ಔರಾದ್: ಸರ್ಕಾರದ ಅನುದಾನ ಖರ್ಚಾದರೂ ತಾಲ್ಲೂಕಿನ ಎಳು ಕಡೆ ಅಂಗನವಾಡಿ ಕಟ್ಟಡ ಪೂರ್ಣ ಆಗದೆ ಅಂಗನವಾಡಿ ಕೇಂದ್ರಗಳ ಸುಧಾರಣೆಗೆ ಸರ್ಕಾರ ಕೈಗೊಂಡ ಕ್ರಮಕ್ಕೆ ಹಿನ್ನಡೆಯಾದಂತಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡದ ಜತೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ತಾಲ್ಲೂಕಿನ ಕೌಡಗಾಂವ್, ಬರಗ್ಯಾನ್ ತಾಂಡಾ, ಕರಂಜಿ (ಬಿ), ಭಟಕುಳ ತಾಂಡಾ, ಕರಕ್ಯಾಳ, ಚಟ್ನಾಳ ಹಾಗೂ ಲಿಂಗದಳ್ಳಿ (ಜೆ) ಗ್ರಾಮಗಳಲ್ಲಿ ಹೊಸ ಅಂಗನವಾಡಿ ಕಟ್ಟಡಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಕಟ್ಟಡ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರೂ. 3 ರಿಂದ 5 ಅನುದಾನ ಬಿಡುಗಡೆ ಮಾಡಿ ಉಳಿದ ಹಣ ನರೇಗಾದಿಂದ ಬಳಸಿಕೊಳ್ಳಲು ತಿಳಿಸಿದೆ. 2017-18 ಹಾಗೂ 2018-19ರಲ್ಲಿ ಕೈಗೆತ್ತಿಕೊಂಡ ಏಳು ಅಂಗನವಾಡಿ ಕಟ್ಟಡ ಕಾಮಗಾರಿ ಇನ್ನು ತನಕ ಪೂರ್ಣ ಆಗದೆ ಇರುವುದು ಮೇಲಾಧಿಕಾರಿಗಳ ಗಮನಕ್ಕೂ ಬಂದಿದೆ.
ಹಳೆ ಅಂಗನವಾಡಿ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕೌಡಗಾಂವ್ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೊಸ ಅಂಗವಾಗಿ ಕಟ್ಟಡ ಏಕೆ ಪೂರ್ಣ ಆಗಿಲ್ಲ. ಈ ಬಗ್ಗೆ ಮಾಹಿತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಹೊಸ ಅಂಗನವಾಡಿ ಕೇಂದ್ರಗಳಿಗೆ ಇಲಾಖೆಯಿಂದ ಅನುದಾನ ನೀಡಿ ಆಯಾ ಗ್ರಾಮ ಪಂಚಾಯಿತಿಯವರಿಗೆ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳುವ ಆದೇಶವಿದೆ. ಆದರೆ ಇಷ್ಟು ವರ್ಷ ಏಕೆ ವಿಳಂಬ ಆಯಿತು ಎಂಬುದು ನಮಗೂ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಕೊಡುವಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಇಮಾಲಪ್ಪ ತಿಳಿಸಿದ್ದಾರೆ.
ಔರಾದ್ ಹಾಗೂ ಕಮಲನಗರ ತಾಲ್ಲೂಕು ಸೇರಿ ಒಟ್ಟು 390ರ ಪೈಕಿ 84 ಅಂಗನವಾಡಿ ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಅಂಗನವಾಡಿ ಕೇಂದ್ರಕ್ಕೆ ಸರ್ಕಾರ ಅನುದಾನ ನೀಡಿದರೂ ಕಟ್ಟಡ ಕಾಮಗಾರಿ ಪೂರ್ಣ ಮಾಡದೆ ವಂಚಿಸಲಾಗಿದೆ. ಈ ಕಟ್ಟಡ ಕಾಮಗಾರಿ ಪೂರ್ಣ ಆಗದ ಊರುಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಿ ಸರ್ಕಾರಕ್ಕೂ ನಷ್ಟ ಮಾಡಲಾಗುತ್ತಿದೆ. ಈ ಕುರಿತು ತನಿಖೆ ನಡೆಸಿ ಸಂಬಂಧಿತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಆಗ್ರಹಿಸಿದ್ದಾರೆ.
ಔರಾದ್ ತಾಲ್ಲೂಕಿನ ಕೆಲ ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ ಆಗಿರುವ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಪೂರ್ಣ ಮಾಡಿ ಸಂಬಂಧಿತರಿಗೆ ಹಸ್ತಾಂತರಿಸಲಾಗುವುದು.ಶಿವಕುಮಾರ ಘಾಟೆ, ಸಹಾಯಕ ನಿರ್ದೇಶಕ ತಾ.ಪಂ ಔರಾದ್
ಕೌಡಗಾಂವ್ ಅಂಗನವಾಡಿ ಕೇಂದ್ರದ ಕಟ್ಟಡ ಕಳೆದ ಐದಾರು ವರ್ಷದಿಂದ ನನೆಗುದಿಗೆ ಬಿದ್ದಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ. ಇನ್ನು ವಿಳಂಬ ಆದರೆ ಹೋರಾಟ ಮಾಡಲಾಗುವುದು.ರಾಜಕುಮಾರ ಕೋರೆ, ಅಧ್ಯಕ್ಷ, ಶಾಲಾ ಸಮಿತಿ ಕೌಡಗಾಂವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.