ADVERTISEMENT

ಬೀದರ್‌ | ರಸ್ತೆಗಳಲ್ಲಿ ಗುಂಡಿ, ದೂಳು: ನೆಮ್ಮದಿ ಹಾಳು

ಪ್ರತಿಷ್ಠಿತರಿದ್ದರೂ ರಸ್ತೆಗಿಲ್ಲ ದುರಸ್ತಿ; ಮುಖ್ಯರಸ್ತೆ ಹಾಳಾದರೂ ಜಾಣ ಮೌನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಸೆಪ್ಟೆಂಬರ್ 2024, 5:35 IST
Last Updated 23 ಸೆಪ್ಟೆಂಬರ್ 2024, 5:35 IST
ಹರಸಾಹಸ ಮಾಡುತ್ತ ಬೈಕ್‌ ಓಡಿಸುತ್ತಿರುವ ಸವಾರರು
ಹರಸಾಹಸ ಮಾಡುತ್ತ ಬೈಕ್‌ ಓಡಿಸುತ್ತಿರುವ ಸವಾರರು   

ಬೀದರ್‌: ಇಲ್ಲಿನ ಶಿವನಗರ, ಪ್ರತಾಪ್‌ ನಗರ ಸಮೀಪ ಬೀದರ್‌–ನಾಂದೇಡ್‌ ಮುಖ್ಯರಸ್ತೆ ಸಂಪೂರ್ಣ ಹಾಳಾಗಿ ಸಾರ್ವಜನಿಕರು ಪಡಬಾರದ ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಿಸಿದವರು ಜಾಣ ಮೌನ ವಹಿಸಿದ್ದಾರೆ.

ಶಿವನಗರದಲ್ಲಂತೂ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಅನೇಕ ಗಣ್ಯರು, ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಹಲವು ಜನ ಪ್ರತಿಷ್ಠಿತರ ಮನೆಗಳಿವೆ. ಅನೇಕ ಐಷಾರಾಮಿ ಹೋಟೆಲ್‌ಗಳಿವೆ. ಪ್ರತಾಪ್‌ ನಗರದ ಉದ್ದಕ್ಕೂ ಕಾರುಗಳ ಶೋ ರೂಂಗಳು, ವಸತಿ ನಿಲಯಗಳು, ಕಲ್ಯಾಣ ಮಂಟಪಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳಿವೆ.

ಬೀದರ್‌ನಿಂದ ನಾಂದೇಡ್‌, ಬೀದರ್‌ನಿಂದ ಹುಮನಾಬಾದ್‌, ಕಲಬುರಗಿ, ಸೋಲಾಪುರ, ಪುಣೆ ಹೀಗೆ ಪ್ರಮುಖ ನಗರಗಳಿಗೆ ಇದೇ ರಸ್ತೆ ಮೂಲಕ ಹೋಗಬೇಕು. ನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತವೆ. ಇಷ್ಟೇ ಅಲ್ಲ, ಸ್ಥಳೀಯ ಸಚಿವರು, ಶಾಸಕರು ಕೂಡ ಇದೇ ರಸ್ತೆಯಲ್ಲೇ ಓಡಾಡುತ್ತಾರೆ. ಎಲ್ಲರಿಗೂ ಸಮಸ್ಯೆಯ ಅರಿವಿದೆ. ಆದರೆ, ಹಲವು ತಿಂಗಳಿಂದ ಮುಖ್ಯರಸ್ತೆಯೊಂದು ಹದಗೆಟ್ಟಿದ್ದರೂ ಅದರ ದುರಸ್ತಿಗೆ ಮನಸ್ಸು ಮಾಡುತ್ತಿಲ್ಲವೇಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ADVERTISEMENT

ಬರೀದ್‌ ಷಾಹಿ ಉದ್ಯಾನದ ಕ್ರಾಸ್‌ನಿಂದ ಪಾಪನಾಶ್‌ ಗೇಟ್ ವರೆಗೆ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಆಳುದ್ದದ ತಗ್ಗು, ಗುಂಡಿಗಳು ಬಿದ್ದಿವೆ. ಈ ಮಾರ್ಗ ಕ್ರಮಿಸಲು ವಾಹನ ಚಾಲಕರು ಹಾಗೂ ಸವಾರರು ಸರ್ಕಸ್‌ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸಬೇಕಾದ ಪ್ರಮೇಯ ಇದೆ. ಅಧಿಕ ಸಂಖ್ಯೆಯ ವಾಹನಗಳ ಓಡಾಟದಿಂದ ಇಡೀ ಪ್ರದೇಶದಲ್ಲಿ ದಿನವಿಡೀ ದೂಳು ಆವರಿಸಿಕೊಂಡು ಇರುತ್ತದೆ. ಜನ ಕರವಸ್ತ್ರಗಳಿಂದ ಮೂಗು ಮುಚ್ಚಿಕೊಂಡು ಓಡಾಡುತ್ತಾರೆ. ಆದರೆ, ಇಲ್ಲಿರುವ ಅನೇಕ ಅಂಗಡಿ ಮುಗ್ಗಟ್ಟಿನವರು ಎಲ್ಲಿಗೆ ಹೋಗಬೇಕು? ಗೂಡಂಗಡಿಗಳ ವ್ಯಾಪಾರವಂತೂ ಸಂಪೂರ್ಣ ಹಾಳಾಗಿದೆ. ದೂಳಿನಿಂದ ಮಳಿಗೆಗಳವರ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಯಾರು ಕೂಡ ಅವರ ಬಳಿ ವಸ್ತುಗಳನ್ನು ಖರೀದಿಸುತ್ತಿಲ್ಲ. ಜೊತೆಗೆ ಅವರ ಆರೋಗ್ಯದ ಮೇಲೆ ಅಡ್ಡಿ ಪರಿಣಾಮ ಬೀರುತ್ತಿದೆ.

‘ಮುಖ್ಯರಸ್ತೆ ಹಾಳಾಗಿ ಹಲವು ತಿಂಗಳಾಗಿವೆ. ಮಂತ್ರಿಗಳು, ಅಧಿಕಾರಿಗಳು ಈ ರಸ್ತೆಯ ಮೂಲಕವೇ ಓಡಾಡುತ್ತಾರೆ. ಹೀಗಿದ್ದರೂ ಇದನ್ನು ದುರಸ್ತಿ ಏಕೆ ಮಾಡುತ್ತಿಲ್ಲ ಗೊತ್ತಾಗುತ್ತಿಲ್ಲ. ಅನೇಕರು ನಮ್ಮ ಕಣ್ಣ ಮುಂದೆಯೇ ಬಿದ್ದು ಗಾಯಗೊಂಡಿದ್ದಾರೆ. ನಿತ್ಯ ಅಪಘಾತಗಳು ಸಾಮಾನ್ಯವಾಗಿವೆ. ದೂಳಿನಿಂದ ನಮ್ಮ ನೆಮ್ಮದಿ ಸಂಪೂರ್ಣ ಹಾಳಾಗಿದೆ. ಶೀಘ್ರ ರಸ್ತೆ ದುರಸ್ತಿಗೊಳಿಸದಿದ್ದರೆ ಈ ಭಾಗದವರು ತೀವ್ರ ಆರೋಗ್ಯದ ಸಮಸ್ಯೆ ಎದುರಿಸಬೇಕಾಗುತ್ತದೆ. ಈಗಾಗಲೇ ಅನೇಕರಿಗೆ ತೊಂದರೆ ಶುರುವಾಗಿದೆ’ ಎಂದು ಶಿವನಗರ ನಿವಾಸಿ ರಾಜಕುಮಾರ ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡರು.

‘ಜಿಲ್ಲಾಡಳಿತಕ್ಕೆ ಕನಿಷ್ಟ ರಸ್ತೆಯಂತಹ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ಜನರಿಗೆ ಬಹಳ ಸಮಸ್ಯೆಯಾಗುತ್ತಿದೆ. ಅದರಲ್ಲೂ ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಕೆಲವರು ಜೀವ ಕೂಡ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ. ಅಭಿವೃದ್ಧಿ ಅಂದರೆ ಇದೇನಾ?’ ಎಂದು ಪ್ರಶ್ನಿಸಿದರು ಪ್ರತಾಪ ನಗರದ ನಿವಾಸಿ ರಮೇಶ.

‘ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಣ್ಣು, ಕಿವಿ ಇಲ್ಲದಂತೆ ಸಂವೇದನಾಶೀಲರಾಗಿ ವರ್ತಿಸುತ್ತಿದ್ದಾರೆ. ಆದರೆ, ಜನರಿಂದ ಹಲವು ರೀತಿಯ ತೆರಿಗೆ ವಸೂಲಿ ಮಾಡಿ ಕನಿಷ್ಟ ಸೌಕರ್ಯ ಕೊಡದಿದ್ದರೆ ಹೇಗೆ? ಜನ ಸಂಘಟಿತರಾಗಿ ಇದರ ವಿರುದ್ಧ ಧ್ವನಿ ಎತ್ತುವವರೆಗೆ ಇವರು ಆಡಿದ್ದೇ ಆಟ’ ಎಂದು ಆಕ್ರೋಶ ಹೊರಹಾಕಿದರು.

ಬೀದರ್‌ನ ಶಿವನಗರ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು ದೂಳಿನಿಂದ ಜನರ ನೆಮ್ಮದಿ ಹಾಳಾಗಿದೆ. ಮುಖ ಮುಚ್ಚಿಕೊಂಡು ಜನ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ರಸ್ತೆ ಸಂಪೂರ್ಣ ದೂಳುಮಯವಾಗಿರುವುದು
ಮಳೆಗೆ ಕಿತ್ತು ಹೋದ ರಸ್ತೆಗಳಲ್ಲಿ ಗುಂಡಿಗಳೋ ಗುಂಡಿಗಳು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಹಾಳಾದ ರಿಂಗ್‌ ರೋಡ್‌

ಬೀದರ್‌–ನಾಂದೇಡ್‌ ರಸ್ತೆಯಷ್ಟೇ ಅಲ್ಲ ನಗರದ ರಿಂಗ್‌ರೋಡ್‌ ಕೂಡ ಹಾಳಾಗಿದೆ. ಅದರಲ್ಲೂ ನಗರದ ಚಿದ್ರಿ ಕ್ರಾಸ್‌ನಿಂದ ಗುಂಪಾ ಕ್ರಾಸ್‌ವರೆಗಿನ ರಿಂಗ್‌ರೋಡ್‌ ಚಹರೆಯೇ ಬದಲಾಗಿದೆ. ಹೋದ ತಿಂಗಳು ಸುರಿದ ಭಾರಿ ಮಳೆಗೆ ಇಡೀ ರಸ್ತೆ ಹಾಳಾಗಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದವು. ಮಳೆಯಲ್ಲೇ ಗುಂಡಿಗಳನ್ನು ಮುಚ್ಚಲಾಗಿತ್ತು. ಪುನಃ ಮಳೆಯಾಗಿದ್ದರಿಂದ ಮತ್ತೆ ಆಳುದ್ದದ ಗುಂಡಿಗಳಾಗಿವೆ. ಇತ್ತೀಚೆಗೆ ಗುಂಡಿಗಳಲ್ಲಿ ಮಣ್ಣು ತಂದು ಸುರಿಯಲಾಗಿದೆ. ಮಳೆ ಬಿದ್ದು ಪರಿಸ್ಥಿತಿ ಮತ್ತಷ್ಟು ಅಧ್ವಾನ ಆಗಿದೆ. ಇನ್ನು ನಗರದ ಹಾರೂರಗೇರಿ ಕ್ರಾಸ್‌ ಬಸವೇಶ್ವರ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತ ಸಮೀಪದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಪದೇ ಪದೇ ರಸ್ತೆ ಹಾಳಾಗುತ್ತಿದೆ. ಇದರಿಂದ ಅನೇಕ ಅಪಘಾತಗಳಾಗುತ್ತಿವೆ. ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದೆ. ಆದರೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ವಾರದೊಳಗೆ ಕೆಲಸ ಆರಂಭ’

‘ನಾಲ್ಕು ಪಥದ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್‌ ಕೂಡ ಆಗಿದ್ದು ಎಲ್‌–1 ಗುರುತಿಸಿ ವಾರದೊಳಗೆ (ಸೆ. 26 ಅಥವಾ 27ಕ್ಕೆ) ಕೆಲಸ ಆರಂಭಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ ಕಾಮಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ರಸ್ತೆಯುದ್ದಕ್ಕೂ ಚರಂಡಿ ಸೇರಿದಂತೆ ನಾಲ್ಕು ಪಥದ ಗುಣಮಟ್ಟದ ರಸ್ತೆ ನಿರ್ಮಿಸಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲಾಗುವುದು. ಟೆಂಡರ್‌ ಕರೆದು ಪಾರದರ್ಶಕವಾಗಿ ಕೆಲಸ ಮಾಡಿಸಬೇಕೆಂಬ ಉದ್ದೇಶದಿಂದ ಸ್ವಲ್ಪ ವಿಳಂಬವಾಗಿದೆ. ಈ ಹಿಂದೆ ಯುಜಿಡಿ ಒಎಫ್‌ಸಿ ಕೇಬಲ್‌ ಅಳವಡಿಕೆಗೆ ರಸ್ತೆ ಅಗೆದು ಹಾಗೆಯೇ ಬಿಟ್ಟು ಹೋಗಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದರು.

ಶಿವನಗರ ಮುಖ್ಯರಸ್ತೆಯ ನಿರ್ವಹಣೆ ಲೋಕೋಪಯೋಗಿ ಇಲಾಖೆಯವರು ನೋಡಿಕೊಳ್ಳುತ್ತಾರೆ. ಅದು ನಮಗೆ ಬರುವುದಿಲ್ಲ.
–ಶಿವರಾಜ ರಾಠೋಡ್‌, ಪೌರಾಯುಕ್ತ ಬೀದರ್‌ ನಗರಸಭೆ
ದೂಳಿನಿಂದ ಬಹಳ ಸಮಸ್ಯೆ ಉಂಟಾಗುತ್ತಿದೆ. ಆಸ್ತಮಾ ಕಾಯಿಲೆ ಇದ್ದವರು ವಯಸ್ಸಾದವರಿಗೆ ಬಹಳ ತೊಂದರೆ ಉಂಟಾಗುತ್ತಿದೆ.
–ಗೌತಮ್‌, ಬೀದರ್‌ ನಿವಾಸಿ
ರಸ್ತೆಯಲ್ಲಿ ಸದಾ ದೂಳು ತುಂಬಿಕೊಂಡಿರುತ್ತದೆ. ಮಳೆಯಾದರೆ ಗುಂಡಿಗಳಲ್ಲಿ ನೀರು ತುಂಬುತ್ತೆ. ಇದರಿಂದ ಅಪಘಾತಗಳಾಗುತ್ತಿವೆ.
–ಆನಂದ್‌, ಬೀದರ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.