ADVERTISEMENT

ಬೀದರ್: ಜಿಂಕೆ, ಕೃಷ್ಣಮೃಗ ಆವಾಸ ಸ್ಥಾನದಲ್ಲಿ ಗಣಿಗಾರಿಕೆ

ಹಗಲು ರಾತ್ರಿ ಅವ್ಯಾಹತವಾಗಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಸೆಪ್ಟೆಂಬರ್ 2024, 6:44 IST
Last Updated 25 ಸೆಪ್ಟೆಂಬರ್ 2024, 6:44 IST
ಬೀದರ್‌ ತಾಲ್ಲೂಕಿನ ಬೆಳ್ಳೂರು ಸಮೀಪ ಯಂತ್ರ ಬಳಸಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು
ಬೀದರ್‌ ತಾಲ್ಲೂಕಿನ ಬೆಳ್ಳೂರು ಸಮೀಪ ಯಂತ್ರ ಬಳಸಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು   

ಬೀದರ್: ತಾಲ್ಲೂಕಿನ ಬೆಳ್ಳೂರು ಗ್ರಾಮ ಸಮೀಪದ ಜಿಂಕೆ, ಕೃಷ್ಣಮೃಗಗಳ ಆವಾಸ ಸ್ಥಾನದಲ್ಲಿ ಅವ್ಯಾಹತವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅಳಿವಿನಂಚಿನ ಪ್ರಾಣಿಗಳಿಗೆ ಕುತ್ತು ಬಂದಿದೆ.

ಬೆಳ್ಳೂರು ಗ್ರಾಮವು ಚಿಟ್ಟಾ ಹಾಗೂ ಅಮಲಾಪೂರ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶದೊಂದಿಗೆ ಹೊಂದಿಕೊಂಡಿದೆ. ಇದರಿಂದಾಗಿ ಜಿಂಕೆ, ಕೃಷ್ಣಮೃಗಗಳು ಈ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿವೆ. ಅವುಗಳಿಗೆ ಬೇಕಾದ ಸೂಕ್ತ ಹುಲ್ಲುಗಾವಲಿನ ಬಯಲು ಪ್ರದೇಶ ಇಲ್ಲಿದೆ. ಅವುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ.

ಇನ್ನೊಂದೆಡೆ ಬೆಳ್ಳೂರು ಗ್ರಾಮದ ಸನಿಹದಲ್ಲೇ ಭಾರತೀಯ ವಾಯುಪಡೆಗೆ ಸೇರಿದ ವಿಮಾನ ತರಬೇತಿ ಕೇಂದ್ರ ಇದ್ದು, ಹೆಚ್ಚಿನ ಭದ್ರತಾ ವ್ಯವಸ್ಥೆ ಇದೆ. ಹಾಗಾಗಿ ಹೆಚ್ಚಾಗಿ ಜನ ಓಡಾಡದ ಕಾರಣ ವನ್ಯಜೀವಿಗಳು ಮುಕ್ತವಾಗಿ ವಿಹರಿಸುತ್ತವೆ.

ADVERTISEMENT

ಆದರೆ, ವಾಯುಪಡೆ ತರಬೇತಿ ಕೇಂದ್ರದಿಂದ ಸ್ವಲ್ಪ ದೂರದಲ್ಲಿರುವ ಬೆಳ್ಳೂರು ಸಮೀಪ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಹಗಲು–ರಾತ್ರಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಗಣಿಗಾರಿಕೆಯಿಂದ ಈಗಾಗಲೇ ಹಲವೆಡೆ ಕಂದಕಗಳು ನಿರ್ಮಾಣಗೊಂಡು, ಮಳೆ ನೀರು ತುಂಬಿಕೊಂಡಿದೆ. ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿರುವುದರಿಂದ ಜಿಂಕೆ, ಕೃಷ್ಣಮೃಗಗಳ ಆವಾಸ ಸ್ಥಾನಕ್ಕೆ ಕಂಟಕ ಎದುರಾಗಿದೆ. ಅವುಗಳಿಗೆ ಭದ್ರತೆ ಇಲ್ಲದಂತಾಗಿದೆ. ಇದಕ್ಕೆ ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.

‘ಜಿಂಕೆ, ಕೃಷ್ಣಮೃಗಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ಘೋಷಿಸಿ ಶೆಡ್ಯೂಲ್‌ 1ರಲ್ಲಿ ಸೇರಿಸಲಾಗಿದೆ. ಬೆಳ್ಳೂರು ಸಮೀಪದಲ್ಲಂತೂ ಜಿಂಕೆ, ಕೃಷ್ಣಮೃಗಗಳು ದೊಡ್ಡ ಸಂಖ್ಯೆಯಲ್ಲಿವೆ. ಅಲ್ಲಿ ಏಕಾಏಕಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರಿಂದ ಅವುಗಳ ಆವಾಸ ಸ್ಥಾನಕ್ಕೆ ಧಕ್ಕೆ ಉಂಟಾಗಿದೆ. ಇದನ್ನು ತಡೆಯಲು ಅರಣ್ಯ ಇಲಾಖೆ ತುರ್ತಾಗಿ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. ಈ ವಿಷಯ ಮುಂದಿನ ಸಭೆಯಲ್ಲೂ ಪ್ರಸ್ತಾಪಿಸುತ್ತೇನೆ’ ಎಂದು ಪರಿಸರ ಹೋರಾಟಗಾರ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್‌ ಮಾಳಗೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೆಳ್ಳೂರು ಸಮೀಪ ಜಿಂಕೆಗಳ ಹಿಂಡು –ಪ್ರಜಾವಾಣಿ ಚಿತ್ರಗಳು
ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಗಣಿ ಇಲಾಖೆಯ ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ
–ವಾನತಿ ಎಂ.ಎಂ., ಡಿಎಫ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.