ಬೀದರ್: ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಲ್ಲಿನ ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು ಎನ್ನುವುದು ಸೇರಿದಂತೆ ಇಲ್ಲಿಯ ಜಿಲ್ಲಾ ರಂಗಮಂದಿರದಲ್ಲಿ ನಡೆದ 13ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆರು ಪ್ರಮುಖ ನಿರ್ಣಯಗಳನ್ನು ಕೊಳ್ಳಲಾಯಿತು.
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಹೊಸ ನೀತಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ವಿಲೀನಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಕೋವಿಡ್ ಲಸಿಕೆ ಶೀಘ್ರ ಜನಸಾಮಾನ್ಯರಿಗೆ ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು. ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತೀಯರ ಸಾಧನೆಯನ್ನು ದಾಖಲೀಕರಿಸಿ ಹಲವು ಸಂಪುಟಗಳಲ್ಲಿ ಹೊರ ತರಬೇಕು. ವಾಯು ವೈಪರಿತ್ಯ, ಭೂ ಕುಸಿತ ಹಾಗೂ ನೆರೆ ಹಾವಳಿ ತಡೆಗಟ್ಟಿ ಸುಸ್ಥಿರ ಬದುಕು ನಡೆಸಲು ಪರಿಸರದಲ್ಲಿ ಮಾನವನ ಹಸ್ತಕ್ಷೇಪ ನಿಲ್ಲಿಸಬೇಕು ಎನ್ನುವವು ಇತರ ನಿರ್ಣಯಗಳಾಗಿವೆ.
ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಮಂಡಳಿ ಸದಸ್ಯ ಮಹಾರುದ್ರಪ್ಪ ಆಣದೂರೆ ಅವರು ಮಂಡಿಸಿದ ನಿರ್ಣಯಗಳನ್ನು ಮತ್ತೊಬ್ಬರು ಸದಸ್ಯ ಬಾಬುರಾವ್ ದಾನಿ ಅನುಮೋದಿಸಿದರು. ಸಭಿಕರು ಒಪ್ಪಿಗೆ ಸೂಚಿಸಿದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಸಂಜೀವಕುಮಾರ ಸ್ವಾಮಿ, ಮಂಜುನಾಥ ಬೆಳಕೆರೆ, ದೇವಿಪ್ರಸಾದ್ ಕಲಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.