ADVERTISEMENT

ಸರಳ ಬೀದರ್‌ ಉತ್ಸವ ಆಚರಣೆಗೆ ನಿರ್ಧಾರ

ಡಿಸೆಂಬರ್ 28 ರಂದು ಉದ್ಯಮಿಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 12:59 IST
Last Updated 6 ಡಿಸೆಂಬರ್ 2018, 12:59 IST
ಬೀದರ್‌ನಲ್ಲಿ ಗುರುವಾರ ನಡೆದ ಬೀದರ್‌ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಮಾತನಾಡಿದರು. ಶಾಸಕ ರಹೀಂ ಖಾನ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇದ್ದಾರೆ
ಬೀದರ್‌ನಲ್ಲಿ ಗುರುವಾರ ನಡೆದ ಬೀದರ್‌ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಮಾತನಾಡಿದರು. ಶಾಸಕ ರಹೀಂ ಖಾನ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇದ್ದಾರೆ   

ಬೀದರ್‌: ಜಿಲ್ಲೆಯಲ್ಲಿ ಬರ ಇರುವ ಕಾರಣ ಬೀದರ್‌ ಉತ್ಸವವನ್ನು ಡಿಸೆಂಬರ್ 29 ಹಾಗೂ 30 ರಂದು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾ ಆಡಳಿತ ನಿರ್ಧರಿಸಿದೆ.

ಪ್ರವಾಸೋದ್ಯಮ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ಉತ್ಸವದ ಮುನ್ನಾದಿನವಾದ ಡಿ.28 ರಂದು ಉದ್ಯಮಿಗಳ ಸಮಾವೇಶ ನಡೆಸಲು ತೀರ್ಮಾನಿಸಿದೆ.

ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ನಡೆದ ಬೀದರ್‌ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರ ಸಲಹೆಗಳನ್ನು ಸ್ವೀಕರಿಸುವ ಮೂಲಕ ನಿರ್ಧಾರ ಪ್ರಕಟಿಸಲಾಯಿತು.

ADVERTISEMENT

ನೆರೆಯ ಜಿಲ್ಲೆಯಿಂದಲೂ ಜನರು ಬರುವಂತಾಗಬೇಕು. ತಾಲ್ಲೂಕು ಕೇಂದ್ರಗಳಿಂದ ಬಂದು ಹೋಗಲು ಸಾರಿಗೆ ವ್ಯವಸ್ಥೆ ಮಾಡಬೇಕು. ಉತ್ಸವ ನಡೆಯುವ ಸ್ಥಳದಲ್ಲಿ ಆಹಾರ ಮಳಿಗೆಗಳನ್ನು ತೆರೆಯಬೇಕು. ಇದರಿಂದ ಜನರು ದೀರ್ಘ ಸಮಯದ ವರೆಗೂ ಕುಳಿತುಕೊಳ್ಳಲು ಸಾಧ್ಯವಾಗಲಿದೆ ಎಂದು ಸಂಘ ಸಂಸ್ಥೆಗಳ ಮುಖಂಡರು ಸಲಹೆ ನೀಡಿದರು.

ಉತ್ಸವಕ್ಕೆ ಪ್ರಸಿದ್ಧ ಖಾಸಗಿ ಸಹಭಾಗಿತ್ವದಲ್ಲಿ ಹಿಂದಿ ಚಲನಚಿತ್ರ ನಟ ಅಮಿತಾಬ್‌ ಬಚ್ಚನ್‌ , ರಾಷ್ಟ್ರಮಟ್ಟದ ಕಲಾವಿದರನ್ನು ಕರೆಸಬೇಕು. ಉತ್ಸವದಲ್ಲಿ ನಾಡಿನ ಚರಿತ್ರೆ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದರು.

ನೆರೆಯ ರಾಜ್ಯಗಳಲ್ಲೂ ಪ್ರಚಾರ ಮಾಡಬೇಕು. ಜಿಲ್ಲೆಯನ್ನು ಪ್ರವೇಶ ಮಾಡುವ ಮಾರ್ಗದಲ್ಲಿ ಬೃಹತ್‌ ಪೋಸ್ಟರ್‌ಗಳನ್ನು ಅಳವಡಿಸಬೇಕು. ಸಾಹಸ ಕ್ರೀಡೆಗಳನ್ನು ಆಯೋಜಿಸಬೇಕು. ಅತಿಥಿಗಳು ಬರುವ ವರೆಗೂ ಕಾಯದೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಶುರು ಮಾಡಿ ಕಲಾವಿದರಿಗೆ ಹೆಚ್ಚಿನ ಸಮಯಾವಕಾಶ ಕೊಡಬೇಕು ಎಂದು ಕೋರಿದರು.

ರಾಜ್ಯ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ರಾಜ್ಯ ಸಂಗೀತ ಅಕಾಡೆಮಿ ಸದಸ್ಯ ಎಸ್‌.ವಿ.ಕಲ್ಮಠ, ಲಲಿತ ಕಲಾ ಅಕಾಡೆಮಿ ಸದಸ್ಯ ಯೋಗೇಶ ಮಠದ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್‌.ಮನೋಹರ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ, ಪ್ರಭುರಾವ್ ಕಂಬಳಿವಾಲೆ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ನಾಗಶೆಟ್ಟಿ ಧರಂಪುರ, ರಘುಶಂಖ ಭಾತಂಬ್ರಾ, ಸಾಮಾಜಿಕ ಕಾರ್ಯಕರ್ತೆ ಗಂಗಮ್ಮ ಫುಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಇರ್ಷಾದ್‌ ಪೈಲ್ವಾನ್, ಮುಬಾಶಿರ್‌ ಸಿಂದೆ, ಝುಬೇರ್‌ ಹುಸೇನ್, ಅನಿಲ ಬೆಲ್ದಾರ್‌, ರಾಜು ಕಡ್ಯಾಳ, ಫರ್ನಾಂಡೀಸ್‌ ಹಿಪ್ಪಳಗಾಂವ್, ಚಂದ್ರಕಾಂತ ಹಿಪ್ಪಳಗಾಂವ್, ಬಾಬು ವಾಲಿ, ಸುಬ್ಬಣ್ಣ ಕರಕನಳ್ಳಿ ಪಾಲ್ಗೊಂಡಿದ್ದರು.

ಉತ್ಸವಕ್ಕೆ ₹ 80 ಲಕ್ಷ
‘ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಗತಕಾಲದ ವೈಭವ ಮರುಕಳಿಸುವಂತೆ ಮಾಡುವುದು ಬೀದರ್‌ ಉತ್ಸವದ ಉದ್ದೇಶವಾಗಿದೆ. ಸರ್ಕಾರ ₹ 80 ಲಕ್ಷ ಬಿಡುಗಡೆ ಮಾಡಿದೆ. ಇದರ ಮಿತಿಯಲ್ಲೇ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ತಿಳಿಸಿದರು.

‘ಉತ್ಸವಕ್ಕೆ ಹೆಚ್ಚು ಜನ ಬರುವಂತೆ ಮಾಡಬೇಕು. ಉತ್ತಮ ಕಲಾವಿದರು ಕಾರ್ಯಕ್ರಮ ನೀಡುವಂತಾಗಬೇಕು. ಈ ದಿಸೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಇಂದಿನಿಂದಲೇ ಸಿದ್ಧತೆ ಆರಂಭಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಬರ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರಿಗೆ ಮೇವು ಕಿಟ್‌ ಕೊಡಲು ನಿರ್ಧರಿಸಲಾಗಿದೆ. ಡಿ.15ರಂದು ಜಿಲ್ಲೆಯ ಎಲ್ಲ ಕೆರೆಗಳ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಜಿಲ್ಲಾ ಆಡಳಿತ ಉಚಿತ ಜೆಸಿಬಿ ಒದಗಿಸಲಿದ್ದು, ರೈತರು ಕೆರೆಯಲ್ಲಿನ ಮಣ್ಣು ಒಯ್ಯಬಹುದಾಗಿದೆ. ಕೆರೆಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನೂ ಆರಂಭಿಸಿಲಾಗುವುದು ’ ಎಂದು ಹೇಳಿದರು.

‘ಗ್ರಾಮಗಳಲ್ಲಿ ನರೇಗಾ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ರಾಜ್ಯೋತ್ಸವದ ಆಯ್ಕೆ ಸಮಿತಿ ಬೇಡ: ಹಿಪ್ಪಳಗಾಂವ್
ಬೀದರ್‌:
‘ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಅರ್ಹರನ್ನು ಆಯ್ಕೆ ಮಾಡಿ ಸನ್ಮಾನಿಸಿಲ್ಲ. ಆಯ್ಕೆ ಸಮಿತಿ ಸದಸ್ಯರೇ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದರು. ಅಂತಹ ಲೋಪ ನಡೆಯದಂತೆ ಜಿಲ್ಲಾ ಆಡಳಿತ ಎಚ್ಚರ ವಹಿಸಬೇಕು. ಆ ಆಯ್ಕೆ ಸಮಿತಿಯಲ್ಲಿ ಇದ್ದ ವರನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಬೇಕು’ ಎಂದು ಕಾಂಗ್ರೆಸ್ ಮುಖಂಡ ಚಂದ್ರಕಾಂತ ಹಿಪ್ಪಳಗಾಂವ ಮನವಿ ಮಾಡಿದರು.

‘ಉತ್ಸವದಲ್ಲಿ ಅರ್ಹ ಕಲಾವಿದರಿಗೆ ವೇದಿಕೆ ದೊರೆಯಬೇಕು. ಕಲಾವಿದರ ಆಯ್ಕೆಯಲ್ಲಿ ಹಸ್ತಕ್ಷೇಪ ಹಾಗೂ ಸ್ವಜನಪಕ್ಷಪಾತ ಇರಬಾರದು. ಸಂಗೀತ, ಕಲೆ ಹಾಗೂ ನೃತ್ಯದ ಬಗೆಗೆ ಗೊತ್ತಿರುವವರು ಮಾತ್ರ ಸಮಿತಿಯಲ್ಲಿ ಇರಬೇಕು. ಒಟ್ಟಾರೆ ಇದು ಜನರ ಉತ್ಸವವಾಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.