ತಿದೆ. ಅಲ್ಲದೆ ಕೆಲವು ಮನೆಗಳ ನಿವಾಸಿಗಳು ತಮ್ಮ ಬಚ್ಚಲಿನ ನೀರು ಖಾಲಿ ಸ್ಥಳದಲ್ಲಿ ಬಿಡುತ್ತಿದ್ದಾರೆ. ಹೀಗಾಗಿ ಆ ಸ್ಥಳ ನೀರಿನ ಹೊಂಡದಂತಾಗಿದೆ. ಅಲ್ಲಿಯೇ ಇರುವ ಮುಳ್ಳಿನ ಮರಗಳ ನೆರಳಿನಲ್ಲಿ ಹಂದಿಗಳು ಠಿಕಾಣೆ ಹೂಡಿವೆ. ಇದರಿಂದ ತಗ್ಗಿನಲ್ಲಿ ನಿಂತ ನೀರಿನಿಂದ ಗಬ್ಬು ವಾಸನೆಯನ್ನು ಹೊರ ಸೂಸುತ್ತಿದೆ.

ಈ ಗಬ್ಬು ವಾಸನೆಯಿಂದ ಪಕ್ಕದಲ್ಲಿ ವಾಸಿಸುವ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸ್ಥಿತಿ ಬಂದಿದೆ ಎಂದು ಸ್ಥಳೀಯ ಮಹಿಳೆಯೊಬ್ಬರು ಹೇಳುತ್ತಾರೆ.

ADVERTISEMENT

‘ರೈಲ್ವೆ ನಿಲ್ದಾಣದ ಸ್ಥಳದಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ಹಚ್ಚಿದ್ದಾರೆ. ಆದರೆ ಸಸಿಗಳಿಗಿಂತ ಹೆಚ್ಚಾಗಿ ಜಾಲಿ ಮುಳ್ಳಿನ ಮರಗಳು ಬೆಳೆದಿವೆ. ಈ ಜಾಲಿ ಮುಳ್ಳಿನ ಮರಗಳ ಮರೆಯಲ್ಲಿ ಕೆಲವರು ಶೌಚ ಮಾಡುತ್ತಾರೆ’ ಎಂದು ಕಮಲನಗರ ನಿವಾಸಿ ಗೋವಿಂದರಾವ್ ತಾಂದಳೆ ಹೇಳುತ್ತಾರೆ.

ರೈಲ್ವೆ ವಿಭಾಗದಲ್ಲಿ ‘ಡಿ’ ಗ್ರೂಪ್ ನೌಕರರಿದ್ದು ಈ ಜಾಲಿ ಮರಗಳನ್ನು ತೆಗೆಯಬಹುದು. ಸುತ್ತಲಿನ ಕುಟುಂಬದವರು ರೈಲ್ವೇ ವಿಭಾಗದ ಸ್ಥಳದಲ್ಲಿ ಕಸ,ಕಡ್ಡಿ ಹಾಕದಂತೆ ಸೂಚನೆಯನ್ನು ಕೊಡುತ್ತೇವೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರು ತಿಳಿಸಿದ್ದಾರೆ.

‘ಗ್ರಾಮ ಪಂಚಾಯಿತಿಯ ಕಾರ್ಮಿಕರು ಪ್ರತಿ ವಾರಕ್ಕೊಮ್ಮೆ ರೈಲ್ವೆ ನಿಲ್ದಾಣ ಸ್ವಚ್ಛಗೊಳಿಸುತ್ತಾರೆ. ಆದರೆ ಜಾಲಿ ಮರಗಳಿರುವುದರಿಂದ ಮತ್ತು ಕೊಳಚೆ ನೀರಿನ ಸಂಗ್ರಹಣೆ ಆಗಿರುವುದರಿಂದ ದುರ್ವಾಸನೆ ಬರುತ್ತಿದೆ. ಈ ಸ್ಥಳವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಪಂಚಾಯಿತಿಯಿಂದ ಪ್ರತಿದಿನ ಶುಚಿಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದು ಕಮಲನಗರ ಗ್ರಾಮ ಪಂಚಾಯಿತಿ ಪಿಡಿಒ ರಾಜಕುಮಾರ ತಂಬಾಕೆ ಹೇಳಿದ್ದಾರೆ.

ಈ ಸ್ಥಳವನ್ನು ಕೆಲವರು ಮಲ ಮೂತ್ರ ವಿಸರ್ಜನೆಗೆ ಬಳಸುತ್ತಿರುವುದು ಸರಿಯಿಲ್ಲ. ದುರ್ವಾಸನೆ ಬರುವುದರಿಂದ ಓಡಾಡಲು ಬಹಳ ಕಷ್ಟವಾಗುತ್ತಿದೆ
ಜನಾರ್ದನ್ ಸಾವರ್ಗೆಕರ್ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.