ಕಮಲನಗರ: ತಾಲ್ಲೂಕಿನ ಹೊರಂಡಿ ಗ್ರಾಮದಲ್ಲಿ ಲಕ್ಷ್ಮೀ ದೇವಸ್ಥಾನ ನಿರ್ಮಾಣ ಮಾಡಲು ಸಮೀಪದ ಗೋಡೆ ಅಗೆಯುತ್ತಿದ್ದಾಗ ಪುರಾತನ ಕಾಲದ 1,192 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.
‘ಅವುಗಳ ಮೇಲೆ ಅರಬ್ಬಿ ಲಿಪಿಯಲ್ಲಿ ಬರೆಯಲಾಗಿದೆ. ಅವು ಮೊಗಲರ ಕಾಲದಲ್ಲಿ ಚಲಾವಣೆಯಲ್ಲಿದ್ದವು’ ಎಂದು ಪಿಎಸ್‍ಐ ನಂದಿನಿ.ಎಸ್ ತಿಳಿಸಿದರು.
ಹೊರಂಡಿ ಗ್ರಾಮದಲ್ಲಿ ಸೂರ್ಯಕಾಂತ ದಿಗಂಬರರಾವ ಪಾಟೀಲ ಅವರ ಮನೆ ಹತ್ತಿರ ಲಕ್ಷ್ಮೀ ದೇಗುಲ ನಿರ್ಮಿಸಲಾಗುತ್ತಿದೆ. ದೇಗುಲದ ಆವರಣ ಭರ್ತಿ ಮಾಡಲು ಪಕ್ಕದ ಹಳೆ ಗೋಡೆ ಅಗೆಯಲಾಗುತ್ತಿತ್ತು. ಆಗ ಕಾರ್ಮಿಕರಿಗೆ ಕುಡಿಕೆಯಲ್ಲಿ ಬೆಳ್ಳಿ ನಾಣ್ಯಗಳು ಕಂಡಿವೆ. ಅವರು ತಕ್ಷಣ ಮನೆ ಮಾಲೀಕರ ಗಮನಕ್ಕೆ ತಂದಿದ್ದಾರೆ.
‘ಮಾಲೀಕರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ನಾವು ಹಾಗೂ ಪಿಎಸ್‍ಐ ನಂದಿನಿ, ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದೆವು. ಬಳಿಕ ನಾಣ್ಯದ ತುಣುಕುಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು’ ಎಂದು ತಹಶೀಲ್ದಾರ್ ರಮೇಶ ಪೆದ್ದೇ ತಿಳಿಸಿದರು.
ಒಟ್ಟು 1,192 ದೊಡ್ಡ ಹಾಗೂ ಚಿಕ್ಕ ನಾಣ್ಯಗಳಿವೆ. 13 ಕೆ.ಜಿ ತೂಕ ಇದೆ. ಅವುಗಳ ಮೌಲ್ಯ ತಿಳಿದುಬಂದಿಲ್ಲ ಎಂದು ಹೇಳಿದರು.
ಕಮಲನಗರ ಪೊಲೀಸ್ ಠಾಣೆಯ ನಾಣ್ಯದ ತುಣುಕುಗಳನ್ನು ತಹಶೀಲ್ದಾರ್ ಮೂಲಕ ಪಟ್ಟಣದ ಖಜಾನೆಗೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.