ADVERTISEMENT

ಕಲ್ಯಾಣ ಕರ್ನಾಟಕದಲ್ಲಿ 17 ರೈತ ಸಂಪರ್ಕ ಕೇಂದ್ರ ನಿರ್ಮಿಸಲಾಗುವುದು:ಚಲುವರಾಯಸ್ವಾಮಿ

ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:49 IST
Last Updated 29 ಜೂನ್ 2024, 15:49 IST
ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಬುಟ್ಟಿಗಳಿಂದ ಸಾವಯವ ಬೆಲ್ಲ ತೆಗೆದು ಬೀದರ್‌ನಲ್ಲಿ ಶನಿವಾರ ಕೃಷಿ ಇಲಾಖೆಯ ಕಲಬುರಗಿ ವಿಭಾಗ ಮಟ್ಟದ ಸಭೆ ಉದ್ಘಾಟಿಸಿದರು
ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಬುಟ್ಟಿಗಳಿಂದ ಸಾವಯವ ಬೆಲ್ಲ ತೆಗೆದು ಬೀದರ್‌ನಲ್ಲಿ ಶನಿವಾರ ಕೃಷಿ ಇಲಾಖೆಯ ಕಲಬುರಗಿ ವಿಭಾಗ ಮಟ್ಟದ ಸಭೆ ಉದ್ಘಾಟಿಸಿದರು   

ಬೀದರ್‌: ‘ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ₹34 ಕೋಟಿ ವೆಚ್ಚದಲ್ಲಿ 17 ರೈತ ಸಂಪರ್ಕ ಕೇಂದ್ರಗಳನ್ನು ನಿರ್ಮಿಸಲಾಗುವುದು’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕೃಷಿ ಇಲಾಖೆಯ ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಎಲ್ಲೆಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲವೋ ಅಂತಹ ಕಡೆಗಳಲ್ಲಿ ಸರ್ಕಾರದಿಂದ ನಿರ್ಮಿಸಲಾಗುವುದು ಎಂದು ಹೇಳಿದರು.

ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ₹14.50 ಕೋಟಿ ವೆಚ್ಚದಲ್ಲಿ 58 ಗೋದಾಮುಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

₹4,600 ಕೋಟಿ ಬರ ಪರಿಹಾರ ವಿತರಣೆ:

ಕೇಂದ್ರ ಸರ್ಕಾರದ ವಿಳಂಬ ಧೋರಣೆಯ ನಡುವೆಯೂ ರಾಜ್ಯದಲ್ಲಿ ₹4,600 ಕೋಟಿ ಬರ ಪರಿಹಾರ ಈಗಾಗಲೇ ವಿತರಿಸಲಾಗಿದೆ. ₹1,700 ಕೋಟಿ ಮುಂಗಾರು ಹಂಗಾಮಿನ ವಿಮೆ ಪರಿಹಾರ ಇತ್ಯರ್ಥಪಡಿಸಲಾಗಿದೆ. ಈ ಬಾರಿ ಬೆಳೆ ವಿಮೆ ಕಂಪನಿಗಳಿಗೆ ವಿಧಿಸಿದ್ದ ಷರತ್ತುಗಳನ್ನು ಬದಲಾವಣೆ ಮಾಡಲಾಗಿದ್ದು, ಶೇ 20ಕ್ಕಿಂತ ಅಧಿಕ ಲಾಭ ವಿಮೆ ಕಂಪನಿಗಳು ಪಡೆಯುವಂತಿಲ್ಲ. ರೈತ ಪರವಾದ ನಿಯಮ ರೂಪಿಸಲಾಗಿದೆ. ರೈತರಿಗಿಂತ ವಿಮೆ ಕಂಪನಿಗಳಿಗೆ ಹೆಚ್ಚು ಹಣ ಹೋಗುತ್ತಿರುವುದರ ಬಗ್ಗೆ ಸಾಕಷ್ಟು ದೂರುಗಳು ಸಲ್ಲಿಕೆಯಾದ್ದರಿಂದ ಬೆಳೆ ವಿಮೆ ನಿಯಮದಲ್ಲಿ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.

‘ರಾಜ್ಯದಲ್ಲಿ ₹1 ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ರಾಜ್ಯ ಸರ್ಕಾರ ಈ ಬಜೆಟ್‌ನಲ್ಲೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ರೈತರ ಬಗ್ಗೆ ನಮಗಿರುವ ಬದ್ಧತೆಗೆ ಸಾಕ್ಷಿ’ ಎಂದು ಬೆನ್ನು ತಟ್ಟಿಕೊಂಡರು.

ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ಬೀದರ್‌ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳನ್ನು ಸಂಗ್ರಹಿಸಿ ಇಡಲು ‘ಕೋಲ್ಡ್‌ ಸ್ಟೋರೇಜ್‌’ಗಳಿಲ್ಲ. ಅವುಗಳನ್ನು ಆರಂಭಿಸಬೇಕು. ಎಲ್ಲ ತಾಲ್ಲೂಕುಗಳಿಗೆ ರಾಶಿಯಂತ್ರ ವಿತರಿಸಬೇಕು. ಸಣ್ಣ ಟ್ರ್ಯಾಕ್ಟರ್‌, ಟಾರ್ಪಲ್‌ಗೆ ಬೇಡಿಕೆ ಹೆಚ್ಚಿದ್ದು, ಒದಗಿಸಬೇಕು. ತೊಗರಿ ಇಳುವರಿ ಹೆಚ್ಚಿಸಲು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಹೊಸ ವಿಧಾನಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶೇ 75ರಷ್ಟು ಸಬ್ಸಿಡಿಯಲ್ಲಿ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಬೇಕು. ಇದರಿಂದ ರೈತರಿಗೆ ಸಾಕಷ್ಟು ಸಹಾಯವಾಗಲಿದೆ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಕೃಷಿ ಆಯುಕ್ತ ವೈ.ಎಸ್ ಪಾಟೀಲ, ಜಲಾನಯನ ಇಲಾಖೆ ಆಯುಕ್ತ ಗಿರೀಶ್, ಕೃಷಿ ನಿರ್ದೇಶಕ ಜಿ.ಟಿ. ಪುತ್ರ, ಏಳು ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರು ಪಾಲ್ಗೊಂಡಿದ್ದರು.

‘ಬೀದರ್‌ ಜಿಲ್ಲೆಗೆ ಕೃಷಿ ಭಾಗ್ಯ’ ‘ಬೀದರ್‌ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗುವುದು. ಈ ಬಗ್ಗೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಮನವಿಯಂತೆ ಸೂಕ್ಷ್ಮ ನೀರಾವರಿ ಹನಿ ನೀರಾವರಿ ಯಂತ್ರೋಪಕರಣಗಳ ವಿತರಣೆಗೆ ಬೀದರ್‌ ಜಿಲ್ಲೆಗೆ ಹೆಚ್ಚುವರಿ ಅನುದಾನ ನೀಡಲಾಗುವುದು. ಬೀದರ್‌ನಲ್ಲಿ ಕೃಷಿ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

‘ರಾಯಚೂರಿನಲ್ಲಿ ಕೊರತೆ ಮಳೆ’ ‘ರಾಯಚೂರು ಜಿಲ್ಲೆ ಹೊರತುಪಡಿಸಿದರೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಈ ಸಲ ಉತ್ತಮ ಮಳೆಯಾಗಿದೆ. ರಾಯಚೂರಿನಲ್ಲಷ್ಟೇ ಕೊರತೆ ಮಳೆಯಾಗಿದೆ. ವಾರದಿಂದ ಮಳೆಯಾಗಿಲ್ಲ. ಬರುವ ಹತ್ತು ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ಉತ್ತಮ ಮಳೆಯಾಗುವ ವಿಶ್ವಾಸ ಇದೆ’ ಎಂದು ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಹಿಂದೆ ಬಿತ್ತನೆ ಬೀಜ ರಸಗೊಬ್ಬರಕ್ಕೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಈ ಸಲ ರಾಜ್ಯದಲ್ಲಿ ಎಲ್ಲೂ ಆ ರೀತಿಯ ಸಮಸ್ಯೆಗಳು ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಅಗತ್ಯ ಬಿತ್ತನೆ ಬೀಜ ರಸಗೊಬ್ಬರದ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.