ADVERTISEMENT

ಹುಲಸೂರ ತಾಲ್ಲೂಕಿನ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ಹುಲಸೂರ ತಾಲ್ಲೂಕಿನಲ್ಲಿ 15 ಶಿಕ್ಷಕರು ಮಾತ್ರ ಲಭ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 6:42 IST
Last Updated 19 ಅಕ್ಟೋಬರ್ 2024, 6:42 IST
ಸಿದ್ದವೀರಯ್ಯ
ಸಿದ್ದವೀರಯ್ಯ   

ಹುಲಸೂರ: ತಾಲ್ಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅಗತ್ಯ ಸಂಖ್ಯೆಯ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಯತ್ತ ಆಸಕ್ತಿ ಕಳೆದುಕೊಳ್ಳುವಂತಾಗಿದೆ.

ದೈಹಿಕ ಶಿಕ್ಷಕರು ಇಲ್ಲದ ಕಾರಣ ಇತರ ಪಠ್ಯ ಬೋಧನೆ ಮಾಡುವ ಶಿಕ್ಷಕರೇ ಆಟೋಟ ಪ್ರಕ್ರಿಯೆ ನೋಡಿಕೊಳ್ಳುವ ಅನಿವಾರ್ಯತೆ ಇದೆ. ತಾಲ್ಲೂಕಿನಲ್ಲಿ 4 ಸರ್ಕಾರಿ ಪ್ರೌಢಶಾಲೆಗಳು, 4 ಅನುದಾನಿತ ಪ್ರೌಢ ಶಾಲೆಗಳಿದ್ದು, 27 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಈ ಪೈಕಿ 15 ಶಾಲೆಗಳಲ್ಲಿ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರು ಇದ್ದಾರೆ. ಒಟ್ಟಾರೆ ತಾಲ್ಲೂಕಿನಲ್ಲಿ 35 ಶಾಲೆಗಳ ಪೈಕಿ 15 ಶಾಲೆಗಳಲ್ಲಿ ಮಾತ್ರ ಆಟೋಟ ಹೇಳಿಕೊಡುವವರು ಇದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ 1,098, ಪ್ರಾಥಮಿಕ ವಿಭಾಗದಲ್ಲಿ 3,895 ವಿದ್ಯಾರ್ಥಿಗಳು ತಾಲ್ಲೂಕಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

‘ಈಗಿರುವ ಶಿಕ್ಷಕರಲ್ಲಿ ಕೆಲವರು ನಿವೃತ್ತಿ ಅಂಚಿನಲ್ಲಿದ್ದು, ಅದರಲ್ಲೇ ಹಲವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಅಂತೆಯೇ ತಾಲ್ಲೂಕಿನ ವಿದ್ಯಾರ್ಥಿಗಳು ಆಟೋಟ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅನ್ಯ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಪಾಠ ಬೋಧನೆ ಮಾಡಲಾಗುತ್ತದೆ. ಆದರೆ, ದೈಹಿಕ ಶಿಕ್ಷಣ ಹಾಗೂ ಸ್ವಯಂ ಉದ್ಯೋಗ ತರಬೇತಿ ಶಿಕ್ಷಕರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲು ಅವಕಾಶ ಇಲ್ಲ. ವಾರ್ಷಿಕ ಕ್ರೀಡಾಕೂಟ ಬಂದರೆ ಆತಂಕವಾಗುತ್ತದೆ. ಈ ವರ್ಷ ದಸರಾ ಕ್ರೀಡಾಕೂಟವನ್ನು ನಿರ್ವಹಣೆ ಮಾಡುವವರಿಲ್ಲದೇ ಪರದಾಡಬೇಕಾಯಿತು’ ಎಂದು ಶಿಕ್ಷಕರೊಬ್ಬರು ನೋವು ತೋಡಿಕೊಂಡರು.

‘ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ. ಕಡ್ಡಾಯವಾಗಿ ಕ್ರೀಡೆಯಲ್ಲಿ ಮಕ್ಕಳು ಪಾಲ್ಗೊಳ್ಳಬೇಕು ಎಂಬ ಮಾತು ವೇದಿಕೆಗಳಿಗೆ ಸೀಮಿತವಾಗಿದೆ. 2007ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಿರುವುದೇ ಕೊನೆ ಅತಿಥಿ ಶಿಕ್ಷಕರ ನೇಮಕದಲ್ಲೂ ಅವಕಾಶ ನೀಡದಿರುವುದು ವಿಪರ್ಯಾಸ. ಒಂದು ಶಾಲೆಯನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವಲ್ಲಿ ಮುಖ್ಯ ಶಿಕ್ಷಕರಷ್ಟೇ ಹೊಣೆ ಅಲ್ಲದೇ ದೈಹಿಕ ಶಿಕ್ಷಣ ಶಿಕ್ಷಕರ ಮೇಲೂ ಅಷ್ಟೆ ಇರುತ್ತದೆ. ಆದ್ದರಿಂದ ಸರ್ಕಾರ ಗಮನಹರಿಸಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಬೇಕು’ ಎಂದು ದೈಹಿಕ ಶಿಕ್ಷಕ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೊಂಡಾಪುರ ಒತ್ತಾಯಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದ್ದು ಈ ವರ್ಷ ಕ್ರೀಡಾಕೂಟ ಆಯೋಜನೆ ಮಾಡುವುದು ಕಷ್ಟವಾಯಿತು. ಇದ್ದ ಶಿಕ್ಷಕರೂ ವರ್ಗಾವಣೆಯಾಗಿ ಹೋಗಿರುವುದು ಸಮಸ್ಯೆ ಹೆಚ್ಚಿಸಿದೆ.
ಸಿದ್ದವೀರಯ್ಯ ರುದನೂರ, ಬಿಇಒ, ಹುಲಸೂರ ಮತ್ತು ಬಸವಕಲ್ಯಾಣ
ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. ಅತಿಥಿ ಶಿಕ್ಷಕರ ನೇಮಕದ ಸಾಧಕ-ಬಾಧಕ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಸಚಿವರ ಗಮನಕ್ಕೆ ತಂದು ಕ್ರಮಕ್ಕೆ ಮನವಿ ಮಾಡಲಾಗುವುದು.
ವಿಜಯಸಿಂಗ್‌, ವಿಧಾನ ಪರಿಷತ್ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.