ಬೀದರ್: ಕಾಕಿನಾಡ ಪೋರ್ಟ್–ಸಿಕಂದರಾಬಾದ್–ಶಿರಡಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ತಡರಾತ್ರಿ ದರೋಡೆ ನಡೆದಿದ್ದು, ₹ 25 ಲಕ್ಷಕ್ಕೂ ಅಧಿಕ ಮೌಲ್ಯದ ಪ್ರಯಾಣಿಕರ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ. ಇದನ್ನು ಖಂಡಿಸಿ ಪ್ರಯಾಣಿಕರು ಶುಕ್ರವಾರ ನಸುಕಿನ ಜಾವ ಬೀದರ್ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಗುರುವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಮಹಾರಾಷ್ಟ್ರದ ಪರಳಿ ರೈಲು ನಿಲ್ದಾಣದ ಸಮೀಪ ರೈಲಿನ ಮೂರು ಹವಾನಿಯಂತ್ರಿತ ಬೋಗಿಗಳಿಂದ 30ಕ್ಕೂ ಹೆಚ್ಚು ಪ್ರಯಾಣಿಕರ ಬ್ಯಾಗುಗಳಲ್ಲಿದ್ದ ₹ 25 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಲಾಗಿದೆ. ಪ್ರಯಾಣಿಕರ ಬ್ಯಾಗುಗಳಲ್ಲಿ ಚಿನ್ನಾಭರಣ, ನಗದು ಹಣ, ಬೆಲೆಬಾಳುವ ವಸ್ತುಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಎಟಿಎಂ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳ ಮಾತ್ರೆಗಳು ಇದ್ದವು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಬ್ಯಾಗುಗಳನ್ನು ದೋಚಿದ ವಿಷಯ ತಿಳಿದ ಪ್ರಯಾಣಿಕರು ನಸುಕಿನ ಜಾವ 5.30ರ ಸುಮಾರಿಗೆ ರೈಲು ಬೀದರ್ ರೈಲು ನಿಲ್ದಾಣ ತಲುಪುತ್ತಿದ್ದಂತೆ ಕೆಳಗಿಳಿದು ಪ್ರತಿಭಟನೆ ನಡೆಸಿದರು. ರೈಲ್ವೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ವಸ್ತುಗಳನ್ನು ಹುಡುಕಿಕೊಡುವಂತೆ ಬಿಗಿ ಪಟ್ಟು ಹಿಡಿದರು. ಪ್ರಕರಣ ದಾಖಲಿಸಿಕೊಂಡು ವಸ್ತುಗಳನ್ನು ಪತ್ತೆ ಹಚ್ಚಿ ವಾಪಸ್ ಕೊಡಿಸುವಂತೆ ಆಗ್ರಹಿಸಿದರು. ಆದರೆ, ಸ್ಥಳೀಯ ರೈಲ್ವೆ ಪೊಲೀಸರು ನಿರಾಕರಿಸಿದರು. ಲಿಖಿತ ರೂಪದಲ್ಲಿ ನಿಮ್ಮ ದೂರು ಬರೆದುಕೊಡಿ, ನಮ್ಮ ಸಿಬ್ಬಂದಿ ಸಿಕಂದರಾಬಾದ್ ರೈಲ್ವೆ ಪೊಲೀಸ್ ಠಾಣೆಗೆ ಅದನ್ನು ತಲುಪಿಸುವರು ಎಂದು ಹೇಳಿದಾಗ ಪ್ರಯಾಣಿಕರು ಸಮ್ಮತಿ ಸೂಚಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದ ರೈಲು ಸಂಚಾರ ಕೆಲ ಸಮಯ ವಿಳಂಬವಾಯಿತು.
ಆನಂತರ ಪ್ರಯಾಣಿಕರು ಸಿಕಂದರಾಬಾದ್ ರೈಲ್ವೆ ಪೊಲೀಸರಿಗೂ ದೂರು ಸಲ್ಲಿಸಿ, ಪ್ರತಿಭಟನೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರೆಲ್ಲ ತೆಲಂಗಾಣಕ್ಕೆ ಸೇರಿದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.