ADVERTISEMENT

ಬೀದರ್‌ | ಪಠ್ಯಕ್ಕೆ ಶಾಹೀನ್‌ ಪದವಿ ವಿದ್ಯಾರ್ಥಿಯ ಸಾಹಸಗಾಥೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 15:35 IST
Last Updated 22 ಜುಲೈ 2023, 15:35 IST
ಹಲವು ಪ್ರಶಸ್ತಿಗಳೊಂದಿಗೆ ಏಜಾಜ್ ನದಾಫ್
ಹಲವು ಪ್ರಶಸ್ತಿಗಳೊಂದಿಗೆ ಏಜಾಜ್ ನದಾಫ್   

ಬೀದರ್‌: ನಗರದ ಶಾಹೀನ್‌ ಶಿಕ್ಷಣ ಸಂಸ್ಥೆಯಲ್ಲಿ ಬಿ.ಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಏಜಾಜ್ ನದಾಫ್ ಅವರ ಸಾಹಸಗಾಥೆಯನ್ನು ಮಹಾರಾಷ್ಟ್ರ ಸರ್ಕಾರ ಅಲ್ಲಿನ ಪಠ್ಯಕ್ರಮಕ್ಕೆ ಸೇರಿಸಿದೆ.

ಆರನೇ ತರಗತಿಯ ಉರ್ದು ಪಠ್ಯಕ್ರಮದಲ್ಲಿ ಏಜಾಜ್‌ ಶೌರ್ಯದ ಕುರಿತ ಪಾಠ ಸೇರಿಸಲಾಗಿದೆ. 
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಅರ್ಧಾಪುರ ತಾಲ್ಲೂಕಿನ ಪರಡಿ ಗ್ರಾಮದ ಏಜಾಜ್, 2017ರ ಏಪ್ರಿಲ್ 30ರಂದು ಬಟ್ಟೆ ತೊಳೆಯಲು ಹೋಗಿ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ಜೀವದ ಹಂಗು ತೊರೆದು ರಕ್ಷಿಸಿ ಸಾಹಸ ಮೆರೆದಿದ್ದರು. ಇದಕ್ಕಾಗಿ ಅವರಿಗೆ 2018ರ ಜನವರಿ 26ರಂದು ‘ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ’ ಕೊಟ್ಟು ಗೌರವಿಸಲಾಗಿತ್ತು. ಈಗ ಇದೇ ವಿಷಯವನ್ನು ಪಠ್ಯಕ್ಕೆ ಸೇರಿಸಲಾಗಿದೆ. ಬೇರೆಯವರಿಗೂ ಇದರಿಂದ ಸ್ಫೂರ್ತಿ ಸಿಗಬೇಕು ಎನ್ನುವ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮಹಾರಾಷ್ಟ್ರ ಶಿಕ್ಷಣ ಸಂಸ್ಥೆಯ ಮೂಲಗಳು ತಿಳಿಸಿವೆ.

ಒಂದರಿಂದ 12ನೇ ತರಗತಿ ಸ್ವ ಗ್ರಾಮದಲ್ಲೇ ಶಿಕ್ಷಣ ಪೂರೈಸಿದ ಏಜಾಜ್‌ 10ನೇ ತರಗತಿಯಲ್ಲಿದ್ದಾಗ ಬಾಲಕಿಯರ ಜೀವ ಉಳಿಸಿದ್ದರು. ಬಡತನದ ಕಾರಣದಿಂದ 10ನೇ ತರಗತಿ ನಂತರ ಏಜಾಜ್‌ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದರು. ತೀವ್ರ ಸಂಕಷ್ಟದ ನಡುವೆ ಶೇ 82ರಷ್ಟು ಅಂಕ ಗಳಿಸಿ ಪಿಯು ಮುಗಿಸಿದ್ದರು. ನಂತರ ಉನ್ನತ ವ್ಯಾಸಂಗಕ್ಕೆ ತೊಡಕಾಗಿತ್ತು. ಈ ವಿಷಯ ತಿಳಿದು ಶಾಹೀನ್‌ ಶಿಕ್ಷಣ ಸಂಸ್ಥೆ ಅವರನ್ನು ದತ್ತು ಪಡೆದುಕೊಂಡಿತು. ಏಜಾಜ್‌ ಅವರು ಬಿ.ಎ ಜೊತೆಗೆ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.

ADVERTISEMENT

‘ಏಜಾಜ್ ಶೌರ್ಯದ ಕತೆ ಮಹಾರಾಷ್ಟ್ರದ ಪಠ್ಯಕ್ರಮಕ್ಕೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿಯಾಗಿದೆ. ಇದು ಮಕ್ಕಳಿಗೆ ಪ್ರೇರಣೆ ಆಗಲಿದೆ’ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ಪ್ರತಿಕ್ರಿಯಿಸಿದ್ದಾರೆ. 

ನನ್ನ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಪಠ್ಯಕ್ರಮಕ್ಕೆ ಸೇರಿಸಿರುವ ವಿಷಯ ತಿಳಿದು ಬಹಳ ರೋಮಾಂಚನವಾಗಿದೆ. 

–ಏಜಾಜ್‌ ನದಾಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.