ಬೀದರ್: ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ವಾಸ್ತವದಲ್ಲಿ ನೋಡಿದರೆ ಆ ನಿಯಮಗಳ ಪಾಲನೆಯೇ ಆಗುತ್ತಿಲ್ಲ.
ರಸ್ತೆಬದಿಯಿರಲಿ, ಐಷಾರಾಮಿ ಹೋಟೆಲ್‌ಗಳಿರಲಿ ಸ್ವಚ್ಛ ವಾತಾವರಣದಲ್ಲಿ ಆಹಾರವನ್ನು ಸಿದ್ಧಪಡಿಸಬೇಕು. ಅಷ್ಟೇ ಶುದ್ಧವಾದ ಪರಿಸರದಲ್ಲಿ ಅದನ್ನು ಮಾರಾಟ ಮಾಡಬೇಕು. ಉಪಾಹಾರ, ಅಡುಗೆ, ಸ್ನ್ಯಾಕ್ಸ್ ಏನೇ ಇರಲಿ ಅದಕ್ಕೆ ಬಳಸುವ ಪ್ರತಿಯೊಂದು ವಸ್ತು ಶುಚಿ, ರುಚಿಯಾಗಿ ಗುಣಮಟ್ಟದಿಂದ ಕೂಡಿರಬೇಕು. ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ, ಟೇಸ್ಟಿಂಗ್ ಪೌಡರ್ ಬಳಸುವುದು ನಿಷಿದ್ಧ. ಆದರೆ, ಹೆಚ್ಚಿನ ಕಡೆಗಳಲ್ಲಿ ಇದನ್ನು ರಾಜಾರೋಷವಾಗಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಇಲ್ಲದಂತಾಗಿದೆ.
ಹೋಟೆಲ್‌ನವರು ಹೆಚ್ಚಿನ ಬಂಡವಾಳ ಹಾಕಿ ಹೋಟೆಲ್‌ಗಳನ್ನು ನಡೆಸುತ್ತಾರೆ. ಸಾರ್ವಜನಿಕರಿಂದ ದೂರುಗಳು ಹೋದರೆ ಪರವಾನಗಿ ರದ್ದಾಗುವ ಭಯ ಇರುತ್ತದೆ. ಈ ಕಾರಣಕ್ಕಾಗಿ ಅವರು ಎಚ್ಚರ ವಹಿಸುತ್ತಾರೆ. ಆದರೆ, ರಸ್ತೆಬದಿ ಮಾರಾಟ ಮಾಡುವವರು ಪರವಾನಗಿ ಪಡೆದರೂ ಗುಣಮಟ್ಟದಲ್ಲಿ ರಾಜಿಯಾಗುತ್ತಾರೆ ಎಂಬ ಆರೋಪಗಳಿವೆ.
ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ಮಾರುಕಟ್ಟೆಗಳು, ಜನನಿಬಿಡ ಸ್ಥಳಗಳಲ್ಲಿ ನಾಯಿಕೊಡೆಗಳಂತೆ ಗೂಡಂಗಡಿ, ತಳ್ಳುಗಾಡಿಗಳಲ್ಲಿ ಆಹಾರವನ್ನು ಮಾರಾಟ ಮಾಡಲಾಗುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುವವರೇ ಇವುಗಳ ಗ್ರಾಹಕರಿರುತ್ತಾರೆ. ಅನೇಕರು ಒಂದು ಸಲ ಬಂದರೆ ಮತ್ತೊಂದು ಸಲ ಬರುವುದಿಲ್ಲ. ಆಹಾರದ ಸ್ವಚ್ಛತೆ, ಗುಣಮಟ್ಟದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ಕಡಿಮೆ ಬೆಲೆಗೆ ಆಹಾರ ಸಿಗುತ್ತದೆ ಎಂಬುದೊಂದೇ ಅವರ ತಲೆಯಲ್ಲಿ ಇರುತ್ತದೆ. ಹೀಗಾಗಿಯೇ ಹೆಚ್ಚಿನವರು ಮುಗಿಬೀಳುತ್ತಾರೆ.
‘₹ 10ಕ್ಕೆ ಕಿಚಡಿ, ₹ 15ಕ್ಕೆ ಪುಲಾವ್, ₹ 20ಕ್ಕೆ ಇಡ್ಲಿ ಹೀಗೆ ಕಡಿಮೆ ದರದಲ್ಲಿ ಉಪಾಹಾರ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಏನೂ ಇರುವುದಿಲ್ಲ. ಕಡಿಮೆ ಗುಣಮಟ್ಟದ ಎಣ್ಣೆ, ಟೇಸ್ಟಿಂಗ್ ಪೌಡರ್ ಬಳಸುತ್ತಿದ್ದಾರೆ. ಜನರಿಗೆ ವಿಷ ಉಣಿಸಲಾಗುತ್ತಿದೆ. ಬಡವರಿಗೆ ಏನೂ ಗೊತ್ತಾಗುವುದಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ವಿಜಯಕುಮಾರ ಆಗ್ರಹಿಸಿದ್ದಾರೆ.
‘ನಗರದಲ್ಲಿ ಕೆಲವೊಂದು ಕಡೆಗಳಲ್ಲಿ ಕಸ ಬಿದ್ದಿರುವ ಜಾಗ, ಮೂತ್ರ ವಿಸರ್ಜಿಸುವ ಜಾಗ, ಮದ್ಯದಂಗಡಿ ಹತ್ತಿರ ಅಸ್ವಚ್ಛವಾದ ಪರಿಸರದಲ್ಲಿ ಆಹಾರ, ಸ್ನ್ಯಾಕ್ಸ್ ಮಾರಾಟ ಮಾಡಲಾಗುತ್ತಿದೆ. ಇದೆಲ್ಲ ಅಧಿಕಾರಿಗಳಿಗೆ ಗೊತ್ತಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೆಚ್ಚಿನ ರಸ್ತೆಬದಿ ವ್ಯಾಪಾರಿಗಳಿಗೆ ತಿಳಿವಳಿಕೆ ಇಲ್ಲ. ಆಹಾರ ಸುರಕ್ಷತಾ ಇಲಾಖೆಯು ಅವರಿಗೆ ಕಾರ್ಯಾಗಾರ ಏರ್ಪಡಿಸಿ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ರಸ್ತೆಬದಿ ವ್ಯಾಪಾರಿಗಳೇ ಇರಲಿ, ದೊಡ್ಡ ಹೋಟೆಲ್‌ನವರೇ ಇರಲಿ ಎಲ್ಲರಿಗೂ ವ್ಯವಹಾರ ಮಾಡುವ ಹಕ್ಕಿದೆ. ಅದನ್ನು ಯಾರೂ ಕಸಿದುಕೊಳ್ಳಬಾರದು. ಇದರೊಂದಿಗೆ ಜನರ ಆರೋಗ್ಯವೂ ಬಹಳ ಮುಖ್ಯ’ ಎಂದು ಹೇಳಿದ್ದಾರೆ.
‘ಸಾರ್ವಜನಿಕರಿಂದ ನಿರ್ದಿಷ್ಟವಾಗಿ ಏನಾದರೂ ದೂರುಗಳು ಬಂದರಷ್ಟೇ ಪರಿಶೀಲಿಸುತ್ತೇವೆ. ರಸ್ತೆಬದಿಯ ಗೋಬಿ ಮಂಚೂರಿ ಪಾನಿ ಪೂರಿ ಬಂಡಿಗಳನ್ನು ರ್‍ಯಾಂಡಮ್ ಆಗಿ ಪರಿಶೀಲಿಸುತ್ತೇವೆ. ಗೋಬಿ ಮಂಚೂರಿಯಲ್ಲಿ ಬಣ್ಣ ಪಾನಿಪೂರಿಯ ನೀರಿನಲ್ಲಿ ಏನಾದರೂ ಕಲಬೆರಕೆ ಮಾಡುತ್ತಿದ್ದಾರೋ ಇಲ್ಲವೋ ಪರಿಶೀಲಿಸುತ್ತೇವೆ. ಸ್ವಚ್ಛತೆ ಕಾಯ್ದುಕೊಳ್ಳುವಂತೆ ರಸ್ತೆ ಬದಿ ಆಹಾರ ಮಾರಾಟ ಮಾಡುವವರಿಗೆ ತಿಳಿಸುತ್ತೇವೆ. ಕೆಲವೊಮ್ಮೆ ದಂಡ ಕೂಡ ವಿಧಿಸಿದ್ದೇವೆ. ಆದರೆ ಸಾರ್ವಜನಿಕರು ಕೂಡ ಎಚ್ಚರದಿಂದ ಇರಬೇಕು. ಯಾವುದೇ ಹೋಟೆಲ್‌ಗಳಿರಲಿ ಅಲ್ಲಿನ ಆಹಾರದ ಬಗ್ಗೆ ಅನುಮಾನ ಸಂದೇಹ ಬಂದರೆ ಇಲಾಖೆಗೆ ದೂರು ಕೊಟ್ಟರೆ ಖಂಡಿತ ಕ್ರಮ ಜರುಗಿಸಲಾಗುವುದು. -ಡಾ. ಸಂತೋಷ ಕಾಳೆ ಆಹಾರ ಸುರಕ್ಷತಾ ಅಧಿಕಾರಿ
ಮನೆ ಬಾಗಿಲಿಗೆ ಪಾರ್ಸೆಲ್ ಸರ್ವಿಸ್ ಕೊಡುವ ಕೆಲವು ಆನ್‌ಲೈನ್ ಸೇವೆಗಳಿಗೆ ಸಂಬಂಧಿಸಿದಂತೆಯೂ ದೂರುಗಳು ಕೇಳಿ ಬಂದಿವೆ. ಶುದ್ಧ ಸಸ್ಯಾಹಾರಕ್ಕೆ ಆರ್ಡರ್ ಮಾಡಿದಾಗ ಅದರಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿದ್ದವು. ಈ ಕುರಿತು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಗೋಳು ತೋಡಿಕೊಂಡಿದ್ದರು. ಆನಂತರ ಸಂಬಂಧಿಸಿದವರಿಗೂ ದೂರು ಸಲ್ಲಿಸಿದ್ದರು. ಆದರೆ ಹೋಟೆಲ್ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಇನ್ನು ಪಾರ್ಸೆಲ್ ಸರ್ವಿಸ್‌ನವರು ಸಹ ಗುಣಮಟ್ಟಕ್ಕೆ ಒತ್ತು ಕೊಡುತ್ತಿಲ್ಲ. ಅದರಲ್ಲೂ ಹೊಸ ವರ್ಷಾಚರಣೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಿರುವಾಗ ಈ ರೀತಿ ಆಗುತ್ತಿದೆ ಎನ್ನುವುದು ಗ್ರಾಹಕರ ಅಳಲು.
‘ಕೆಲವು ಹೋಟೆಲ್‌ಗಳು ಉತ್ತಮ ಗುಣಮಟ್ಟಕ್ಕೆ ಹೆಸರಾಗಿವೆ. ಆದರೆ ವಿಶೇಷ ಸಂದರ್ಭಗಳಲ್ಲಿ ಗುಣಮಟ್ಟ ತೀರ ಕಡಿಮೆ ಇರುತ್ತದೆ. ನಾನೊಮ್ಮೆ ಮಟನ್ ಬಿರಿಯಾನಿಗೆ ಬೇಡಿಕೆ ಸಲ್ಲಿಸಿದ್ದೆ. ಆದರೆ ಅವರು ಚಿಕನ್ ಬಿರಿಯಾನಿ ಕಳಿಸಿದ್ದರು. ಎರಡರ ಬೆಲೆಯಲ್ಲಿ ಬಹಳ ವ್ಯತ್ಯಾಸವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೊಡುವುದು ಹೋಟೆಲ್‌ನವರ ಜವಾಬ್ದಾರಿ. ಆ ಕೆಲಸವಾಗಿಲ್ಲ. ಈ ಸಂಬಂಧ ಗಮನ ಸೆಳೆದಾಗ ಅವಸರದಲ್ಲಿ ಹೀಗಾಗಿರಬಹುದು ಎಂದು ಹೋಟೆಲ್‌ನವರು ಜಾರಿಕೊಂಡರು’ ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುವ ರಮೇಶ ತಿಳಿಸಿದ್ದಾರೆ.
‘ಹೋಟೆಲ್‌ನಲ್ಲಿಯೇ ಕುಳಿತು ಆಹಾರ ಸೇವಿಸುವಾಗ ಏನಾದರೂ ವ್ಯತ್ಯಾಸವಾದರೆ ಅಲ್ಲಿಯೇ ಕರೆದು ಕೇಳಬಹುದು. ಆದರೆ ಪಾರ್ಸೆಲ್ ಸೇವೆ ಹೀಗಿರುವುದಿಲ್ಲ. ಬೇರೆ ಬೇರೆ ವೆಬ್‌ಸೈಟ್‌ಗಳ ಮೂಲಕ ಆರ್ಡರ್ ಮಾಡುತ್ತೇವೆ. ಮಾಲೀಕರೊಂದಿಗೆ ನೇರ ಸಂಪರ್ಕ ಇರುವುದಿಲ್ಲ. ಆಹಾರ ಸುರಕ್ಷತಾ ಇಲಾಖೆಯವರು ಇದರ ಮೇಲೆ ನಿಗಾ ವಹಿಸಬೇಕಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.