ಬೀದರ್: ತಂದೆ-ತಾಯಿ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಮಕ್ಕಳು ಅವರ ಸೇವೆ ಮಾಡಿ ಋಣ ತೀರಿಸಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಬೆಟ್ಟದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಪ್ರಯುಕ್ತ ನಡೆದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತಂದೆ-ತಾಯಿಯ ಮನಸ್ಸು ನೋಯಿಸಬಾರದು. ಅವರೊಂದಿಗೆ ಪ್ರೀತಿ, ಗೌರವದಿಂದ ನಡೆದುಕೊಳ್ಳಬೇಕು. ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಬೇಕು ಎಂದು ತಿಳಿಸಿದರು.
ಮಾದಕ ವ್ಯಸನಗಳಿಂದ ಆರೋಗ್ಯ ಹಾಳಾಗುತ್ತದೆ. ಕಾರಣ, ಯುವಕರು ದುಶ್ಚಟಗಳಿಂದ ದೂರ ಇರಬೇಕು. ಪಾಲಕರು ಕೂಡ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.
ಆಧ್ಯಾತ್ಮಿಕ ಜಾಗೃತಿ, ಮಾನವೀಯ ಮೌಲ್ಯ ಸೇರಿದಂತೆ ದೇಶಕ್ಕೆ ಜಗದ್ಗುರುಗಳ ಸೇವೆ ಅಪಾರವಾಗಿದೆ ಎಂದು ಹೇಳಿದರು.
ಬೀದರ್ ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಾಗಿದೆ. ಇಲ್ಲಿ ಇರುವವರೆಲ್ಲರೂ ಪುಣ್ಯವಂತರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು ಎಂದು ಹೇಳಿದರು.
ಪ್ರಮುಖರಾದ ಶಿವಕುಮಾರ ಪಾಟೀಲ, ವೀರಶೆಟ್ಟಿ ಮೂಲಗೆ, ರಾಜಕುಮಾರ ಪಾಟೀಲ, ಮಂಜುನಾಥ ಸಲಗರ್, ಚನ್ನು ಕೋರಿ ಇದ್ದರು.
ಇದಕ್ಕೂ ಮುನ್ನ ಅವಧೂತರು ಜಗದ್ಗುರು ರೇಣುಕಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.