ಬೀದರ್: ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ಈ ರಸ್ತೆಗಳಿಗೆಲ್ಲ ವಿಶೇಷ ಕಳೆ ಬರುತ್ತದೆ. ಸಮಯ ಮೀರುತ್ತಿದ್ದಂತೆ ಜನದಟ್ಟಣೆ ಹೆಚ್ಚಾಗುತ್ತದೆ. ತರಹೇವಾರಿ ಹಣ್ಣುಗಳು, ಉಡುಪುಗಳು, ಖರ್ಜೂರ... ಹೀಗೆ ಒಂದಲ್ಲ ಎರಡಲ್ಲ ಬಗೆಬಗೆಯ ಖಾದ್ಯಗಳು, ವಸ್ತ್ರಗಳು. ಥೇಟ್ ಜಾತ್ರೆಯ ಅನುಭವ...
ಈದ್–ಉಲ್–ಫಿತ್ರ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ರಂಜಾನ್ ಮಾಸದ ಉಪವಾಸ ವ್ರತಾಚರಣೆಯು ಇನ್ನೇನು ಮುಗಿಯಲು ಬರುತ್ತಿದೆ. ಹಬ್ಬಕ್ಕೆ ಎಲ್ಲರೂ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ನಗರದ ಮಾರುಕಟ್ಟೆಗಳಲ್ಲೀಗ ಜನಜಾತ್ರೆ, ಸಡಗರದ ವಾತಾವರಣ ಕಂಡು ಬರುತ್ತಿದೆ.
ನಗರದ ನಯಾಕಮಾನ್, ಶಮಹಮೂದ್ ಗಾವಾನ್ ವೃತ್ತ, ಚೌಬಾರ, ಹಳೆ ತರಕಾರಿ ಮಾರುಕಟ್ಟೆ, ದರ್ಜಿ ಗಲ್ಲಿಗಳೆಲ್ಲ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಮಹಮೂದ್ ಗಾವಾನ್ ವೃತ್ತವಂತೂ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಮಹಮೂದ್ ಗಾವಾನ್ ಸಮೀಪದ ಹಳೆ ತರಕಾರಿ, ಹಣ್ಣಿನ ಮಾರುಕಟ್ಟೆ ಒಂದು ಕಾಲದಲ್ಲಿ ಇಡೀ ನಗರದ ಪ್ರಮುಖ ಮಾರಾಟದ ಕೇಂದ್ರವಾಗಿತ್ತು. ಊರ ಮಂದಿಯೆಲ್ಲ ಅಲ್ಲಿಗೆ ಹೋಗಿ ತರಕಾರಿ, ಹಣ್ಣು ಖರೀದಿಸುತ್ತಿದ್ದರು. ನಗರ ಬೆಳೆದಂತೆಲ್ಲ ಅಲ್ಲಲ್ಲಿ ಅನೇಕ ಸಣ್ಣ ಮಾರುಕಟ್ಟೆಗಳು ತಲೆ ಎತ್ತಿವೆ. ಹಾಗಂತ ಹಳೆ ಮಾರುಕಟ್ಟೆಯ ಕಳೆ ಈಗಲೂ ಹಾಗೆಯೇ ಇದೆ.
ಸ್ಥಳೀಯವಾಗಿ ಬೆಳೆದ ಹಣ್ಣು, ತರಕಾರಿಯಷ್ಟೇ ಅಲ್ಲ, ನೆರೆ ಜಿಲ್ಲೆ, ನೆರೆ ರಾಜ್ಯ, ದೇಶ–ವಿದೇಶಗಳಿಂದ ಅಲ್ಲಿಗೆ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿಯೇ ತರಹೇವಾರಿ ಹಣ್ಣುಗಳು ವರ್ಷದ ಬಹುತೇಕ ದಿನಗಳಲ್ಲಿ, ಅದು ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಹೀಗಾಗಿಯೇ ಹೆಚ್ಚಿನವರು ಹಳೆ ಮಾರುಕಟ್ಟೆಗೆ ಹೋಗಿ ಖರೀದಿಸಲು ಇಷ್ಟಪಡುತ್ತಾರೆ.
ಈಗ ಹಳೆ ಮಾರುಕಟ್ಟೆಯ ಪ್ರಮುಖ ರಸ್ತೆ, ಪರಿಸರವೆಲ್ಲ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಒಂದು ಕಡೆ ಬಗೆಬಗೆಯ ಹಣ್ಣುಗಳು, ಅದರ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಶಾವಿಗೆ, ಮದರಂಗಿ, ಖರ್ಜೂರ, ಗೋಡಂಬಿ, ಬಾದಾಮಿ, ಸಿದ್ಧ ಉಡುಪುಗಳು, ಚಪ್ಪಲಿ, ಸುಗಂಧ ದ್ರವ್ಯ, ಅಲಂಕಾರಿಕ ವಸ್ತುಗಳು ಹೀಗೆ ಅನೇಕ ವಿಧವಾದ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಮುಸ್ಲಿಂರು ಸಂಜೆ ‘ನಮಾಜ್’ ಮುಗಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಖರೀದಿಗೆ ಹೋಗುತ್ತಿದ್ದಾರೆ. ಹಬ್ಬಕ್ಕೆ ಕೆಲವೇ ದಿನಗಳಿರುವುದರಿಂದ ಖರೀದಿ ಭರಾಟೆ ಜೋರಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ.
ಈದ್–ಉಲ್–ಫಿತ್ರ ಹಬ್ಬಕ್ಕೆ ದೇಶ–ವಿದೇಶಗಳಿಂದ ಬಟ್ಟೆ, ಅಲಂಕಾರಿಕ ವಸ್ತುಗಳು ಬಂದಿರುವುದರಿಂದ ಮುಸ್ಲಿಂರಷ್ಟೇ ಅಲ್ಲ, ಹಿಂದೂಗಳು ಸಹ ಮಾರುಕಟ್ಟೆಗೆ ಹೋಗಿ ಅವರಿಗೆ ಬೇಕಾದುದ್ದನ್ನು ಖರೀದಿಸುತ್ತಿದ್ದಾರೆ. ಇದರಿಂದ ಜನಜಂಗುಳಿ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಇದು ಸೌಹಾರ್ದತೆಯ ಸಂಕೇತ.
ಇದು ಮಾರುಕಟ್ಟೆಯ ಚಿತ್ರಣವಾದರೆ, ಹೋಟೆಲ್‌ಗಳೇನೂ ಕಮ್ಮಿ ಇಲ್ಲ ಎಂಬಂತೆ ಅನೇಕ ಖಾದ್ಯಗಳಿಂದ ಗಮನ ಸೆಳೆಯುತ್ತಿವೆ. ಅದರಲ್ಲೂ ರಂಜಾನ್ ಮಾಸಕ್ಕೆಂದೆ ವಿಶೇಷವಾಗಿ ತಯಾರಿಸಲಾಗುವ ಹರೀಸ್, ದಹಿ ವಡೆಗೆ ಹೆಚ್ಚಿನ ಬೇಡಿಕೆ. ಹೀಗಾಗಿಯೇ ಬಹುತೇಕ ಹೋಟೆಲ್‌ಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆದು ಮಾರಾಟ ಮಾಡಲಾಗುತ್ತಿದೆ. ಸಮೋಸಾ, ಮಿರ್ಚಿ, ಮಿಸಳ್, ಚೂಡಾ, ಚಿಕ್‌ನ್ ಬಿರಿಯಾನಿ, ಮಟನ್ ಬಿರಿಯಾನಿ, ಕಬಾಬ್ ಸೇರಿದಂತೆ ಅನೇಕ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಇದಲ್ಲದೇ ಲಸ್ಸಿ, ಇರಾನಿ ಚಹಾಕ್ಕೂ ಹೆಚ್ಚಿನ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಇರಾನಿ ಚಹಾ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮುಸ್ಲಿಂರಷ್ಟೇ ಅಲ್ಲ, ಹಿಂದೂಗಳು ಸೇರಿದಂತೆ ಅನ್ಯ ಧರ್ಮಿಯರು ಇರಾನಿ ಚಹಾ ಕುಡಿಯಲು ಹೆಚ್ಚು ಇಷ್ಟಪಡುತ್ತಿದ್ದಾರೆ. ಊಟ, ಉಪಾಹಾರ, ಚಹಾಕ್ಕೆ ಜಾತಿ, ಧರ್ಮಗಳ ಹಂಗಿಲ್ಲ ಎನ್ನುತ್ತಾರೆ ಚಹಾ ಅಂಗಡಿಯ ರಸೂಲ್.
ಖರ್ಜೂರ ಇಲ್ಲದೆ ಉಪವಾಸ ಅಪೂರ್ಣ
ರಂಜಾನ್ ಪವಿತ್ರ ಮಾಸದಲ್ಲಿ ಖರ್ಜೂರಕ್ಕೆ ವಿಶೇಷ ಮಹತ್ವ ಇದೆ. ದಿನವಿಡೀ ಉಪವಾಸ ಉಳಿದವರು ಸಂಜೆ ಎರಡು ಖರ್ಜೂರ ತಿಂದು ಉಪವಾಸ ಕೊನೆಗೊಳಿಸುತ್ತಾರೆ. ಬಳಿಕ ಅಲ್ಪ ಆಹಾರ ಸೇವಿಸುತ್ತಾರೆ. ಖರ್ಜೂರದಲ್ಲಿ ಆರೋಗ್ಯಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳು ಇರುವುದರಿಂದ ಅದನ್ನು ತಿಂದ ನಂತರವೇ ಉಪವಾಸ ವ್ರತಾಚರಣೆ ಮುಗಿಯುತ್ತದೆ. ಖರ್ಜೂರಕ್ಕೆ ಹಬ್ಬದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಇರಾನ್ ಇರಾಕ್ ಸೌದಿ ಅರೇಬಿಯಾ ಸೇರಿದಂತೆ ಹಲವು ಅರಬ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅವರವರು ಅವರ ಆರ್ಥಿಕ ಮಟ್ಟಕ್ಕೆ ಅನುಸಾರವಾಗಿ ಖರ್ಜೂರಗಳನ್ನು ಖರೀದಿಸುತ್ತಾರೆ. ₹200 ಕೆ.ಜಿ.ಯಿಂದ ₹1500 ಕೆ.ಜಿ ವರೆಗಿನ ಖರ್ಜೂರಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ.
ಹಬ್ಬಕ್ಕೆ ಬೆಲೆ ಏರಿಕೆ ಬಿಸಿ
ಬಹುತೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಪ್ರತಿಯೊಂದು ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ. ಎಲ್ಲವೂ ದುಬಾರಿ ಆಗಿರುವುದರಿಂದ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ‘ಹಿಂದೆ ಹಬ್ಬಕ್ಕೆ ಕನಿಷ್ಠ ಏನಿಲ್ಲವೆಂದರೂ ಒಬ್ಬ ವ್ಯಕ್ತಿ ಎರಡರಿಂದ ಮೂರು ತರಹದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತಿದ್ದರು. ಆದರೆ ಈಗ ಅದು ಕಂಡು ಬರುತ್ತಿಲ್ಲ. ಬಹುತೇಕರು ಒಂದರ ಮೊರೆ ಹೋಗುತ್ತಿದ್ದಾರೆ. ದುಬಾರಿ ಬಟ್ಟೆ ವಸ್ತುಗಳ ಖರೀದಿಗೆ ಯಾರೂ ಮೊರೆ ಹೋಗುತ್ತಿಲ್ಲ. ಬದಲಾಗಿ ಅಗ್ಗದ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಇದು ಬೆಲೆ ಏರಿಕೆಯ ಪರಿಣಾಮ’ ಎಂದು ಬಟ್ಟೆ ವ್ಯಾಪಾರಿ ಮೊಹಮ್ಮದ್ ನಯಾಬ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅತ್ಯಂತ ಪವಿತ್ರ ಹಬ್ಬ’
ಮುಸ್ಲಿಮರಿಗೆ ಈದ್ ಉಲ್ ಫಿತ್ರ ಅತ್ಯಂತ ಪವಿತ್ರವಾದ ಹಬ್ಬ. ರಂಜಾನ್ ಮಾಸದಲ್ಲಿ ಬಹುತೇಕರು ಉಪವಾಸ ವ್ರತವನ್ನು ಆಚರಿಸುವುದರ ಮೂಲಕ ಒಳ್ಳೆಯ ವ್ಯಕ್ತಿಯಾಗಿ ಎಲ್ಲರೊಂದಿಗೆ ಪ್ರೀತಿ ಸೌಹಾರ್ದದಿಂದ ಬದುಕುವ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮುಸ್ಲಿಮರಿಗೆ ಇದು ಅತಿ ದೊಡ್ಡ ಹಬ್ಬ. –ಮೊಹಮ್ಮದ್ ನಿಜಾಮುದ್ದೀನ್ ನಿವೃತ್ತ ಪ್ರಾಚಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.