ಬೀದರ್: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹೈ ವೊಲ್ಟೋಜ್ ಸಭೆ ನಡೆಸಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕೆಂಬ ಕೂಗಿದೆ. ಆದಕಾರಣ ಮೋದಿ ಅವರನ್ನು ಕೆಳಗಿಳಿಸಿ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಮಾಡಲು ಚಿಂತನೆ ನಡೆದಿದೆ ಎಂದು ಬಸವಕಲ್ಯಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಎಲ್ಲ ಕಡೆಗಳಲ್ಲೂ ರಾಜಕೀಯ ನಾಯಕರ ಸಭೆಗಳು ಜರುಗುತ್ತವೆ. ಇದೆಲ್ಲ ಸಾಮಾನ್ಯ. ಮೈಸೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರೆ ಮುಖಂಡರು ಸಭೆ ನಡೆಸಿರುವುದರಲ್ಲಿ ವಿಶೇಷ ಏನೂ ಇಲ್ಲ. ಆದರೆ, ಮೋದಿಯವರನ್ನು ಆರ್‌ಎಸ್‌ಎಸ್ ಬದಲಿಸಲು ಸಭೆ ನಡೆಸಿರುವುದು ಮುಖ್ಯ ಎಂದರು.
ಯಾವುದೇ ವಿಷಯಕ್ಕೆ ಯಾವಾಗಲೂ ಪರ ವಿರೋಧ ಇದ್ದದ್ದೇ. ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸುತ್ತಾರೆ. ಅದು ಅವರ ಕನಸು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಬಿಜೆಪಿಯವರು ಸುಳ್ಳು ಹೇಳಿ, ವಾಮ ಮಾರ್ಗದಲ್ಲಿ ಹರಿಯಾಣದಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಸಿಎಂ ಪತ್ನಿ ಪರಿಹಾರದ ರೂಪದಲ್ಲಿ ನಿವೇಶನ ಪಡೆದಿದ್ದಾರೆ. ಯಾವುದೇ ವಿಶೇಷ ಕೆಟಗರಿಯಲ್ಲಿ ಪಡೆದಿಲ್ಲ. ಹೀಗಾಗಿ ಇದು ಕಾನೂನುಬಾಹಿರವಲ್ಲ. ಸದ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರವಿಲ್ಲ. ಸಂದರ್ಭ ಉದ್ಭವಿಸಿದರೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.