ADVERTISEMENT

ಬೀದರ್‌: ಜನವರಿ 7ರಂದು ಸಮಾನತಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 16:15 IST
Last Updated 1 ಜನವರಿ 2024, 16:15 IST
ಬೆಲ್ದಾಳ ಸಿದ್ದರಾಮ ಶರಣರು
ಬೆಲ್ದಾಳ ಸಿದ್ದರಾಮ ಶರಣರು   

ಬೀದರ್‌: ಬಸವಕಲ್ಯಾಣ ಬಸವ ಮಹಾಮನೆ ಟ್ರಸ್ಟ್‌ನಿಂದ ಜನವರಿ 7ರಂದು ಸಮಾನತಾ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬೆಲ್ದಾಳ ಸಿದ್ದರಾಮ ಶರಣರು ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಸಮಾವೇಶದ ಪೂರ್ವಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ವರ್ಗ, ಜಾತಿ, ಧರ್ಮದ ಗೋಡೆಗಳನ್ನು ದಾಟಿ ಸಮಾನತೆ ತತ್ವದಿಂದ ನಡೆದು ಸಾಮರಸ್ಯದಿಂದ ಎಲ್ಲರೂ ಕೂಡಿ ಇದ್ದಾಗ ದೇಶ ಬಲಿಷ್ಠವಾಗುತ್ತದೆ. ಸಮಾಜ ಶಾಂತಿಯ ತೋಟವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಸಮಾನತಾ ಸಮಾವೇಶ ಪೂರಕವಾಗಲಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಜ.7ರಂದು ಬಸವಕಲ್ಯಾಣದಲ್ಲಿ ಸಮಾನತಾ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಜಾತ್ಯತೀತ, ಧರ್ಮಾತೀತ, ಪಕ್ಷಾತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಅದರ ಉದ್ದೇಶ ವಿವರಿಸಿದರು.

ADVERTISEMENT

ಮುಖಂಡ ಶ್ರೀಕಾಂತ ಸ್ವಾಮಿ ಮಾತನಾಡಿ, ಸಮಾನತಾ ಸಮಾವೇಶಕ್ಕೆ ನಾಡಿನ ಪೂಜ್ಯರು, ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿಮ ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಕಾರ‍್ಯಕ್ರಮದ ಯಶಸ್ವಿಗೆ ಬೀದರ್‌, ಕಲಬುರಗಿ ಭಾಗದ ಕ್ರಿಯಾಶೀಲ ನಾಯಕರ ಸಾಮಾಜಿಕ ಕಾರ್ಯಕರ್ತರ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಖದೀರ್, ಪ್ರಮುಖರಾದ ವಿನಯ್‌ ಮಾಳಗೆ, ಚಂದ್ರಶೇಖರ ಪಾಟೀಲ, ಶಿವಶಂಕರ ಟೋಕರೆ, ಮಹಾಲಿಂಗ, ಕೇದಾರನಾಥ ಪಾಟೀಲ, ರೋಹನ್‌, ಉದಯಕುಮಾರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.