ADVERTISEMENT

ಔರಾದ್: ಉದ್ಭವಲಿಂಗ ಅಮರೇಶ್ವರ ಜಾತ್ರೆ ಸಂಭ್ರಮ 

ಫೆಬ್ರುವರಿ 19 ರಂದು ರಥೋತ್ಸವ: ರಾಜ್ಯ, ನೆರೆ ರಾಜ್ಯಗಳ ಜನರು ಭಾಗಿ, ದಾಸೋಹದ ವ್ಯವಸ್ಥೆ

ಮನ್ನಥಪ್ಪ ಸ್ವಾಮಿ
Published 18 ಫೆಬ್ರುವರಿ 2023, 22:30 IST
Last Updated 18 ಫೆಬ್ರುವರಿ 2023, 22:30 IST
ಔರಾದ್‌ನಲ್ಲಿ ಅಮರೇಶ್ವರ ಜಾತ್ರೆ ಅಂಗವಾಗಿ ಸಿದ್ಧಪಡಿಸಿದ ಸ್ವಾಗತ ಕಮಾನು
ಔರಾದ್‌ನಲ್ಲಿ ಅಮರೇಶ್ವರ ಜಾತ್ರೆ ಅಂಗವಾಗಿ ಸಿದ್ಧಪಡಿಸಿದ ಸ್ವಾಗತ ಕಮಾನು   

ಔರಾದ್: ಮಹಾಶಿವರಾತ್ರಿ ಹಾಗೂ ಅಮರೇಶ್ವರ ಜಾತ್ರೆಯನ್ನು ಇಲ್ಲಿ ವಿಶಿಷ್ಟ ಹಾಗೂ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ.

ಬುಧವಾರ ಪಾದಪೂಜೆ ಮೂಲಕ ಆರಂಭವಾದ ಜಾತ್ರೆ ಒಂದು ವಾರ ನಡೆಯಲಿದೆ. ಮಹಾ ಶಿವರಾತ್ರಿ ಅಂಗವಾಗಿ ಶನಿವಾರ ದೇವಸ್ಥಾನದಲ್ಲಿ ಭಕ್ತರ ಮಹಾಪೂರವೇ ಹರಿದು ಬಂತು. ಎಲ್ಲೆಡೆ ಓಂ ಭಲಾ, ಶಂಕರ ಭಲಾ ಜಯಘೋಷ ಮೊಳಗಿತು.

ಇಲ್ಲಿಯ ದೇವಸ್ಥಾನ ಬಹಳ ಪುರಾತನ ಹಾಗೂ ವಿಶಿಷ್ಟ ಕಲೆಯಿಂದ ಕೂಡಿದೆ. ಈ ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಲಿಂಗ ಸಹಸ್ರಾರು ಭಕ್ತರನ್ನು ಆಕರ್ಷಿಸಿದೆ. ಈ ಕಾರಣಕ್ಕೆ ಶಿವರಾತ್ರಿ ವೇಳೆ ದೂರ ದೂರದ ಭಕ್ತರು ಲಿಂಗ ದರ್ಶನ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ.

ADVERTISEMENT

‘ಈ ಲಿಂಗ ಹೊರ ಜಗತ್ತಿಗೆ ಗೊತ್ತಾಗಿದ್ದು ತುಂಬಾ ರೋಚಕತೆಯಿಂದ ಕೂಡಿದೆ. ಪಟ್ಟಣದ ಸಮೀಪ ಯನಗುಂದಾ ಎಂಬ ಗ್ರಾಮ ಇದೆ. ಅಲ್ಲಿಯ ಆಕಳುಗಳು ಪ್ರತಿದಿನ ಮೇಯಲು ಕಾಡಿಗೆ ಹೋಗುತ್ತಿದ್ದವು. ಹೀಗಿರುವಾಗ ಒಂದು ಆಕಳು ಕಾಡಿನಿಂದ ಮನೆಗೆ ಬಂದಾಗ ಅದರ ಕೆಚ್ಚಲಿನ ಹಾಲು ಖಾಲಿಯಾಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ರೈತ ಒಂದು ದಿನ ಆಕಳ ಹಿಂದೆ ಕಾಡಿನೊಳಗೆ ಹೋದ. ಆ ಆಕಳು ಎಂದಿನಂತೆ ಕಾಡಿನೊಳಗೆ ಹೋಗಿ ಅಲ್ಲಿಯ ಹುತ್ತಿದ ಮೇಲೆ ನಿಂತಾಗ ಹಾಲು ರಂಧ್ರದ ಮೂಲಕ ಒಳಗೆ ಹೋಗುತ್ತಿತ್ತು. ಅಚ್ಚರಿ ಚಕಿತನಾದ ರೈತ ಒಳಗೇನಿದೆ ಎಂದು ನೋಡಲು ಹುತ್ತು ಅಗೆಯಲು ಆರಂಭಿಸಿದಾಗ ಲಿಂಗ ಪತ್ತೆಯಾಗಿದೆ. ಹೀಗಾಗಿ ಈ ಲಿಂಗಕ್ಕೆ ಇಂದಿಗೂ ‘ಉದ್ಭವಲಿಂಗ’ ಎಂದು ಕರೆಯಲಾಗುತ್ತದೆ ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ.

‘ಮೂರು ದಶಕದ ಹಿಂದೆ ಇಲ್ಲಿಯ ಜಾತ್ರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿತ್ತು. ದೇಶದ ವಿವಿಧ ತಳಿಯ ಜಾನುವಾರುಗಳ ಮೇಳ ನಡೆಯುತ್ತಿತ್ತು. ರಾಜಸ್ಥಾನ ಸೇರಿ ದೇಶದ ವಿವಿಧೆಡೆಯ ಒಂಟೆಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದವು. ಈ ಜಾತ್ರೆ ರಾಜ್ಯದ ಏಕೈಕ ಒಂಟೆ ಜಾತ್ರೆ ಎಂಬ ಖ್ಯಾತಿ ಪಡೆದಿತ್ತು. ಆದರೆ ಕ್ರಮೇಣವಾಗಿ ಒಂಟೆ ಸಂತತಿ ಕಡಿಮೆಯಾಯಿತು. ಅವುಗಳು ಬರುವುದು ನಿಂತು ಹೋಗಿದೆ’ ಎನ್ನುತ್ತಾರೆ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ

ಇಲ್ಲಿ ಈಗಲೂ ಜಾನುವಾರುಗಳಿಗಾಗಿ ಗೋಶಾಲೆ ಮತ್ತು ಭಕ್ತರಿಗಾಗಿ ದಾಸೋಹದ ವ್ಯವಸ್ಥೆ ಇದೆ. ಭಕ್ತರ ನೆರವಿನಿಂದ ಅವುಗಳಿಗೆ ಮೇವು, ನೀರು ಪೂರೈಸಲಾಗುತ್ತಿದೆ. ದೂರದಿಂದ ಆಗಮಿಸುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಇದೆ.

ಜಾತ್ರೆಯ ಮತ್ತೊಂದು ಭಾಗ ಕುಸ್ತಿ. ಇಲ್ಲಿ ಈಗಲೂ ಅಂತರರಾಜ್ಯ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರ, ತೆಲಂಗಾಣದ ಕುಸ್ತಿ ಪಟುಗಳು ಇಲ್ಲಿಗೆ ಬರುತ್ತಾರೆ. ಹೀಗಾಗಿ ಕುಸ್ತಿ ಪ್ರೇಮಿಗಳಿಗೆ ಈ ಜಾತ್ರೆ ಹೇಳಿ ಮಾಡಿಸಿದಂತಿದೆ.

19ರ ನಸುಕಿನಲ್ಲಿ ಅಗ್ನಿ ಪೂಜೆ, 20ರಂದು ಸೋಮವಾರ ನಸುಕಿನ ಜಾವ ರಥೋತ್ಸವ ಹಾಗೂ ಮಧ್ಯಾಹ್ನ ಪಶು ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.