ADVERTISEMENT

ವಸತಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಸೂಚನೆ

‘ವಕ್ಫ್‌ ಅದಾಲತ್‌’ ಅರ್ಜಿ ವಿಲೇವಾರಿಗೆ ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 13:05 IST
Last Updated 25 ಜೂನ್ 2024, 13:05 IST
<div class="paragraphs"><p>ಜಮೀರ್‌ ಅಹಮ್ಮದ್‌ ಖಾನ್‌</p></div>

ಜಮೀರ್‌ ಅಹಮ್ಮದ್‌ ಖಾನ್‌

   

ಬೀದರ್‌: ‘ಸೋಮವಾರ ‘ವಕ್ಫ್‌ ಅದಾಲತ್‌’ನಲ್ಲಿ ಒಟ್ಟು 197 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದು, ಅವುಗಳನ್ನು ಒಂದು ತಿಂಗಳ ಒಳಗೆ ವಿಲೇವಾರಿಗೊಳಿಸಬೇಕು’ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಬಿ.ಜೆಡ್‌. ಜಮೀರ್ ಅಹಮ್ಮದ್‌ ಖಾನ್‌ ಅವರು ಅಧಿಕಾರಿಗಳಿಗೆ ಗಡುವು ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಪ್ ಅದಾಲತ್ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, 197 ಅರ್ಜಿಗಳ ಪೈಕಿ 14 ಖಾತಾ, 11 ಒತ್ತುವರಿ, 34 ಖಬರಸ್ತಾನ ಸೇರಿದಂತೆ ಇತರೆ ಅರ್ಜಿಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥ ಪಡಿಸಬೇಕು. ಕಾಲಮಿತಿಯಲ್ಲಿ ಇತ್ಯರ್ಥಗೊಳಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ADVERTISEMENT

ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಕಾಮಗಾರಿ ತ್ವರಿತವಾಗಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. 1.82 ಲಕ್ಷ ಮನೆಗಳ ಪೈಕಿ ಎರಡನೇ ಕಂತಿನಲ್ಲಿ 42 ಸಾವಿರ ಮನೆಗಳ ಹಂಚಿಕೆಗೆ ಶೀಘ್ರ ದಿನಾಂಕ ನಿಗದಿ ಪಡಿಸಬೇಕಿದೆ. ಬೀದರ್‌ನಲ್ಲಿ 2,150 ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಒಟ್ಟು 3,497 ಮನೆಗಳ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಮೂಲ ಸೌಕರ್ಯ ಸಹಿತ ಸುಸಜ್ಜಿತ ಮನೆಗಳ ನಿರ್ಮಾಣ ಮಾಡಬೇಕು ಎಂದು ಸೂಚನೆ ಕೊಟ್ಟರು.

ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಹಂಚಿಕೆಯಾದ ಮನೆಗಳ ಬಗ್ಗೆಯೂ ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ಪಡೆದರು.

ವಕ್ಪ್ ಮಂಡಳಿ ಅಧ್ಯಕ್ಷ ಅನ್ವರ್‌ ಬಾಷಾ ಮಾತನಾಡಿ, ವಕ್ಪ್ ಆಸ್ತಿಯ ಬಹಳಷ್ಟು ಸರ್ವೇ ಕಾರ್ಯ ಬಾಕಿ ಇದೆ. ಇದನ್ನು ಡಿಡಿಎಲ್‌ಆರ್ ಮತ್ತು ಎಡಿಎಲ್‌ಆರ್‌ಗಳು ಆದಷ್ಟು ಬೇಗ ಮಾಡಬೇಕು. ನಗರಸಭೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಖಾತೆಗಳು ಅಪ್‌ಡೇಟ್‌ ಆಗುತ್ತಿಲ್ಲ. ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಪೆಂಡಿಂಗ್‌ ಇರುವ ಅರ್ಜಿಗಳನ್ನು ವಿಲೇವಾರಿಗೊಳಿಸಬೇಕೆಂದು ಸೂಚಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ವಕ್ಪ್ ಆಸ್ತಿಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ. ಇಂದಿನ ಸಭೆಯಲ್ಲಿ ಚರ್ಚಿಸಿದ ವಕ್ಪ್ ಆಸ್ತಿಗೆ ಸಂಬಂಧಿಸಿದ ವಿಷಯಗಳ ಸಮಸ್ಯೆಗಳನ್ನು ಬರುವ ಒಂದು ಅಥವಾ ಎರಡು ತಿಂಗಳಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದರು.

ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಅಬ್ದುಲ್‌ ಜಬ್ಬಾರ್, ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಮೋಕಾಶಿ ಜಿಲಾನಿ, ಬೀದರ್‌ ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಫಿರೋಜ್ ಖಾನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅವಿನಾಶ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.