ಬೀದರ್ (ಬಸವರಾಜ ಭರಶೆಟ್ಟಿ ವೇದಿಕೆ): ‘ಕನ್ನಡಕ್ಕೆ ಅನ್ನ ಕೊಡುವ ಶಕ್ತಿಯಿಲ್ಲ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಆದರೆ, ಅದು ತಪ್ಪು. ಅದನ್ನು ಯಾರು ಹೇಳಿದ್ದಾರೋ ಗೊತ್ತಿಲ್ಲ. ಕನ್ನಡ ಶಾಲೆ ಹಾಗೂ ಕನ್ನಡ ಭಾಷೆಯಲ್ಲಿ ಓದಿದವರು ಅನೇಕ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಕೂಡ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ್ದೇನೆ. ನನ್ನಂತಹ ಅನೇಕರು ಓದಿ ದೊಡ್ಡ ಸ್ಥಾನ ಅಲಂಕರಿಸಿದ್ದಾರೆ. ಕನ್ನಡದಲ್ಲಿ 56 ಸಂಬಂಧ ವಾಚಕಗಳಿವೆ. ಬಸವಣ್ಣ, ಅಕ್ಕಮಹಾದೇವಿ ದೊಡ್ಡ ನಾಮವಾಚಕಗಳು’ ಎಂದು ಹೇಳಿದರು.
‘ಕನ್ನಡ ಶಾಲೆ ಮುಚ್ಚಿದರೆ ತಾಯಿ ಭುವನೇಶ್ವರಿ ಬಾಯಿ ಮುಚ್ಚಿದಂತೆ, ಜೀವ ತೆಗೆದಂತೆ. ಕಡಿಮೆ ಮಕ್ಕಳು ಇದ್ದರೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇಲ್ಲ ಎಂದು ಯಾವ ಮುಠ್ಠಾಳ ಹೇಳಿದ್ದಾನೋ ಗೊತ್ತಿಲ್ಲ. ಅದು ಶುದ್ಧ ಸುಳ್ಳು. ಆಂಗ್ಲ ಮಾಧ್ಯಮದಲ್ಲಿ ಓದಿದವರು ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕನ್ನಡಕ್ಕಿರುವ ತಾಕತ್ತು ಇದು’ ಎಂದು ತಿಳಿಸಿದರು.
‘ಪಾಲಕರು ವೃದ್ಧಾಪ್ಯದ ದಿನಗಳನ್ನು ಮಕ್ಕಳೊಂದಿಗೆ ಸಂತಸದಿಂದ ಕಳೆಯಬೇಕಾದರೆ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಬೇಕು. ವೃದ್ಧಾಶ್ರಮ ಸೇರಬೇಕಾದರೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು’ ಎಂದರು.
‘ಯುರೋಪ್‍ನ 24 ರಾಷ್ಟ್ರಗಳಲ್ಲಿ ಆಂಗ್ಲ ಭಾಷೆ ಬಳಸುವುದಿಲ್ಲ. ಚೀನಾ, ಜಪಾನ್, ಮಂಗೋಲಿಯಾದಲ್ಲೂ ಇಂಗ್ಲಿಷ್ ಭಾಷೆ ಬಳಕೆಯಲ್ಲಿಲ್ಲ. ಮಾತೃಭಾಷೆಗಳೇ ಅಲ್ಲಿ ಪ್ರಧಾನವಾಗಿವೆ. ಪಾಲಕರು, ಆಂಗ್ಲ ಭಾಷೆ ವ್ಯಾಮೋಹ ಬಿಡಬೇಕು. ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು. ಈ ಮೂಲಕ ಕನ್ನಡ ಶಾಲೆ, ಭಾಷೆಯನ್ನು ಉಳಿಸಬೇಕು’ ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಬಳ್ಳಾರಿಯ ಮಯೂರಿ ಬಸವರಾಜ ಕುಚಿಪುಡಿ ನೃತ್ಯ ಪ್ರದರ್ಶಿಸಿದರು. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಎಸ್.ಎಸ್.ಸಿದ್ದಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ, ಚಂದ್ರಶೇಖರ ಪಾಟೀಲ, ಓಂಕಾಂತ ಸೂರ್ಯವಂಶಿ, ಸುರೇಶ ಅಕ್ಕಣ್ಣ, ಪ್ರಭುರಾವ್ ತೂಗಾವೆ, ಪ್ರಶಾಂತ ಮಠಪತಿ, ಎಂ.ಎಸ್. ಮನೋಹರ, ನಾಗಭೂಷಣ ಮಾಮಡಿ, ಶಾಲಿವಾನ್ ಉದಗಿರೆ, ಸಿದ್ಧಲಿಂಗ ಚಿಂಚೋಳಿ, ಶಾಂತಲಿಂಗ ಮಠಪತಿ, ಬಸವರಾಜ ಹಾವಣ್ಣ, ರಮೇಶ ಸಲಗರ, ಹಾವಶೆಟ್ಟಿ ಪಾಟೀಲ, ಬಾಬುರಾವ್ ದಾನಿ, ಶಿವಕುಮಾರ ಕಟ್ಟೆ, ಶಿವಶಂಕರ ಟೋಕರೆ, ಟಿ.ಎಂ. ಮಚ್ಚೆ, ಕೇಂದ್ರ ಕಸಾಪ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್. ಪಾಟೀಲ ಹಾಜರಿದ್ದರು. ಭಾನುಪ್ರಿಯಾ ಅರಳಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.
‘ಜಿಲ್ಲೆಯಲ್ಲಿ ಯಾವ ಶಾಲೆಗಳಿಗೆ ನಿವೇಶನ ಕೊರತೆ ಇದೆಯೋ ಅವುಗಳಿಗೆ ನಿವೇಶನ ಹಾಗೂ ಕನ್ನಡ ಮಾಧ್ಯಮದ 25 ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಕಲ್ಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ ಮಾಧ್ಯಮದ ಅನೇಕ ಶಾಲೆಗಳು ನಿವೇಶನ ಕೊರತೆ ಎದುರಿಸುತ್ತಿವೆ. ಅದನ್ನು ನಿವಾರಿಸುವ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹5 ಸಾವಿರ ಕೋಟಿ ಅನುದಾನ ಒದಗಿಸಿದೆ. ಈ ಪೈಕಿ ಜಿಲ್ಲೆಗೆ ₹400 ಕೋಟಿ ಅನುದಾನ ದೊರೆತಿದೆ. ಇದರಲ್ಲಿ ₹125 ಕೋಟಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗುವುದು. ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು. ಇನ್ನು ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆ ಸೇರಿದಂತೆ ಇತರೆ ಖರ್ಚು ನಿಭಾಯಿಸಲು ಸರ್ಕಾರದಿಂದ ಎಸ್‌ಡಿಎಂಸಿಗಳಿಗೆ ಹಣ ನೀಡಲಾಗುತ್ತಿದೆ. ಅದನ್ನು ಅವರು ತಮ್ಮ ವಿವೇಚನೆ ಬಳಸಿಕೊಂಡು ಖರ್ಚು ಮಾಡಬಹುದು. ಶಾಲೆಗಳ ವಿದ್ಯುತ್ ಶುಲ್ಕ ಸರ್ಕಾರದಿಂದ ಮನ್ನಾ ಮಾಡಲಾಗಿದೆ. ಇನ್ನು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನವೀಕರಣ ವಿಷಯದ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸುವೆ ಎಂದು ಹೇಳಿದರು.
ನಾಲ್ಕು ಗೊತ್ತುವಳಿ ಅಂಗೀಕಾರ; ಸಮ್ಮೇಳನದಲ್ಲಿ ಒಟ್ಟು ನಾಲ್ಕು ಗೊತ್ತುವಳಿ ಅಂಗೀಕರಿಸಲಾಯಿತು. ಅವುಗಳ ವಿವರ ಇಂತಿದೆ.
1. ಕರ್ನಾಟಕ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚಬಾರದು.
2. ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಸೇವೆಯನ್ನು ಪಠ್ಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳದೇ ಪಾಠ ಪ್ರವಚನಕ್ಕೆ ಸೀಮಿತಗೊಳಿಸಬೇಕು.
3. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಿ ಶಾಲೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.
4. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.