ಬೀದರ್: ರಕ್ಷಾ ಬಂಧನ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಡಗರ–ಸಂಭ್ರಮದಿಂದ ಆಚರಿಸಲಾಯಿತು.
ಸಹೋದರಿಯರು ಹೊಸ ಬಟ್ಟೆಗಳನ್ನು ಧರಿಸಿಕೊಂಡು, ಮನೆಯಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ಆನಂತರ ಸಹೋದರರಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಹರಸಿದರು. ಸಹೋದರರು ಸಹೋದರಿಯರ ಕಾಲುಗಳಿಗೆ ನಮಿಸಿ, ಅವರಿಗೆ ಕಾಣಿಕೆಗಳನ್ನು ಕೊಟ್ಟರು. ಬಳಿಕ ಮನೆ ಮಂದಿಯೆಲ್ಲ ಸಿಹಿಯೂಟ ಮಾಡಿದರು. ಕೆಲ ಸ್ವಯಂ ಸೇವಾ ಸಂಸ್ಥೆಗಳು ನಿರ್ಗತಿಕರು, ಭಿಕ್ಷುಕರಿಗೆ ರಾಖಿ ಕಟ್ಟಿದರು. ಕಾರಾಗೃಹದಲ್ಲೂ ರಕ್ಷಾ ಬಂಧನ ಆಚರಿಸಲಾಯಿತು.
ಇನ್ನು, ಮೂರನೇ ಶ್ರಾವಣ ಸೋಮವಾರದ ಅಂಗವಾಗಿ ಜನ ನಗರದ ಪಾಪನಾಶ ದೇವಸ್ಥಾನಕ್ಕೆ ತೆರಳಿ ಶಿವಲಿಂಗದ ದರ್ಶನ ಪಡೆದರು. ಶ್ರಾವಣ ಸೋಮವಾರದ ದಿನವೇ ರಕ್ಷಾ ಬಂಧನ ಬಂದಿದ್ದರಿಂದ ಜನರ ಸಂಭ್ರಮ ಹೆಚ್ಚಿತ್ತು. ದಿನವಿಡೀ ಬಿಟ್ಟು ಬಿಟ್ಟು ಜಿಟಿಜಿಟಿ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಎಂದಿಗಿಂತ ಜನರ ಓಡಾಟ ಕಡಿಮೆ ಇತ್ತು.
ಸಹೋದರರಿಂದ ಉಡುಗೊರೆ
ಜನವಾಡ: ಸಹೋದರ-ಸಹೋದರಿಯ ಬಾಂಧವ್ಯ ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬವನ್ನು ಬೀದರ್ ತಾಲ್ಲೂಕಿನ ಎಲ್ಲೆಡೆ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಜನವಾಡ, ಅಲಿಯಂಬರ್, ಮಾಳೆಗಾಂವ್, ಚಿಲ್ಲರ್ಗಿ, ಕಮಠಾಣ, ಬಾವಗಿ, ಬಗದಲ್ ಸೇರಿದಂತೆ ಪ್ರತಿ ಗ್ರಾಮಗಳ ಮನೆ ಮನೆಗಳಲ್ಲೂ ಹಬ್ಬದ ಸಡಗರ ಮನೆ ಮಾಡಿತ್ತು.
ಸಹೋದರಿಯರು ಸಹೋದರರ ಹಣೆಗೆ ತಿಲಕವಿಟ್ಟು ರಾಖಿ ಕಟ್ಟಿ ಆರತಿ ಬೆಳಗಿದರು. ಸಹೋದರರು ಪ್ರೀತಿಯಿಂದ ಸೀರೆ, ಹಣ ಉಡುಗೊರೆಯಾಗಿ ನೀಡಿದರು.
ರಕ್ಷಾ ಬಂಧನದ ನಿಮಿತ್ತ ಈ ಬಾರಿ ಬಗೆ ಬಗೆಯ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು. ಅಕ್ಕ-ತಂಗಿಯರು ಅಣ್ಣ- ತಮ್ಮಂದಿರಿಗೆ ಕಟ್ಟಲು ತಮಗೆ ಇಷ್ಟವಾದ ರಾಖಿಗಳನ್ನು ಖರೀದಿಸಿದರು.
ಅನೇಕ ಸಹೋದರಿಯರು ಹಬ್ಬದ ಮುನ್ನಾ ದಿನ ರಾಖಿ ಖರೀದಿಸಿದರೆ, ಇನ್ನು ಅನೇಕರು ಹಬ್ಬದ ದಿನ ರಾಖಿ ಕೊಂಡುಕೊಂಡರು.
ಆಶಾ ಕಾರ್ಯಕರ್ತೆಯರೊಂದಿಗೆ ಆಚರಣೆ
ಔರಾದ್: ಪಟ್ಟಣದಲ್ಲಿ ಶಾಸಕ ಪ್ರಭು ಚವಾಣ್ ಅವರು ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಬಂಜಾರ ಸಮುದಾಯದ ಮಹಿಳೆಯರು ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಜೊತೆ ಸೋಮವಾರ ರಕ್ಷಾ ಬಂಧನ ಆಚರಿಸಿದರು.
ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು ಸಾಲಾಗಿ ಬಂದು ಶಾಸಕರಿಗೆ ರಾಖಿ ಕಟ್ಟಿ ಶುಭ ಹಾರೈಸಿದರು. ಶಾಸಕರು ಮಹಿಳೆಯರಿಗೆ ಗೌರವ ಕಾಣಿಕೆ ನೀಡಿದರು.
‘ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನಕ್ಕೆ ವಿಶೇಷ ಮಹತ್ವವಿದೆ. ಇದು ಅಣ್ಣ-ತಂಗಿಯರ ನಡುವೆ ವಾತ್ಸಲ್ಯ ಬೆಳೆಸುವ ಹಬ್ಬವಾಗಿದೆ. ಸಹೋದರರಿಂದ ರಕ್ಷಣೆ ಬಯಸಿ ಹೆಣ್ಣು ಮಕ್ಕಳು ರಾಖಿ ಕಟ್ಟುತ್ತಾರೆ. ಅಕ್ಕ ತಂಗಿಯರಿಗೆ ರಕ್ಷಣೆ ಕೊಡುವ ಸಹೋದರರಿಗೆ ಅವರ ಆಶೀರ್ವಾದ ಇದ್ದೇ ಇರುತ್ತದೆ’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ ಕೌಟಗೆ, ತಾಲ್ಲೂಕು ಅಧ್ಯಕ್ಷೆ ಶಕುಂತಲಾ ಮುತ್ತಂಗೆ, ಗೀತಾ ಗೌಡ, ಕಲ್ಪನಾ ಪಾಟೀಲ, ಭಾರತಿ ಬೋಚರೆ, ಕೋಮಲ್ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯೆ ಪ್ರೇರಣಾ ಬಾಬು ರಾಠೋಡ, ಮುಖಂಡ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಧೊಂಡಿಬಾ ನರೋಟೆ, ಕೇರಬಾ ಪವಾರ್ ಹಾಗೂ ಸಂಜು ವಡೆಯರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.