ADVERTISEMENT

ಹುಲಸೂರ | ಆರ್‌ಟಿಸಿಗೆ ಆಧಾರ್ ಜೋಡಣೆ: ರೈತರ ಹಿಂದೇಟು

ನನ್ನ ಆಸ್ತಿ ಅಭಿಯಾನ: ಹಳ್ಳಿಗಳಲ್ಲಿ ಕಂದಾಯ ಇಲಾಖೆ ನೌಕರರ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 16:02 IST
Last Updated 3 ಜೂನ್ 2024, 16:02 IST
ಹುಲಸೂರ ಪಟ್ಟಣದಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಮುಂದಾದ ರೈತರಿಗೆ ಗ್ರಾಮ ಲೆಕ್ಕಿಗರು ಸಹಾಯ ಮಾಡಿದರು
ಹುಲಸೂರ ಪಟ್ಟಣದಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಮುಂದಾದ ರೈತರಿಗೆ ಗ್ರಾಮ ಲೆಕ್ಕಿಗರು ಸಹಾಯ ಮಾಡಿದರು   

ಹುಲಸೂರ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಕಂದಾಯ ಇಲಾಖೆ ಚಾಲನೆ ನೀಡಿದೆ. ಆದರೆ, ರೈತರಲ್ಲಿ ಈ ಬಗ್ಗೆ ಇನ್ನೂ ಜಾಗೃತಿ ಇಲ್ಲದಿರುವುದು ಜೋಡಣೆ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.

ತಾಲ್ಲೂಕಿನಲ್ಲಿ ನನ್ನ ಆಸ್ತಿ ಅಭಿಯಾನದಡಿ ಭೂಮಿ ವಾರಸುದಾರರಿಗೆ ಉಚಿತ ನೋಂದಣಿ ಮಾಡಿಕೊಡಲಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯ ಬೇಸಾಯಗಾರರಿಗೆ ನೇರವಾಗಿ ಸಿಗಲಿದೆ. ಪದೇಪದೆ ಆರ್‌ಟಿಸಿ ಪಡೆಯುವ ಅವಶ್ಯಕತೆ ತಪ್ಪಲಿದೆ. ಗ್ರಾಮ ಲೆಕ್ಕಿಗರು ಇದರ ಮಹತ್ವ ಮನದಟ್ಟು ಮಾಡಿ ಮನೆಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕೆಲಸ ಮಾಡುತ್ತಿದ್ದು, ಸಾಗುವಳಿದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

‘ಕೃಷಿಕರು ಆರ್‌ಟಿಸಿ–ಆಧಾರ್ ಜೋಡಣೆ ಕೆಲಸ ಮುಗಿಸಿದರೆ ನಕಲಿಗೆ ಅವಕಾಶ ಇಲ್ಲ. ಬೆಳೆ ಪರಿಹಾರ, ಮ್ಯುಟೇಶನ್ ಸೇರಿ ಎಲ್ಲ ಸವಲತ್ತು ಪಡೆಯಲು ಸುಲಭವಾಗಲಿದೆ. ಕಚೇರಿಗೆ ಅಲೆಯುವ ಪ್ರಸಂಗ ತಪ್ಪಲಿದೆ. ಕೃಷಿ ಭೂಮಿ ಒಡೆತನದ ದಾಖಲೆ ಅಧಿಕೃತವಾಗಿ ಸಿಗಲಿದೆ. ಈ ದಿಸೆಯಲ್ಲಿ ಬೇಸಾಯಗಾರರ ಮನೆಗಳಿಗೆ ತೆರಳಿ ನನ್ನ ಆಸ್ತಿ ಅಭಿಯಾನ ಜಾಗೃತಿ ಮತ್ತು ನೋಂದಣಿ ಮಾಡಲಾಗುತ್ತಿದೆ’ ಎಂದು ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಹೇಳಿದರು.

ADVERTISEMENT

‘ಬೆಳಗಿನ ಸಮಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಬಂದು ಪಹಣಿಗೆ ಆಧಾರ್ ಜೋಡಣೆ ಮಾಡಿದ್ದಾರೆ. ಇದರಿಂದ ವೃದ್ಧರು ಮತ್ತು ಮಹಿಳಾ ಕೃಷಿಕರಿಗೆ ಅನುಕೂಲ ಆಗಿದೆ. 10 ನಿಮಿಷದಲ್ಲಿ ಪ್ರಕ್ರಿಯೆ ಮುಗಿಯುತ್ತದೆ. ನಮ್ಮ ಫೋಟೊ ಮತ್ತು ವಿಳಾಸ ಪಹಣಿಯಲ್ಲಿ ಕೂರುತ್ತದೆ’ ಎಂದು ಹುಲಸೂರ ಗ್ರಾಮದ ಬಾಲಾಜಿ ಕುಲಕರ್ಣಿ ಹೇಳಿದರು.

ಸರ್ಕಾರದ ಸೌಲಭ್ಯ ಪಡೆಯಿರಿ: ‘ರೈತರು ಸ್ವಯಂ ಪ್ರೇರಿತರಾಗಿ ಆಧಾರ್ ಜೋಡಣೆ ಮಾಡಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ, ಗ್ರಾಮ ಮಟ್ಟದಲ್ಲಿ ಸಿಬ್ಬಂದಿ ಗಣಕಯಂತ್ರದೊಂದಿಗೆ ಧಾವಿಸಿ, ರೈತರಿಗೆ ಮನದಟ್ಟು ಮಾಡಿ ಜೋಡಣೆ ಕಾರ್ಯ ಮಾಡುತ್ತಿದ್ದಾರೆ. ಕಂದಾಯ ನಿರೀಕ್ಷಕರು, ಕಂದಾಯ ಸಿಬ್ಬಂದಿ ಗ್ರಾಮಕ್ಕೆ ಬಂದಾಗ ರೈತರು ಸಹಕಾರ ನೀಡಬೇಕು’ ಎಂದು ತಹಶೀಲ್ದಾರ್ ರಮೇಶ್ ಬಾಬು ಹಾಲು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.