ADVERTISEMENT

ಬೀದರ್‌: ನೇಪಥ್ಯಕ್ಕೆ ಸರಿಯುತ್ತಿದೆ ‘ಹೊರಸು’

ಕಮಲನಗರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ದಣಿವಾರಿಸಿಕೊಳ್ಳಲು ಅಲ್ಲಲ್ಲಿ ಬಳಕೆ

ಪ್ರಜಾವಾಣಿ ವಿಶೇಷ
Published 6 ಅಕ್ಟೋಬರ್ 2024, 4:53 IST
Last Updated 6 ಅಕ್ಟೋಬರ್ 2024, 4:53 IST
ಕಮಲನಗರದ ವಿಶ್ವಾಸ ನಗರ ಮನೆಯೊಂದರಲ್ಲಿ ಹೊರಸು ನೇಯ್ಗೆಯಲ್ಲಿ ತೊಡಗಿರುವ ಶಿವರಾಜ ಕಾಂಬಳೆ ಮತ್ತು ಧನಾಜಿ
ಕಮಲನಗರದ ವಿಶ್ವಾಸ ನಗರ ಮನೆಯೊಂದರಲ್ಲಿ ಹೊರಸು ನೇಯ್ಗೆಯಲ್ಲಿ ತೊಡಗಿರುವ ಶಿವರಾಜ ಕಾಂಬಳೆ ಮತ್ತು ಧನಾಜಿ   

ಕಮಲನಗರ: ‘ಬೇಸಿಗೆಯಲ್ಲಿ ಮಧ್ಯಾಹ್ನ ಬೇವಿನ ಮರದ ನೆರಳಿನಲ್ಲಿ ಹೊರಸಿನ ಮೇಲೆ ಮಲಗಿದರೆ ಸ್ವರ್ಗ ಮೂರೇ ಗೇಣು ಎಂಬಷ್ಟು ಸುಖ ನಿದ್ರೆ ಬರುತ್ತದೆ’ ಎಂಬುದು ಹಿರಿಯರ ಮಾತು.

ಹಿಂದೆಲ್ಲ ಪ್ರತಿ ಮನೆಗೂ ಒಂದೆಡು ಕಾಣಸಿಗುತ್ತಿದ್ದ ಹೊರಸುಗಳು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಬಹುತೇಕ ನೇಪಥ್ಯಕ್ಕೆ ಸರಿದಿವೆ. ಆದರೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಸೆರೆಗಿನಲ್ಲಿರುವ ಕಮಲನಗರ ತಾಲ್ಲೂಕಿನ ಗ್ರಾಮೀಣ ಭಾಗದ ಇಂದಿಗೂ ಅಲ್ಲಲ್ಲಿ ಹೊರಸು ಬಳಕೆ ಉಳಿದಿದೆ. ಅವು ಕೇವಲ ಮಹಿಳೆಯರ ಬಾಣಂತನಕ್ಕೆ ಸೀಮಿತವಾಗಿವೆ.

‘ದಿನವಿಡೀ ದುಡಿದು ಬಂದವರು ಮನೆಯಂಗಳದಲ್ಲಿ  ಹೊರಸು ಹಾಕಿ ಬೀಸುವ ತಂಗಾಳಿಗೆ ಮೈಯೊಡ್ಡಿದರೆ, ದಣಿವು ನೀಗುತ್ತದೆ. ದಣಿವೆಲ್ಲ ಮಾಯವಾಗಿ ದೇಹಕ್ಕೆ ಸಿಗುವ ಸಂತೃಪ್ತಿ ಅನುಭವಿಸಿಯೇ ಸವಿಯಬೇಕು. ಆದರೆ, ಹೊರಸು ಸಿಗುವುದು ವಿರಳ. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಹೊರಸುಗಳು ಅಳಿವಿನ ಅಂಚಿಗೆ ತಲುಪಿವೆ’ ಎಂಬುದು ಕಮಲನಗರದ ನಿವಾಸಿ ಸಂಗ್ರಾಮಪ್ಪ ರಾಂಪೂರೆ ಅವರ ಅಂಬೋಣ.‌

ADVERTISEMENT

‘ಹೊರಸು, ಹೆಂಚಿನ ಮನೆ, ಈಚಲು ಮರದ ಗರಿಗಳ ಚಾಪೆ, ಪೊರಕೆ, ಬುಟ್ಟಿ, ಮೊರಾದಂಥ ಹಳೇ ಕಾಲದ ವಸ್ತುಗಳ ಬಳಕೆಯನ್ನು ಇಂದಿಗೂ ಗಡಿ ಭಾಗದ ಗ್ರಾಮಗಳಲ್ಲಿ ನಾವು ಕಾಣಬಹುದು’ ಎನ್ನುತ್ತಾರೆ ಕಮಲನಗರ ತಾಲ್ಲೂಕಿನ ದಾಬಕಾ ಹೋಬಳಿಯ ಚಿಕ್ಲಿ(ಯು) ಗ್ರಾಮದ ನಿವಾಸಿ ಗುಲಾಬ್ ರಸೂಲ್ ದಸ್ತಗೀರ‌್.

ಹೊರಸು ತಯಾರಿಸುವ ಬಗೆ:

ಹಳ್ಳಿಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಬೆಳೆಯುವ ಮಾವು, ನೀಲಗಿರಿ, ಬೇವು ಮರಗಳ ಟೊಂಗೆಗಳನ್ನು ತಂದು ದುಂಡಾಗಿ ಕೆತ್ತಿ ಹೊರಸಿಗೆ ಮೊದಲು ಕಾಲು, ಚೌಕಟ್ಟು ಸಿದ್ಧಪಡಿಸಲಾಗುತ್ತದೆ. ಹೊಲಗಳ ಬದುಗಳಲ್ಲಿ ಬೆಳೆಯುವ ‘ಮದಗಡ್ಡಿ’ ಎಂದೇ ಕರೆಯುವ ಹುಲ್ಲು ಹೊರಸು ನೇಯ್ಗೆಗೆ ‘ನುಲಕಿ’ಯಾಗಿ ಬಳಕೆಯಾಗುತ್ತದೆ. 3x5 ಅಡಿಯ ಹೊರಸು ನೇಯ್ಗೆಗೆ ಕನಿಷ್ಠ 600ರಿಂದ 700ಅಡಿಗಳಷ್ಟು ಉದ್ದದ ನುಲಕಿ ಬೇಕಾಗುತ್ತದೆ. ಅದನ್ನು ಚಾಕ್ಯತೆಯಿಂದ ನೇಯ್ಗೆ ಮಾಡಬೇಕಾಗುತ್ತದೆ. ಒಟ್ಟಾರೆ ಒಂದು ಹೊರಸು ಸಿದ್ಧವಾಗಲು ಕನಿಷ್ಠ ನಾಲ್ಕೈದು ದಿನ ಶ್ರಮಬೇಡುತ್ತದೆ.

‘ಹೊರಸು ತಯಾರಿಕೆ ಅಂದಾಜು ₹3 ಸಾವಿರ ವರೆಗೂ ವೆಚ್ಚವಾಗುತ್ತದೆ. ಪ್ರಮುಖವಾಗಿ ನೇಯ್ಗೆಗೆ ಬೇಕಾಗುವ ಹುಲ್ಲಿನ ನುಲುಕಿಯೇ ಸಿಗಲ್ಲ. ಆದರಿಂದ ಪುಂಡಿದಾರ ಇಲ್ಲವೇ ಪ್ಲಾಸ್ಟಿಕ್‌ ವೈರ್‌ನ ದಾರ ಹೆಚ್ಚಾಗಿ ಬಳಸಲಾಗುತ್ತದೆ. ಒಮ್ಮೆ ಸಿದ್ಧಪಡಿಸಿದ ಹೊರಸು ಮೂರು ವರ್ಷಕ್ಕೂ ಹೆಚ್ಚು ಅವಧಿ ಬಾಳಿಕೆಗೆ ಬರುತ್ತದೆ’ ಎನ್ನುತ್ತಾರೆ ಹೊರಸು ನೇಯ್ಗೆ ಮಾಡುವ ಶಿವರಾಜ ಕಾಂಬಳೆ.

ಇತ್ತೀಚೆಗೆ ಪ್ಲಾಸ್ಟಿಕ್‌ ಸ್ಟೀಲ್‌ ಬಳಕೆ ಹೆಚ್ಚಿದಂತೆಲ್ಲ ಹೊರಸುಗಳು ಬಳಕೆ ಕ್ರಮೇಣ ಮಾಯವಾಗುತ್ತಿದೆ. ಸರ್ಕಾರ ಹೊರಸು ನೇಯ್ಗೆಗೆ ಬಲ ತುಂಬುವ ಕಾರ್ಯ ಮಾಡಬೇಕಿದೆ‌
ಧನಾಜಿ ಹೊರಸು ನೇಯುವ ಕುಶಲ ಕರ್ಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.