ಚಿಟಗುಪ್ಪ: ಶಾಲಾ–ಕಾಲೇಜುಗಳು ಪ್ರಾರಂಭವಾಗಿ ಆರು ತಿಂಗಳು ಕಳೆದರೂ, ಗ್ರಾಮಾಂತರ ಪ್ರದೇಶಗಳಿಂದ ಹೋಬಳಿ ಕೇಂದ್ರಗಳಿಗೆ ಶಿಕ್ಷಣ ಪಡೆಯಲು ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್ ಸಿಗುತ್ತಿಲ್ಲ.
ಶಾಲಾ, ಕಾಲೇಜಿಗೆ ತೆರಳಲು ಪರದಾಡುತ್ತಿರುವ ವಿದ್ಯಾರ್ಥಿಗಳು ಬಸ್ ಸೌಲಭ್ಯ ಒದಗಿಸದ ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲ್ಲೂಕಿನ ಬಸಿಲಾಪುರ್, ನಿರ್ಣಾ ವಾಡಿ, ಮಾಡಗೂಳ, ಮುದ್ನಾಳ, ರಾಮಪುರ್ ಗ್ರಾಮಗಳ ವಿದ್ಯಾರ್ಥಿಗಳು ಸಮೀಪದ ಹೊಬಳಿ, ಪಟ್ಟಣ ಕೇಂದ್ರಕ್ಕೆ ಪ್ರೌಢ ಶಾಲೆ, ಪಿಯುಸಿ, ಪದವಿ ಕಾಲೇಜಿಗೆ ಅಭ್ಯಾಸಕ್ಕೆ ತೆರಳಲು ಬಸ್ ವ್ಯವಸಸ್ಥೆ ಇಲ್ಲದಕ್ಕೆ ನಿತ್ಯ ಪರದಾಡುವಂತಾಗಿದೆ.
ಮುದ್ನಾಳ, ರಾಮಪುರ್, ಮಾಡಗೂಳ, ನಿರ್ಣಾ ವಾಡಿ ಗ್ರಾಮಗಳ ವಿದ್ಯಾರ್ಥಿಗಳು ನಿತ್ಯವೂ ನಡೆದುಕೊಂಡು ಶಾಲೆ-ಕಾಲೇಜುಗಳಿಗೆ ಬರುತ್ತಿದ್ದಾರೆ.
ಒಂದೆರಡು ಗ್ರಾಮಗಳಿಗೆ ಮುಂಜಾನೆ-ಸಂಜೆ ಒಂದು ಬಸ್ ಸಾರಿಗೆ ಸಂಸ್ಥೆ ಓಡಿಸುತ್ತಿದ್ದರೂ ನಿಗದಿತ ಸಮಯಕ್ಕೆ ಬರುವುದಿಲ್ಲ ಬಂದರೂ ವಿದ್ಯಾರ್ಥಿಗಳು ತರಗತಿಗಳು ತಪ್ಪಿಹೋಗುತ್ತವೆ ಎಂಬ ಕಾರಣಕ್ಕೆ ಪ್ರಾಣ ಪಣಕ್ಕಿಟ್ಟು ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದನ್ನು ಕಂಡೂ ಕಾಣದಂತಿರುವ ಅಧಿಕಾರಿಗಳು ಹೆಚ್ಚುವರಿ ಬಸ್ ಹಾಕುವುದಕ್ಕೆ ಮುಂದಾಗುತ್ತಿಲ್ಲ.
ವಿದ್ಯಾರ್ಥಿಗಳು ಹೇಗಾದರೂ ಮಾಡಿಯಾದರು ಹೋಗುತ್ತಾರೆ, ಆದರೆ ವಿದ್ಯಾರ್ಥಿನಿಯರಿಗಂತು ತುಂಬ ಸಮಸ್ಯೆಯಾಗುತ್ತಿದೆ, ಯಾರ ಮುಂದೆ ನಮ್ಮ ನೋವು ತೋಡಿಕೊಳ್ಳಬೇಕು ಎಂಬುದ್ದೆ ನಮಗೆ ತಿಳಿಯದಂತಾಗಿದೆ ಎಂದು ಹತ್ತನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ವಿಶಾಲಾಕ್ಷಿ ತಿಳಿಸುತ್ತಾರೆ.
ಸರ್ಕಾರ ಈ ವರ್ಷ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗಿದೆ, ಬಸ್ ಪೂರ್ತಿ ಮಹಿಳೆಯರು ತುಂಬಿರುವುದರಿಂದ ಒಳಗಡೆ ಹತ್ತುವುದೇ ಅಸಾಧ್ಯವಾಗುತ್ತಿದೆ ಎಂದು ವಿದ್ಯಾರ್ಥಿ ಶಿವಕುಮಾರ ತಿಳಿಸಿದರು.
ನಿತ್ಯವೂ ಖಾಸಗಿ ಆಟೊಗಳಿಗೆ ದುಬಾರಿ ಹಣ ಕೊಟ್ಟು ಶಾಲೆ ಕಾಲೇಜುಗಳಿಗೆ ಹೋಗುವುದು ಬಡವರಿಗೆ ಅಸಾಧ್ಯ ಹೀಗಾಗಿ ಸಾರಿಗೆ ಸಂಸ್ಥೆಯವರು ತಕ್ಷಣ ಎಚ್ಚೆತ್ತು ತಾಲ್ಲೂಕಿನ ಯಾವ ಊರುಗಳಿಗೆ ಬಸ್ ಸೌಲಭ್ಯ ಅವಶ್ಯಕತೆ ಇದೆಯೋ ಅಲ್ಲಿ ನಿತ್ಯ ಕಳಿಸುವ ಕಾರ್ಯ ಮಾಡಬೇಕು ಎಂಬುದ್ದು ಪಾಲಕರಾದ ಅರ್ಜುನ್, ಕಲ್ಯಾಣರಾವ್ ಅವರ ಆಗ್ರಹ.
ರಾಮಪುರ್ ಗ್ರಾಮದಲ್ಲಿ ಇದುವರೆಗೆ ಬಸ್ ತಂಗುದಾಣವೂ ನಿರ್ಮಾಣವಾಗಿಲ್ಲ ಮಳೆಗಾಲ, ಬೇಸಿಗೆ ಕಾಲದಲ್ಲಿ ಪ್ರಯಾಣಿಕರು ನಿಲ್ಲುವುದಕ್ಕೂ ಸ್ಥಳವಿಲ್ಲದ ಪರಿಸ್ಥಿತಿಯಿದೆ ಎಂದು ಗ್ರಾಮದ ನಿವಾಸಿ ಮಹೇಶ್ ತಿಳಿಸುತ್ತಾರೆ.
ಮಳೆಗಾಲ, ಬೇಸಿಗೆ ಕಾಲದಲ್ಲಿ ವಿದ್ಯಾರ್ಥಿಗಳು ಎರಡು-ಮೂರು ಕಿ.ಮೀ ನಡೆದುಕೊಂಡು ಶಾಲೆ, ಕಾಲೇಜುಗಳಿಗೆ ಹೋಗುವುದು ತುಂಬ ಕಷ್ಟಕರವಾದ ಕೆಲಸವಿದೆ.
ತಾಲ್ಲೂಕಿನ ಯಾವ ಯಾವ ಊರಿಗೆ ಬಸ್ ಸೌಲಭ್ಯ ಇಲ್ಲವೊ ಅವುಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆವಿಠಲರಾವ್ ಕದಮ್ ಬಸ್ ಘಟಕ ವ್ಯವಸ್ಥಾಪಕರು ಹುಮನಾಬಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.