ADVERTISEMENT

ರೋಬೋಟಿಕ್‌, ಆಟೋಮೇಶನ್‌ ಕೋರ್ಸ್‌ ಪ್ರವೇಶ ಆರಂಭ: ಸೋಮಶೇಖರ ಹುಲ್ಲೋಳಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:53 IST
Last Updated 26 ಜುಲೈ 2024, 15:53 IST
ಸೋಮಶೇಖರ ಹುಲ್ಲೋಳಿ
ಸೋಮಶೇಖರ ಹುಲ್ಲೋಳಿ   

ಬೀದರ್‌: ‘ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ) ಪ್ರಸಕ್ತ ಸಾಲಿನಲ್ಲಿ  ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿ‍ಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್‌, ಡಿಪ್ಲೋಮಾ ಇನ್ ಆಟೋಮೇಶನ್ ಮತ್ತು ರೋಬೊಟಿಕ್ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ’ ಎಂದು ಕೇಂದ್ರದ ಪ್ರಾಚಾರ್ಯ ಸೋಮಶೇಖರ ಹುಲ್ಲೋಳಿ ತಿಳಿಸಿದರು.

ಇನ್ನೂ ಶೇ 40ರಷ್ಟು ಸೀಟುಗಳು ಖಾಲಿ ಉಳಿದಿದ್ದು, ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಿದೆ. ವಿದ್ಯಾರ್ಥಿ ವೇತನದ ಜೊತೆಗೆ ನೂರಕ್ಕೆ ನೂರರಷ್ಟು ಉದ್ಯೋಗಾವಕಾಶ ಲಭಿಸುವ ಕೋರ್ಸ್‌ಗಳಿಗೆ ಆದ್ಯತೆ ನೀಡಲಾಗಿದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಉತ್ತೀರ್ಣ ಹಾಗೂ ಅನುತ್ತಿರ್ಣರಾದ ವಿದ್ಯಾರ್ಥಿಗಳು , ವಿದ್ಯಾವಂತ ನಿರುದ್ಯೋಗಿಗಳಿಗೆ ಜಿಟಿಟಿಸಿಯಲ್ಲಿ ಉದ್ಯಮ ಆಧಾರಿತ ವೃತ್ತಿಪರ ಕೌಶಲ ತರಬೇತಿಗಳನ್ನು ನೀಡಲಾಗುತ್ತದೆ. ಯುವಕರನ್ನು ಸ್ವಾವಲಂಬಿ ಮಾಡಲು ಕೌಶಲ ತರಬೇತಿಗಳ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ADVERTISEMENT

ಜಿಟಿಟಿಸಿ ಹುಮನಾಬಾದ್‌ ಕೇಂದ್ರದಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್, ಆಟೋಮೇಶನ್ ಮತ್ತು ರೋಬೊಟಿಕ್ ಕೋರ್ಸ್‌ಗಳಿಗೆ ಖಾಲಿ ಇರುವ ಸೀಟುಗಳ ಹಂಚಿಕೆ ಪ್ರಕ್ರಿಯೆ ಸಹ ಪ್ರಾರಂಭವಾಗಿದೆ. ಆಸಕ್ತರು ಜುಲೈ 31ರೊಳಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಆಯ್ಕೆಯಾದರೆ ಶೇ. 70ರಷ್ಟು ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದರು.

ಮೊದಲನೇ ವರ್ಷ ₹31 ಸಾವಿರ ಶುಲ್ಕ, ಎರಡನೇ ಹಾಗೂ ಮೂರನೇ ವರ್ಷ ₹25 ಸಾವಿರದಂತೆ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವರ್ಷ ₹27,500 ವಿದ್ಯಾರ್ಥಿ ವೇತನ ಸರ್ಕಾರದಿಂದ ನೀಡಲಾಗುತ್ತದೆ. ಸುಸಜ್ಜಿತ ಕೋಣೆಗಳು, ಹಾಸ್ಟೆಲ್‌ ವ್ಯವಸ್ಥೆ, ಸೆಕ್ಯೂರಿಟಿ ಗಾರ್ಡ್, ಸಿಸಿಟಿವಿ, ಗ್ರಂಥಾಲಯ, ಪ್ರಯೋಗಾಲಯ ವ್ಯವಸ್ಥೆಯಿದೆ. ವಿದ್ಯಾರ್ಥಿನಿಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸಲಾಗಿದೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲೆಂದು ಸರ್ಕಾರ ಜಿಟಿಟಿಸಿ ಕೇಂದ್ರ ಸ್ಥಾಪಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಜಿಟಿಟಿಸಿ ರಾಜ್ಯದಾದ್ಯಂತ 30 ಡಿಪ್ಲೊಮಾ ಕಾಲೇಜುಗಳು, ಮೂರು ಬಹು ಕೌಶಾಲ ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. ಡಿಪ್ಲೊಮಾ, ಪೋಸ್ಟ್ ಡಿಪ್ಲೊಮಾ ಹಾಗೂ ಎಂ.ಟೆಕ್ ಕೋರ್ಸ್‌ಗಳನ್ನು ನಡೆಸಲು ಎಐಸಿಟಿಇ ಅನುಮೋದನೆಗೊಂಡ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ರಾಜ್ಯದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಎಂಜಿನಿಯರ್‌ ಶಿವರಾಜ ಮೇತ್ರೆ, ತರಬೇತುದಾರರಾದ ಮಹಾನಂದ ಭರಶೆಟ್ಟಿ, ಸಿಬ್ಬಂದಿ ಸಿದ್ಧಲಿಂಗೇಶ್ವರ ಶೆಟ್ಟರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.