ಬೀದರ್: ಜ್ಯೋತಿರ್ಲಿಂಗ ದರ್ಶನ ಪಡೆದರೆ ಮೋಕ್ಷ ದೊರಕುತ್ತದೆ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಹೈದರಾಬಾದ್‍ನ ಜಿಯಾಗುಡ್ಡದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಾಗರ ಪಂಚಮಿ ನಿಮಿತ್ತ ಆಯೋಜಿಸಿದ್ದ ಐದು ದಿನಗಳ ಜಾತ್ರೆ, ಜ್ಯೋತಿರ್ಲಿಂಗಗಳ ದರ್ಶನ ಹಾಗೂ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವೇದ, ಪುರಾಣಗಳ ಪ್ರಕಾರ ಜ್ಯೋತಿರ್ಲಿಂಗ ದರ್ಶನ ಮಾಡಿದವರಿಗೆ ಪುನರ್ಜನ್ಮ ಇಲ್ಲ ಎಂದು ಹೇಳಿದರು.
ಜ್ಯೋತಿರ್ಲಿಂಗಳು ದೇವರು ನೆಲೆಸಿದ ತಾಣಗಳು. ಭಗವಂತನ ಸ್ವರೂಪಗಳು. ಇಡೀ ವಿಶ್ವದಲ್ಲೇ 12 ಜ್ಯೋತಿರ್ಲಿಂಗಗಳು ಇರುವುದು ಭಾರತದಲ್ಲಿ ಮಾತ್ರ ಎಂದರು.
ಜಗತ್ತು ಶೇಷ ನಾಗನ ಮೇಲೆ ನಿಂತಿದೆ. ಭಕ್ತಿಯಿಂದ ಸ್ಮರಿಸಿದರೆ ಆತ ಪ್ರಸನ್ನನಾಗುತ್ತಾನೆ. ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ ಎಂದು ಹೇಳಿದರು.
ಬಸವಾದಿ ಶರಣರು ದಯವೇ ಧರ್ಮದ ಮೂಲ ಎಂದಿದ್ದಾರೆ. ಕಲ್ಲು ನಾಗರಕ್ಕೆ ಹಾಲೆರೆದು ಭಕ್ತಿ ಸಮರ್ಪಿಸುವವರು ಜೀವಂತ ಹಾವನ್ನು ಕೊಲ್ಲಬಾರದು. ಯಾವ ಜೀವಿಗೂ ಹಿಂಸೆ ಕೊಡಬಾರದು ಎಂದರು.
500 ಮುತ್ತೈದೆಯರ ಉಡಿ ತುಂಬಲಾಯಿತು. ಶ್ರೀಕಾಂತ ಕುಡತೆ, ಮಠದ ಭೂ ದಾನಿ ಲಕ್ಷ್ಮಿನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ರಾಜಕುಮಾರ ಬಿರಾದಾರ ಅನ್ನ ದಾಸೊಹ ಮಾಡಿದರು. ಬಾಬುರಾವ್ ನಾವದಗಿ, ರಘು ಸೂರ್ಯವಂಶಿ, ಶಿವಾಜಿ ಬಿರಾದಾರ, ಜಗನ್ನಾಥ ಟೇಲರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.