ಬೀದರ್: ‘ಸರ್ ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮದಿನದ ಅಂಗವಾಗಿ ಸೆ. 15ರಂದು ಸಂಜೆ 6.30ಕ್ಕೆ ಎಂಜಿನಿಯರ್ಸ್ ದಿನಾಚರಣೆಯನ್ನು ನಗರದ ಗುರುನಾನಕ ಝೀರಾ ರಸ್ತೆಯ ಲಾವಣ್ಯ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್(ಎಸಿಇ) ಅಧ್ಯಕ್ಷ ಅಶೋಕ ಉಪ್ಪೆ ತಿಳಿಸಿದರು.
ಪ್ರತಿ ವರ್ಷ ಎಂಜಿನಿಯರ್ಸ್ ದಿನ ಆಚರಿಸಲಾಗುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ಆಹ್ವಾನಿಸುತ್ತ ಬರಲಾಗಿದೆ. ಈ ಸಲ ರಾಜಕಾರಣಿ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರೈಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್, ಕಲಿಕಾ ಸ್ಟೀಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಯೆಶ್ ಅನಿಲ್ ಗೋಯಲ್ ಅತಿಥಿಗಳಾಗಿ ಭಾಗವಹಿಸುವರು ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಿಗ್ಗೆ 9.30ಕ್ಕೆ ಬಸವೇಶ್ವರ ವೃತ್ತದಿಂದ ಪ್ರಮುಖ ಮಾರ್ಗಗಳ ಮೂಲಕ ಕಾರ್ಯಕ್ರಮ ನಡೆಯಲಿರುವ ಸ್ಥಳದ ವರೆಗೆ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2.30ರವರೆಗೆ ವಿವಿಧ ಸ್ಪರ್ಧೆಗಳ ಲಾಟರಿ ಎತ್ತುವ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.
ನಮ್ಮ ಸಂಘದಿಂದ ಆರಂಭದಿಂದಲೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ತಾಂತ್ರಿಕತೆ ಕುರಿತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಬರುವ ಜನವರಿಯಲ್ಲಿ ಮೂರು ದಿನಗಳ ‘ಮಟೀರಿಯಲ್ ಎಕ್ಸಿಬಿಷನ್’ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
1999ರಲ್ಲಿ ಹುಟ್ಟಿಕೊಂಡಿರುವ ಎಸಿಇ ಈಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಆರಂಭದಲ್ಲಿ 5 ಜನ ಸದಸ್ಯರು ಕೂಡಿಕೊಂಡು ಈ ಸಂಘ ಹುಟ್ಟು ಹಾಕಲಾಗಿತ್ತು. ಈಗ ಇದರಲ್ಲಿ 30 ಜನ ಸದಸ್ಯರಿದ್ದಾರೆ. ಯಶಸ್ವಿಯಾಗಿ 25 ವರ್ಷ ಪೂರೈಸಿದೆ. ಬರುವ ದಿನಗಳಲ್ಲಿ 100 ಸಿವಿಲ್ ಎಂಜಿನಿಯರ್ಸ್‌ಗಳನ್ನು ಇದರ ಸದಸ್ಯರಾಗಿ ಮಾಡುವ ಗುರಿ ಇದೆ ಎಂದರು.
ಸಂಘದ ಸಂಸ್ಥಾಪಕ ಸದಸ್ಯ ವೀರಶೆಟ್ಟಿ ಮಣಗೆ ಮಾತನಾಡಿ, ಸಂಘದ 25ನೇ ಬೆಳ್ಳಿ ಹಬ್ಬದ ಅಂಗವಾಗಿ ವಿಶೇಷ ಸ್ಮರಣಿಕೆ ಸಂಚಿಕೆ ಹೊರತರಲಾಗುತ್ತಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಹೆಸರಾಂತ ಸಿವಿಲ್ ಎಂಜಿನಿಯರ್ಸ್‌ಗಳಿಂದ ಲೇಖನ ಬರೆಸಲಾಗಿದೆ. ಈ ಮೂಲಕ ತಾಂತ್ರಿಕ ಜ್ಞಾನ ಪಸರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈ ಭಾಗದವರು ಹಿಂದುಳಿದಿದ್ದೇವೆ ಎನ್ನುವುದು ಮಾನಸಿಕತೆ ಅಷ್ಟೇ. ಆದರೆ, ವಾಸ್ತವದಲ್ಲಿ ಹಿಂದುಳಿದಿಲ್ಲ. ಬೀದರ್ ನೋಡಿ ಬೆಂಗಳೂರು ಕಟ್ಟಿದ್ದಾರೆ ಎಂಬ ಮಾಹಿತಿಯಿದೆ. ಅದನ್ನು ದಾಖಲಿಸುವ ಕೆಲಸ ಮಾಡಲಾಗುವುದು. ಕಟ್ಟಡ ನಿರ್ಮಾಣ ಕ್ಷೇತ್ರ ಇಂದು ವ್ಯಾಪಕವಾಗಿ ಬೆಳೆದಿದೆ. ಅದರಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಬೇಕಾಗಿದೆ. ‘ಎಂಜಿನಿಯರ್ಸ್ ಬಿಲ್’ ತರಬೇಕೆನ್ನುವುದು ದಶಕಗಳ ಬೇಡಿಕೆಯಾಗಿದೆ ಎಂದರು.
ಇನ್ನು, ಸಂಘದಲ್ಲಿ ಸದಸ್ಯತ್ವ ನೀಡುವುದಕ್ಕೂ ಮುನ್ನ ಗುಣಮಟ್ಟ ಪರಿಶೀಲಿಸಲಾಗುತ್ತಿದೆ. ಬಂದವರಿಗೆಲ್ಲ ಸದಸ್ಯತ್ವ ನೀಡುತ್ತಿಲ್ಲ. ಈಗಾಗಲೇ ಸುಮಾರು ₹40 ಲಕ್ಷ ವೆಚ್ಚ ಮಾಡಿ, ಸ್ವರ್ಣ ನಂದನ ಲೇಔಟ್‌ನಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ಮೇಲಿಂದ ಮೇಲೆ ಟೆಕ್ನಿಕಲ್ ಸೆಷೆನ್‌ಗಳು ನಡೆಯುತ್ತವೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ದಿಲೀಪ್ ನಿಟ್ಟೂರೆ, ಸದಸ್ಯರಾದ ಮಹೇಶ, ಸಂತೋಷಕುಮಾರ ಸುಂಕದ, ಶಿವಕುಮಾರ ಪಾಟೀಲ, ಪಿ.ಎಸ್. ರಾಚೋರಿ, ಸಂದೀಪ್ ಕಾಡಾದೆ, ಮನೋಹರ್ ದೀಕ್ಷಿತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.