ಬೀದರ್: ‘ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಹಲವು ಕಡೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ‘ಮೋದಿ ಗೋ ಬ್ಯಾಕ್’ ಎಂಬು ಘೋಷಣೆಗಳು ಎಲ್ಲ ಕಡೆ ಕೇಳಿ ಬರುತ್ತಿವೆ. ಬರ ಪರಿಹಾರದ ವಿಷಯದಲ್ಲಿ ಕರ್ನಾಟಕದ ರೈತರಿಗೆ ಘೋರ ಅನ್ಯಾಯ ಮಾಡಿರುವ ಮೋದಿ ಅವರ ಡಿಎನ್‌ಎ ಕರ್ನಾಟಕ ವಿರೋಧಿಯಾಗಿದೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು.
ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ಅವರು ಕರ್ನಾಟಕದ ರೈತರಿಗೆ ಅನ್ಯಾಯ ಮಾಡಿದ್ದಾರೆ. ಏಳು ತಿಂಗಳ ಹಿಂದೆ ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಲಿಲ್ಲ. ಕನಿಷ್ಠ ಒಂದು ಸಭೆ ಕೂಡ ಕರೆಯಲಿಲ್ಲ ಎಂದರು.
ಕರ್ನಾಟಕದ ರೈತರಿಗೆ ಖಾಲಿ ಚೊಂಬು ಕೊಟ್ಟಿರುವ ಬಿಜೆಪಿಗೂ ಜನ ಚೊಂಬು ಕೊಡುತ್ತಾರೆ–ಸುರ್ಜೇವಾಲಾ
ಮೋದಿ ‘ಹೋಪ್ ಸೇ ಹೆಟ್ರೇಡ್’
‘ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಹೋಪ್ ಸೇ ಹೆಟ್ರೇಡ್’ ಆಗಿ ಬದಲಾಗಿದ್ದಾರೆ. ಇದು ಅವರು ವೈಚಾರಿಕವಾಗಿ ರಾಜಕೀಯ ದಿವಾಳಿ ಆಗಿರುವುದು ತೋರಿಸುತ್ತದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
2014ರಲ್ಲಿ ಮೋದಿಯವರು ಹೊಸ ಆಶಾಭಾವ ಮೂಡಿಸಿದ್ದರು. ಈಗ ದ್ವೇಷದ ಮಾತುಗಳನ್ನು ಆಡುತ್ತಿದ್ದಾರೆ. ಹಿಂದೂ ಮುಸ್ಲಿಂ ವಿಭಜನೆಯ ಮಾತುಗಳನ್ನು ಆಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೈಯ್ಯುವುದು, ಸಂವಿಧಾನ ಮುಗಿಸುವುದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಸಾಂವಿಧಾನಿಕ ಅಧಿಕಾರಗಳನ್ನು ಮೊಟಕುಗೊಳಿಸುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಖಾಲಿ ಚೊಂಬು ಕೈಯಲ್ಲಿ ಹಿಡಿದುಕೊಂಡು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲು ಏನೂ ಉಳಿದಿಲ್ಲ. ಮೋದಿಯವರ ಹತ್ತು ವರ್ಷಗಳ ಆಡಳಿತಕ್ಕೆ ಎಷ್ಟು ಅಂಕ ಕೊಡುವಿರಿ ಎಂದು ಯಾರೋ ಒಬ್ಬರು ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರಿಗೆ ಕೇಳಿದ್ದರು. ಅವರು ಏನಾದರೂ ಮಾಡಿದರೆ ತಾನೇ ನಾನು ಅವರಿಗೆ ಅಂಕ ಕೊಡಲಿ ಎಂದು ಜೋಶಿ ಮರು ಪ್ರಶ್ನೆ ಹಾಕಿದ್ದರು. ಅವರ ರಾಜಕೀಯ ಗುರುಗಳೇ ಅವರ ಕುರಿತು ಹೀಗೆ ಹೇಳಿದ್ದಾರೆ ಎಂದು ನೆನಪಿಸಿದರು.
ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಬರ ಪರಿಹಾರ, ಆದಾಯದ ಪಾಲು ಸೇರಿದಂತೆ ಎಲ್ಲ ವಿಚಾರದಲ್ಲೂ ಘೋರ ಅನ್ಯಾಯ ಮಾಡಿ ಖಾಲಿ ಚೊಂಬು ನೀಡಿರುವ ಬಿಜೆಪಿಗೆ ಈ ಬಾರಿ ರಾಜ್ಯದ ಜನರು ಚುನಾವಣೆಯಲ್ಲಿ ಖಾಲಿ ಚೊಂಬನ್ನೇ ನೀಡುತ್ತಾರೆ ಎಂದು ಭವಿಷ್ಯ ನುಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿಯ ಕೇಂದ್ರ ಸರ್ಕಾರ ಕರ್ನಾಟಕದ ರೈತರೊಂದಿಗೆ, ಜನರೊಂದಿಗೆ ದ್ವೇಷದ ರಾಜಕಾರಣ ಮಾಡುತ್ತಿದೆ. ಭೀಕರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಂಚನೆ ಮಾಡಿ, ರಾಜ್ಯದ ಅನ್ನದಾತರಿಗೆ ಘೋರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ಈ ಬಾರಿ ಬರ ಪರಿಸ್ಥಿತಿ ಎದುರಾಗಿದೆ. ರೈತರ ಬೆಳೆ ಹಾನಿ ಪರಿಹಾರ ನೀಡಲು, ಕುಡಿಯುವ ನೀರಿನ ವ್ಯವಸ್ಥೆ, ಬರ ಪೀಡಿತ ಜಿಲ್ಲೆಗಳಲ್ಲಿ 90 ದಿನಗಳ ಉದ್ಯೋಗ ನೀಡಲು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರದಿಂದ ಎನ್.ಡಿ.ಆರ್.ಎಫ್. ನಿಯಮಾವಳಿಗಳ ಪ್ರಕಾರ ₹18 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕಳೆದ ಸೆಪ್ಟೆಂಬರ್‌ನಲ್ಲಿಯೇ ಮನವಿ ಮಾಡಲಾಗಿತ್ತು. ಆದರೆ, ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಹಣ ಬಿಡುಗಡೆ ಮಾಡಲಿಲ್ಲ. ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಹೋದ ಬಳಿಕ ₹3,400 ಕೋಟಿ ರೂಪಾಯಿ ಘೋಷಿಸಿದೆ. ಅಂದರೆ ರಾಜ್ಯ ಸರ್ಕಾರ ₹100 ಕೇಳಿದರೆ ₹19 ರೂಪಾಯಿ ರೈತರಿಗೆ ಪರಿಹಾರ ಕೊಟ್ಟಿದ್ದಾರೆ. ಮೋದಿ, ಅವರು ಯಾವ ಮುಖ ಹೊತ್ತುಕೊಂಡು ಕರ್ನಾಟಕಕ್ಕೆ ಬರುತ್ತಾರೆ. ಕರ್ನಾಟಕಕ್ಕೆ ಬರಲು ಅವರಿಗೆ ಅಧಿಕಾರವೇ ಇಲ್ಲ. ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು. ಮಿಗಿಲಾಗಿ ಜನತಾ ನ್ಯಾಯಾಲಯದಲ್ಲಿ ಈ ವಿಷಯ ಇಡುತ್ತೇವೆ ಎಂದು ಹೇಳಿದರು.
ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ, ಮುಖಂಡರಾದ ರಾಜಶೇಖರ ಪಾಟೀಲ ಹುಮನಾಬಾದ್, ಅಶೋಕ ಖೇಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.