ಬೀದರ್: ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಯನ್ನು ಬಲವಂತವಾಗಿ ಹನುಮಾನ ದೇವಸ್ಥಾನಕ್ಕೆ ಕರೆದೊಯ್ದು ಒತ್ತಾಯಪೂರ್ವಕವಾಗಿ ‘ಜೈ ಶ್ರೀರಾಮ್’ ಎಂದು ಹೇಳಿಸಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಮನಾಬಾದ್ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದಾರೆ.
ಹುಮನಾಬಾದ್ ಪಟ್ಟಣದ ಅಭಿಷೇಕ್, ರಿತೇಶ ರೆಡ್ಡಿ, ಸುನೀಲ ರೆಡ್ಡಿ ಹಾಗೂ ಅಭಿಷೇಕ ತೆಲಂಗ ಬಂಧಿತರು. ಹುಮನಾಬಾದ್ ತಾಲ್ಲೂಕಿನ ಹುಣಸಗೇರಾ ಗ್ರಾಮದ ದ್ವಿತೀಯ ಪಿಯು ವಿದ್ಯಾರ್ಥಿ ದರ್ಶನ್ ಲಕ್ಷ್ಮಣ ಕಟ್ಟಿಮನಿ ಹಲ್ಲೆಗೊಳಗಾದವರು.
‘ದರ್ಶನ್ ಎಂಬ ವಿದ್ಯಾರ್ಥಿ ಸೋಮವಾರ (ಜ.22) ‘ರಾಮ ದೇವರಲ್ಲ, ಡಾ.ಬಿ.ಆರ್. ಅಂಬೇಡ್ಕರ್ ದೇವರು’ ಎಂದು ತನ್ನ ವಾಟ್ಸ್ಯಾಪ್‌ನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದ. ಇದನ್ನು ನೋಡಿದ ಅಭಿಷೇಕ್, ರಿತೇಶ ರೆಡ್ಡಿ, ಸುನೀಲ ರೆಡ್ಡಿ ಹಾಗೂ ಅಭಿಷೇಕ ತೆಲಂಗ ಅವರು ದರ್ಶನ್‌ನನ್ನು ವಾಹನದಲ್ಲಿ ಹನುಮಾನ ದೇವಸ್ಥಾನಕ್ಕೆ ಕರೆದೊಯ್ದು, ಜೈ ಶ್ರೀರಾಮ್ ಎಂದು ಹೇಳಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಘಟನೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದರ್ಶನ್ ಕೂಡ ದೂರು ಕೊಟ್ಟಿದ್ದಾರೆ. ಆದಕಾರಣ ನಾಲ್ವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.