ಬೀದರ್: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶೀಘ್ರ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಜಾತ್ಯತೀತ ಜನತಾ ದಳದ ಕಾರ್ಯಕರ್ತರು ಸೋಮವಾರ ಇಲ್ಲಿಯ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ನೇತೃತ್ವದಲ್ಲಿ ರೈಲು ನಿಲ್ದಾಣ ಸಮೀಪದ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿದರು. ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಗೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಹೀಗಾಗಿ ನಗರದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದು ಆರೋಪಿಸಿದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ಒಳಚರಂಡಿಗಾಗಿ ಎಲ್ಲೆಂದರಲ್ಲಿ ಅಗೆಯಲಾದ ತಗ್ಗುಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಹುತೇಕ ಬಡಾವಣೆಗಳಲ್ಲಿ ಸ್ವಚ್ಛತೆ ಇಲ್ಲದೆ ದುರ್ವಾಸನೆ ಹರಡುತ್ತಿದೆ. ಮಲೇರಿಯಾದಂತಹ ರೋಗಗಳು ಹರಡುತ್ತಿವೆ ಎಂದು ಆಪಾದಿಸಿದರು.
ನಗರಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಜನ ತಮ್ಮ ಸಮಸ್ಯೆ ತೆಗೆದುಕೊಂಡು ನಗರಸಭೆ ಕಚೇರಿಗೆ ಹೋದರೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ತಿಳಿಸುತ್ತಿದ್ದಾರೆ. ಜಿಲ್ಲಾಧಿಕಾರಿ ನೇರ ಭೇಟಿ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜಿಲ್ಲಾ ಆಡಳಿತಕ್ಕೆ ಪತ್ರ ಬರೆದರೂ ಚುನಾವಣೆ ನಡೆಸಲಾಗಿಲ್ಲ. ಜೆಡಿಎಸ್‍ನಿಂದ ಮನವಿ ಸಲ್ಲಿಸಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದರು.
ಶೀಘ್ರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ನಗರದಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಹೀಂ ಖಾನ್ ಅವರು ಜನರ ಸಮಸ್ಯೆಗೆ ಸ್ಪಂದಿಸದೇ ಇರುವುದಕ್ಕೇ ಅವರ ಭಾವಚಿತ್ರಗಳ ಮೇಲೆ ಗುಣಕಾರದ ಚಿಹ್ನೆ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಅವರ ವಿರುದ್ಧ ಕೆಲವರು ಘೋಷಣೆಗಳನ್ನೂ ಕೂಗಿದರು.
ಜೆಡಿಎಸ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಮುಖಂಡರಾದ ಐಲಿನ್ ಜಾನ್ ಮಠಪತಿ, ಮಾರುತಿ ಬೌದ್ಧೆ, ಎಂ.ಡಿ. ಅಸದೊದ್ದಿನ್, ಅಶೋಕ ಕೋಡಗೆ, ಅಶೋಕ ಕರಂಜಿ, ಸುದರ್ಶನ್ ಸುಂದರರಾಜ್, ದೇವೇಂದ್ರ ಸೋನಿ, ನಬಿ ಖುರೇಶಿ, ಸೈಯದ್ ಸಜ್ಜಾದ್ ಸಾಹೇಬ, ಲಲಿತಾ ವಿಶ್ವನಾಥ, ನಗರಸಭೆ ಸದಸ್ಯರಾದ ರಾಜು ಚಿಂತಾಮಣಿ, ಸಂತೋಷಿ, ಇಂದುಮತಿ, ವೈಜಿನಾಥ, ದ್ರೌಪದಿ ಕಾಳೆ, ಶಿವಕುಮಾರ ಭಾವಿಕಟ್ಟಿ, ರೋಹಿನಾ ಯಾಸ್ಮಿನ್, ಸೈಯದ್ ಸೌದ್, ಭದ್ರುನ್ನಿಸಾ ಬೇಗಂ, ಪ್ರಮುಖರಾದ ಅರುಣ ಹೋತಪೇಟ್. ಸಂಗು ಚಿದ್ರಿ, ನವಾಜ್ ಖಾನ್, ಸಮದ್, ಮಲ್ಲಿಕಾರ್ಜುನ ನೇಳಗೆ, ತಾನಾಜಿ ತೋರಣಾ, ಶಿವಪುತ್ರ ಮಾಳಗೆ, ಸಂಗೀತಾ ಪಾಟೀಲ, ಶಾಂತಮ್ಮ, ಸೋನಿ ಮುಧೋಳ, ಅಝರ್, ಸರ್ಫರಾಜ್, ರೋಹನ್ ಕಾಂಬಳೆ, ಗಾಲಿಬ್ ಹಾಸ್ಮಿ, ರಮೇಶ ಚಿಟ್ಟಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.