ADVERTISEMENT

ಬೀದರ್‌ | ಸೋಯಾ ಮಾರಾಟಕ್ಕೆ ಸರ್ಕಾರದ ಕಠಿಣ ನಿಯಮ; ಖಾಸಗಿಯತ್ತ ರೈತರು

ಖಾಸಗಿಯಲ್ಲಿ ಮಾರಾಟ ಮಾಡಿದ ಕ್ಷಣವೇ ಹಣ ಪಾವತಿ; ಸರ್ಕಾರದಿಂದ ತಿಂಗಳ ನಂತರ ಪಾವತಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ನವೆಂಬರ್ 2024, 5:37 IST
Last Updated 9 ನವೆಂಬರ್ 2024, 5:37 IST
<div class="paragraphs"><p>ಬೀದರ್‌ನ ಗಾಂಧಿ ಗಂಜ್‌ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿದ ಸೋಯಾ ಅವರೆಯನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕ  </p></div>

ಬೀದರ್‌ನ ಗಾಂಧಿ ಗಂಜ್‌ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿದ ಸೋಯಾ ಅವರೆಯನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕ

   

–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಬೀದರ್‌: ಬೆಂಬಲ ಬೆಲೆ ಯೋಜನೆಯಡಿ ಸೋಯಾ ಅವರೆ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ, ರೈತರು ಅದರತ್ತ ಆಸಕ್ತಿಯೇ ತೋರಿಸುತ್ತಿಲ್ಲ. ಬದಲಾಗಿ ಖಾಸಗಿ ಮಳಿಗೆಗಳ ಕಡೆಗೆ ಮುಖ ಮಾಡಿದ್ದಾರೆ.

ADVERTISEMENT

ಸರ್ಕಾರ ಪ್ರತಿ ಕ್ವಿಂಟಲ್‌ ಸೋಯಾಬೀನ್‌ಗೆ ₹4,892 ನಿಗದಿಪಡಿಸಿದೆ. ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸುವ ಅವಧಿಯನ್ನು ನವೆಂಬರ್‌ 20ರವರೆಗೆ ವಿಸ್ತರಿಸಿದೆ. ಹೀಗಿದ್ದರೂ ರೈತರು ಆಸಕ್ತಿ ತೋರುತ್ತಿಲ್ಲ.

ಸರ್ಕಾರದ ಕಠಿಣ ನಿಯಮಗಳಿಂದ ರೈತರು ಅನಿವಾರ್ಯವಾಗಿ ಖಾಸಗಿ ಮಳಿಗೆಗಳಲ್ಲಿ ಸೋಯಾ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಗರದ ಬೇಳೆ ಕಾಳುಗಳ ಪ್ರಮುಖ ಮಾರುಕಟ್ಟೆ ಗಾಂಧಿ ಗಂಜ್‌ಗೆ ನಿತ್ಯ ಅಪಾರ ಪ್ರಮಾಣದಲ್ಲಿ ಬರುತ್ತಿರುವ ಸೋಯಾಬೀನ್‌.

ಗಾಂಧಿ ಗಂಜ್‌ವೊಂದರಲ್ಲೇ 200ಕ್ಕೂ ಅಧಿಕ ಮಳಿಗೆಗಳಿವೆ. ಒಂದು ಮಳಿಗೆಯವರು ನಿತ್ಯ ಏನಿಲ್ಲವೆಂದರೂ 100ರಿಂದ 150 ಕ್ವಿಂಟಲ್‌ ಸೋಯಾ ಖರೀದಿಸುತ್ತಿದ್ದಾರೆ. ಸೋಯಾ ಗುಣಮಟ್ಟಕ್ಕೆ ತಕ್ಕಂತೆ ₹3,500ರಿಂದ ₹5,000 ಬೆಲೆಯಲ್ಲಿ ಖರೀದಿಸುತ್ತಿದ್ದಾರೆ. ಮಳೆಗೆ ಕಾಳು ಸ್ವಲ್ಪ ಹಸಿಯಿದ್ದರೂ, ಗುಣಮಟ್ಟ ಕಮ್ಮಿಯಿದ್ದರೂ ಖಾಸಗಿಯವರು ಖರೀದಿಸುತ್ತಿದ್ದಾರೆ.

ಹಸಿಯಾದ ಕಾಳು ಖರೀದಿಸಿ ಅವರೇ ಒಣಗಿಸಿಕೊಳ್ಳುತ್ತಿದ್ದಾರೆ. ಮೇಲಿಂದ ಕಾಳು ಮಾರಾಟ ಮಾಡಿದ ಆ ಕ್ಷಣದಲ್ಲೇ ಅವರಿಗೆ ಹಣ ಪಾವತಿ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಹೆಚ್ಚಿನ ರೈತರು ಗಾಂಧಿ ಗಂಜ್‌ ಮಾರುಕಟ್ಟೆಗೆ ಕಾಳು ತೆಗೆದುಕೊಂಡು ಬರುತ್ತಿದ್ದಾರೆ. ಅತ್ಯಧಿಕ ಪ್ರಮಾಣದಲ್ಲಿ ಸೋಯಾ ಬರುತ್ತಿದ್ದು, ಮಾರುಕಟ್ಟೆಯ ತುಂಬೆಲ್ಲ ಅದರ ಕುಂಪೆಗಳನ್ನು ಹಾಕಲಾಗಿದ್ದು, ನಡೆದಾಡಲು ಕಷ್ಟವಾಗುತ್ತಿದೆ.

ಇನ್ನು, ಕೆಲ ರೈತರು ಮುಂಗಾರಿಗೆ ಮುನ್ನವೇ ಅಡತ್‌ ಅಂಗಡಿಗಳ ಮಾಲೀಕರಿಂದ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಸಾಲದ ರೂಪದಲ್ಲಿ ಹಣ ತೆಗೆದುಕೊಳ್ಳುತ್ತಾರೆ. ನಿಮ್ಮ ಮಳಿಗೆಯಲ್ಲೇ ಕಾಳು ಮಾರಾಟ ಮಾಡುತ್ತೇವೆ ಎಂದು ಮೌಖಿಕ ರೂಪದಲ್ಲಿ ವಾಗ್ದಾನ ಮಾಡಿರುತ್ತಾರೆ. ಹೀಗೆ ಪರಸ್ಪರ ಕೊಡು ಕೊಳ್ಳುವಿಕೆಯ ಸಂಬಂಧ ಇರುವುದರಿಂದ ರೈತರಿಗೂ ಗಾಂಧಿ ಗಂಜ್‌ ಅಡತ್‌ನವರಿಗೂ ಮೊದಲಿನಿಂದಲೂ ವ್ಯಾಪಾರದ ಅವಿನಾಭಾವ ಸಂಬಂಧವಿದೆ.

ಸರ್ಕಾರ ಸೋಯಾಗೆ ಉತ್ತಮ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಅದರ ನಿಯಮಗಳು ರೈತರಿಗೆ ಹಿಡಿಸುತ್ತಿಲ್ಲ. ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಬೇಕು. ಆನಂತರ ಬೆಳೆಗಳನ್ನು ಪರಿಶೀಲಿಸುತ್ತಾರೆ. ಗುಣಮಟ್ಟ ಸರಿಯಿರದಿದ್ದರೆ ಖರೀದಿಸುವುದಿಲ್ಲ. ಒಂದು ವೇಳೆ ಗುಣಮಟ್ಟ ಪರೀಕ್ಷೆಯಲ್ಲಿ ಪಾಸಾದರೂ ಅದನ್ನು ಖರೀದಿಸಿದ ನಂತರ ಒಂದು ತಿಂಗಳ ಬಳಿಕ ರೈತರಿಗೆ ಹಣ ಪಾವತಿಸಲಾಗುತ್ತದೆ. ಹೀಗಾಗಿಯೇ ಹೆಚ್ಚಿನ ರೈತರು ಖರೀದಿ ಕೇಂದ್ರಗಳತ್ತ ಮುಖವೇ ಮಾಡುತ್ತಿಲ್ಲ. ರೈತರು ಒಲವು ತೋರಿಸದ ಕಾರಣಕ್ಕಾಗಿಯೇ ಸರ್ಕಾರ ಖರೀದಿ ಕೇಂದ್ರಗಳಲ್ಲಿ ಎರಡನೇ ಸಲ ಹೆಸರು ನೋಂದಣಿ ಅವಧಿ ವಿಸ್ತರಿಸಿದೆ.

ಬೀದರ್‌ನ ಗಾಂಧಿ ಗಂಜ್‌ ಮಾರುಕಟ್ಟೆಯಲ್ಲಿ ರೈತರಿಂದ ಸೋಯಾ ಖರೀದಿಸುತ್ತಿರುವ ಅಡತ್‌ ಮಾಲೀಕರು

ಜಿಲ್ಲೆಯ ಪ್ರಮುಖ ಬೆಳೆ ಸೋಯಾ 

ಹಿಂದೆ ಬೀದರ್‌ ಜಿಲ್ಲೆಯಲ್ಲಿ ಕಬ್ಬು ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಈಗ ಬಹುತೇಕ ರೈತರು ಸೋಯಾ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಒಟ್ಟು ಪ್ರದೇಶದಲ್ಲಿ ಶೇ 60ಕ್ಕಿಂತ ಅಧಿಕ ಪ್ರದೇಶದಲ್ಲಿ ಸೋಯಾ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶ 4.16 ಲಕ್ಷ ಹೆಕ್ಟೇರ್‌ ಇದೆ. ಇದರಲ್ಲಿ 2.25 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾ ಬೆಳೆಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಸೋಯಾ ಅವರೆಯಿಂದ ಹೆಚ್ಚಿನ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ ಬೆಲೆಯೂ ಉತ್ತಮವಿದೆ. ಹೀಗಾಗಿಯೇ ರೈತರು ಸೋಯಾ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಕಬ್ಬು ತೊಗರಿ ಹೆಸರು ಉದ್ದು ಬೆಳೆಯುತ್ತಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಒಟ್ಟು 2.25 ಲಕ್ಷ ಹೆಕ್ಟೇರ್‌ನಲ್ಲಿ ರೈತರು ಸೋಯಾ ಬಿತ್ತನೆ ಮಾಡಿದ್ದರು. ಈ ಪೈಕಿ 3836 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಮಳೆಗೆ ಹಾಳಾಗಿದೆ
-–ಜಿಯಾವುಲ್ಲಾ ಕೆ. ಜಂಟಿ ಕೃಷಿ ನಿರ್ದೇಶಕ ಬೀದರ್‌
ರೈತರು ಬೆಳೆದ ಬೆಳೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರೂ ಖರೀದಿ ಕೇಂದ್ರದವರು ತಿರಸ್ಕರಿಸುತ್ತಾರೆ. ಹೀಗಾಗಿ ರೈತರು ಖಾಸಗಿ ಕಡೆ ಮುಖ ಮಾಡುತ್ತಿದ್ದಾರೆ
–ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.