ADVERTISEMENT

ಬೀದರ್ | ಜೀವಭಯದಲ್ಲಿ ಸಂಚರಿಸುವ ಸವಾರರು

ಮಳೆಗೆ ಹಾಳಾದ ರಸ್ತೆ: ದುರಸ್ತಿಯತ್ತ ಗಮನಹರಿಸಲು ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:36 IST
Last Updated 27 ಅಕ್ಟೋಬರ್ 2024, 4:36 IST
ಹುಲಸೂರ ತಾಲ್ಲೂಕಿನ ಮುಚಳಂಬ-ಗಡಿರಾಯಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿ ಗುಂಡಿಗಳು
ಹುಲಸೂರ ತಾಲ್ಲೂಕಿನ ಮುಚಳಂಬ-ಗಡಿರಾಯಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿ ಗುಂಡಿಗಳು   

ಹುಲಸೂರ: ತಾಲ್ಲೂಕಿನ ಮುಚಳಂಬ–ಗಡಿರಾಯಪಳ್ಳಿ ಹಾಗೂ ಕಾದೆಪುರ–ಘಾಟಬೋರಾಳ ತಾಂಡಾಕ್ಕೆ ಸಂಪರ್ಕಿಸುವ ರಸ್ತೆ ಗುಂಡಿಗಳು ಬಿದ್ದು ತೀರಾ ಹದಗೆಟ್ಟಿವೆ.

ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವಂತಾಗಿದೆ. ರಸ್ತೆಯ ಹಲವು ಭಾಗಗಳಲ್ಲಿ ಆಳವಾದ ಗುಂಡಿಗಳಿವೆ. ರಸ್ತೆ ಹಾಳಾಗಿರುವುದರಿಂದ ಈ ಮಾರ್ಗದಲ್ಲಿ ಬಸ್ ಓಡಿಸಲು ಚಾಲಕರು ಹಿಂದೇಟು ಹಾಕುತ್ತಿದ್ದು, ಕಳೆದ ಒಂದು ವರ್ಷದಿಂದ ಈ ಮಾರ್ಗದ ಗ್ರಾಮಕ್ಕೆ ಬಸ್‌ ಸಂಪರ್ಕ ಕಲ್ಪಿಸಿಲ್ಲ ಎಂಬುದು ಗಡಿರಾಯಪಳ್ಳಿ ಗ್ರಾಮಸ್ಥರ ಆರೋಪ.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಗೆ ಒಳಪಟ್ಟಿರುವ ಈ ಜಿಲ್ಲಾ ಮುಖ್ಯರಸ್ತೆ, 15 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ರಸ್ತೆ ಮಧ್ಯೆ ಇರುವ ಹಳ್ಳಗಳಿಂದ ಹರಿದು ಬರುವ ಮಳೆ ನೀರು ರಸ್ತೆ ಮೇಲೆ ನಿಲ್ಲುವುದರಿಂದ ರಸ್ತೆಯ ಡಾಂಬರು ಪದರು ಕಿತ್ತು ಗುಂಡಿಗಳು ಬಿದ್ದಿವೆ. ಇಲಾಖೆಯವರು ಕನಿಷ್ಠ ಗುಂಡಿ ಮುಚ್ಚಲು ಕ್ರಮ ಕೈಗೊಂಡಿಲ್ಲ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಈ ಭಾಗದ ಜನರು ಶಪಿಸುತ್ತಿದ್ದಾರೆ.

ADVERTISEMENT

ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾಗುತ್ತದೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಚಾಲನೆ ಮಾಡುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಜನರು ಪರಿತಪಿಸುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ತಿರುಗಿ ನೋಡುತ್ತಿಲ್ಲ. ಈ ಭಾಗದಲ್ಲಿ ಸಾರಿಗೆ ಬಸ್‌ ಸಂಚಾರವೂ ಇಲ್ಲ. ಜನರು ವೈಯಕ್ತಿಕ ವಾಹನಗಳಲ್ಲೇ ಓಡಾಡುತ್ತಾರೆ. ರಸ್ತೆ ದುರಾವಸ್ಥೆಯಿಂದಾಗಿ ವಾಹನಗಳು ಅರ್ಧದಲ್ಲೇ ಕೈಕೊಟ್ಟು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯ ಮಾಡಿದ್ದಾರೆ. ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದು, ಇಲ್ಲಿಯವರೆಗೂ ರಸ್ತೆ ದುರಸ್ತಿಯಾಗಿಲ್ಲ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗಡಿರಾಯಪಳ್ಳಿ ಗ್ರಾಮದ ಭಾಗವತ ಬಿರಾದಾರ ಒತ್ತಾಯಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿದಾಗ ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.