ADVERTISEMENT

ಔರಾದ್ | ಸ್ಮಶಾನ ಭೂಮಿ ಮಂಜೂರಿಗೆ ಆಗ್ರಹಿಸಿ ಅರೆ ಬೆತ್ತಲೆ ಪ್ರತಿಭಟನೆ

ಹಳೆ ಸ್ಮಶಾನ ಭೂಮಿ ಒತ್ತುವರಿ ತೆರವಿಗೆ ಒತ್ತಾಯ; ತಾಲ್ಲೂಕಾಡಳಿತ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 15:02 IST
Last Updated 6 ಮಾರ್ಚ್ 2024, 15:02 IST
ಔರಾದ್ ತಹಶೀಲ್ದಾರ್ ಕಚೇರಿ ಎದುರು ವಿವಿಧ ಸಂಘಟನೆಗಳ ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು
ಔರಾದ್ ತಹಶೀಲ್ದಾರ್ ಕಚೇರಿ ಎದುರು ವಿವಿಧ ಸಂಘಟನೆಗಳ ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು   

ಔರಾದ್: ಹಳೆ ಸ್ಮಶಾನ ಭೂಮಿ ಒತ್ತುವರಿ ತೆರವು ಹಾಗೂ ಹೊಸದಾಗಿ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.

ಲಿಂಗಾಯತ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ, ನಾಗರಿಕ ಸಂಘರ್ಷ ಸಮಿತಿ, ಭಾರತ ರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಇಂದು 13ನೇ ದಿನಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಧರಣಿ ನಿರತರು ಅರೆ ಬೆತ್ತಲೆಯಾಗಿ ಪ್ರತಿಭಟಿಸಿದರು.

ಪಟ್ಟಣದಲ್ಲಿ ಹಿಂದೂಗಳಿಗೆ ಅಂತ್ಯಕ್ರಿಯೆ ಮಾಡಲು ತೊಂದರೆಯಾಗುತ್ತಿದೆ. ಇರುವ ಸ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಅದನ್ನು ತೆರವು ಮಾಡಬೇಕು. ಹೊಸದಾಗಿ ಪಟ್ಟಣದ ಹೊರಗೆ ಭೂಮಿ ಕೊಡಬೇಕು ಎಂದು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸ್ಪಂದನೆ ಸಿಗುತ್ತಿಲ್ಲ ಎಂದು ತಾಲ್ಲೂಕು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದರು.

ADVERTISEMENT

‘ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿ ನಮ್ಮ ಬೇಡಿಕೆ ಈಡೇರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಇದ್ದರೂ ಕೊಡದೆ ಇರುವುದು ಅನ್ಯಾಯದ ಪರಮಾವಧಿಯಾಗಿದೆ. ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ನಾಳೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಧರಣಿ ಶರಣಪ್ಪ ಪಾಟೀಲ ತಿಳಿಸಿದರು.

ಅನೀಲ ಬೇಲೂರೆ, ಶಂಕು ನಿಷ್ಪತೆ, ಮಹೇಶ ಸ್ವಾಮಿ, ರಜನಿ ದಾಮಾ, ಅಮಿತ ಶಿವಪೂಜೆ, ರವಿ ಹಳೆಂಬುರೆ, ಸಿದ್ದು ಚಾರೆ, ಸಚಿನ್ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಸ್ಮಶಾನ ಭೂಮಿ ಅತಿಕ್ರಮಣ ತೆರವಿನ ವಿಷಯದಲ್ಲಿ ಕಾನೂನು ರೀತಿ ಕೆಲಸ ಮಾಡುತ್ತಿದ್ದೇವೆ. ಹೊಸದಾಗಿ 10 ಎಕರೆ ಜಮೀನು ನೀಡುವ ಬೇಡಿಕೆ ಪರಿಶೀಲನೆಯಲ್ಲಿದೆ. ಸರ್ವೆ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.