ADVERTISEMENT

ಪೊಲೀಸರಿಂದ ಶಾಸಕರ ಹೋಟೆಲ್ ಪರಿಶೀಲನೆ ಆಗಲಿ: ರಾಜಶೇಖರ ಪಾಟೀಲ

ಶಾಸಕ ಡಾ.ಸಿದ್ದಲಿಂಗಪ್ಪ ಸಹೋದರರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 4:52 IST
Last Updated 21 ಜೂನ್ 2024, 4:52 IST
ರಾಜಶೇಖರ ಪಾಟೀಲ
ರಾಜಶೇಖರ ಪಾಟೀಲ   

ಹುಮನಾಬಾದ್: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಇಬ್ಬರು ಸಹೋದರರು ಅನೇಕ ಜನರಿಗೆ ಬೆದರಿಕೆ ಹಾಕಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಒತ್ತಾಯಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶಾಸಕರಿಗೆ ಸಂಬಂಧಿಸಿದ ನಾಗೇಶ್ವರಿ ಹೋಟೆಲ್‌ನಲ್ಲಿ ಪೊಲೀಸರು ತನಿಖೆ ಮಾಡಿದರೆ‌. ಇವರು ಇಲ್ಲಿಯವರೆಗೆ ಎಷ್ಟು ಜನರಿಗೆ ಹೊಡೆದಿದ್ದಾರೆ ಎಂಬ ಸತ್ಯ ಹೊರಬರಲಿದೆ ಎಂದರು.

ADVERTISEMENT

ಕಠಳ್ಳಿ ಗ್ರಾಮದಲ್ಲಿ ರಾಜರೆಡ್ಡಿ ಎಂಬುವವರು ಜೆಜೆಎಂ ಕಾಮಗಾರಿ ಮಾಡುತ್ತಿದ್ದಾರೆ. ಇವರು ಹಳೇ ಟ್ಯಾಂಕರಿಗೆ ಹೊಸ ಟ್ಯಾಂಕರ್ ನಿರ್ಮಾಣ ಎಂದು ಹೇಗೆ ಬರೆದರು. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಪಕ್ಷದ ಕಾರ್ಯಕರ್ತ ಬಸವರಾಜ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಿಂದೆಯೂ ಸಹ ನಮ್ಮ ಪಕ್ಷದ ಯೂಥ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಉಮೇಶ್ ಜಮಗಿ‌ ಅವರ ಮೇಲೂ ಹಲ್ಲೆ ಮಾಡಿದ್ದರು. ಈ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಾವು ಸಹ ಪ್ರತಿ ಉತ್ತರ ನೀಡುವುದು ಅನಿವಾರ್ಯವಾಗಲಿದೆ ಎಚ್ಚರಿಸಿದರು.

ಕಠಳ್ಳಿ ಬಸವರಾಜ್ ಪ್ರಕರಣ ಎಸ್ಐಟಿಗೆ ನೀಡಬೇಕು: ಶಾಸಕ ಡಾ.ಸಿದ್ದಲಿಂಗಪ್ಪ

ಪಾಟೀಲ ಹಾಗೂ ಅವರ ಸಹೋದರರಿಂದ ಪದೇ ಪದೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈಚೆಗೆ ಕಠಳ್ಳಿ ಗ್ರಾಮದ ಬ‌ಸವರಾಜ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.‌ ಈ ಘಟನೆಯ ಪ್ರಮುಖ ಆರೋಪಿಗಳನ್ನು ಬಿಟ್ಟು ಬೇರೆ ಅವರಿಗೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ ಸಹ ಬಂಧಿಸುತ್ತಿಲ್ಲ. ಇನ್ನು ನಾಲ್ಕು ದಿನಗಳಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿ ಈ ಪ್ರಕರಣ ಎಸ್ಐಟಿಗೆ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ತಿಳಿಸಿದರು.

ಕಾರ್ಖಾನೆಗಳಿಂದ ಶಾಸಕರಿಗೆ ಹಣ ಫಿಕ್ಸಿಂಗ್: ಚುನಾವಣೆ ಸಂದರ್ಭದಲ್ಲಿ ಶಾಸಕರು ಹುಮನಾಬಾದ್ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಕೆಲವು ಕೆಮಿಕಲ್ ಕಾರ್ಖಾನೆಗಳು ಶಾಶ್ವತವಾಗಿ ಬಂದ್ ಮಾಡುತ್ತೇನೆ ಎಂದು ಹೇಳಿದ್ದರು. ಕೇವಲ ಎರಡ್ಮೂರು ತಿಂಗಳು ಅಷ್ಟೇ ಬಂದಾಗಿದ್ದ ಕಾರ್ಖಾನೆಗಳು ಈಗ ಮತ್ತೆ ಆರಂಭ ಆಗಿವೆ. ಈ ಹಿಂದೆ ನಡೆದ ಹುಮನಾಬಾದ್ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಇಲ್ಲಿಯ ಒಂದೊಂದು ಕಾರ್ಖಾನೆಗಳಿಂದ ₹2 ಲಕ್ಷವನ್ನು ಶಾಸಕರು ಪಡೆದುಕೊಂಡಿದ್ದಾರೆ ಎಂದು ರಾಜಶೇಖರ ಪಾಟೀಲ ಆರೋಪಿಸಿದರು.‌

ತಪ್ಪು ಇಲ್ಲದಿದ್ದರೆ ಹೊರ ಬನ್ನಿ: ಕಠಳ್ಳಿಯ ಬಸವರಾಜ ಅವರಿಗೆ ನನ್ನ ಸಹೋದರರು ಹಲ್ಲೆ ಮಾಡಿಲ್ಲ ಎಂದು ಶಾಸಕರು ಹೇಳುತ್ತಿದ್ದಾರೆ. ಹಲ್ಲೆ ಮಾಡದಿದ್ದರೆ ನಿಮ್ಮ ಸಹೋದರರಿಗೆ ಹೊರಗೆ ಓಡಾಡಲು ಹೇಳಿ. ಮತ್ತೆ ಏಕೆ ಪರಾರಿಯಾಗಿದ್ದಾರೆ. ಈ ಪ್ರಕರಣ ಆಗಿ 20ದಿನಗಳು ಕಳೆಯುತ್ತಿದೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇವರ ಬಂಧನಕ್ಕೆ ಈಗಾಗಲೇ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಜಿ.ಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ರಮೇಶ ಡಾಕುಳಗಿ, ಬಾಬು ಟೈಗರ್, ಶ್ರೀಮಂತ ಪಾಟೀಲ ತಾಳಮಡಗಿ, ದತ್ತಕುಮಾರ ಚಿದ್ರಿ, ಅಣ್ಯೆಪ್ಪ ವರನಾಳ , ದಿಲೀಪ್ ಕುಮಾರ್ ಬಗದಲ್ಕರ್, ಓಂಕಾರ ತುಂಬಾ, ಅಫ್ಸರ್ ಮಿಯ್ಯಾ, ಉಮೇಶ್ ಜಮಗಿ, ವೀರಪ್ಪ ಧುಮ್ಮನಸೂರ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.