ಔರಾದ್: 'ಛತ್ರಪತಿ ಶಿವಾಜಿ ಮಹಾರಾಜರು ಮೊಗಲರ ವಿರುದ್ಧ ಛಲದಿಂದ ಹೋರಾಡಿ ಭಾರತದ ಸ್ವಾಭಿಮಾನ ರಕ್ಷಿಸಿದರು. ಈ ಹೋರಾಟ ಭಾರತೀಯರ ದೇಶಾಭಿಮಾನ ಹೆಚ್ಚಲು ಪ್ರೇರಣೆಯಾಯಿತು’ ಎಂದು ವೈದ್ಯ ಡಾ.ಕಲ್ಲಪ್ಪ ಉಪ್ಪೆ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಜಗತ್ತಿನ ಇತಿಹಾಸ ಪುಟದಲ್ಲಿ ಶಿವಾಜಿ ಮಹಾರಾಜರಿಗೆ ಪ್ರಮುಖ ಸ್ಥಾನವಿದೆ. ಶಿವಾಜಿ ಕೇವಲ ಒಬ್ಬ ಯೋಧರಲ್ಲ. ಅವರು ಸ್ವಾತಂತ್ರ್ಯ ಹೋರಾಟಗಾರ, ಸ್ವಾಭಿಮಾನಿ, ದೇಶಾಭಿಮಾನಿ. ಇಂತಹ ಮಹಾರಾಜರ ಬದುಕು ಹಾಗೂ ಸಾಧನೆ ಮನೆ ಮನೆಗೆ ಮುಟ್ಟಬೇಕು’ ಎಂದರು.
‘ಶಿವಾಜಿ ಮಹಾರಾಜರು ಸರ್ವಧರ್ಮಗಳ ಬಗ್ಗೆ ಮಮತೆ ಹೊಂದಿದ್ದರು. ಜನಕಲ್ಯಾಣಕ್ಕಾಗಿ ಅವರು ರೂಪಿಸಿದ ಕಾಯ್ದೆಗಳು ಆಧುನಿಕ ಭಾರತದ ಆಡಳಿತದಲ್ಲೂ ಪ್ರಸ್ತುತವಾಗಿವೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪವಾರ್, ಸದಸ್ಯ ಧೋಡಿಬಾ ನರೋಟೆ, ಬನಸಿ ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶಾಲಿವಾನ ಉದಗಿರೆ, ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ, ಶರಣಪ್ಪ ಪಾಟೀಲ, ಜಂಜಿರಾವ ನಾಯಕ, ಶಿವಾಜಿರಾವ ಪಾಟೀಲ, ಶಿವಕುಮಾರ ಕಾಂಬಳೆ, ರಾಮಣ್ಣ ವಡೆಯರ್, ಬಾಲಾಜಿ ನರೋಟೆ, ರಹೀಮಸಾಬ್, ವೀರೇಶ ಅಲ್ಮಾಜೆ, ರಾಜಕುಮಾರ ಯಡವೆ, ಸಂಬಾಜಿ ಬ್ರಿಗೇಡರ್ ಅಧ್ಯಕ್ಷ ಖಂಡೇರಾವ್, ಸತೀಶ್ ವಾಸರೆ, ಗುಂಡಪ್ಪ ಮುದಾಳೆ, ಕೇರಬಾ ಪವಾರ್, ಬಾಬುರಾವ ತಾರೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಗೋವಿಂದ ಇಂಗಳೆ ಇದ್ದರು.
ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಕ್ಕಳು ಛತ್ರಪತಿ ಶಿವಾಜಿ, ಜೀಜಾಮಾತಾ ಅವರ ವೇಷ ಧರಿಸಿ ಗಮನ ಸೆಳೆದರು. ಯುವಕರು ಪಟ್ಟಣದ ವಿವಿಧೆಡೆ ಬೈಕ್ ಮೆರವಣಿಗೆ ನಡೆಸಿ ಶಿವಾಜಿ ಮಹಾರಾಜರ ಪರ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.