ADVERTISEMENT

ಬೀದರ್‌: ಗಣೇಶ ಮಂಟಪದಲ್ಲಿ ಕಲಾ ಲೋಕ ಅನಾವರಣ

ಗಮನ ಸೆಳೆಯುತ್ತಿರುವ ಬೃಹದಾಕಾರದ ಮೂರ್ತಿಗಳು

ಚಂದ್ರಕಾಂತ ಮಸಾನಿ
Published 3 ಸೆಪ್ಟೆಂಬರ್ 2019, 19:45 IST
Last Updated 3 ಸೆಪ್ಟೆಂಬರ್ 2019, 19:45 IST
ಬೀದರ್‌ನ ಗಾಂಧಿಗಂಜ್ ಮೋತಿಬಜಾರ್‌ ವರಸಿದ್ಧಿ ವಿನಾಯಕ ಗಣೇಶ ಮಂಡಳ ಪ್ರತಿಷ್ಠಾಪಿಸಿರುವ ಶಿವ ಪಾರ್ವತಿ ಗಣಪ
ಬೀದರ್‌ನ ಗಾಂಧಿಗಂಜ್ ಮೋತಿಬಜಾರ್‌ ವರಸಿದ್ಧಿ ವಿನಾಯಕ ಗಣೇಶ ಮಂಡಳ ಪ್ರತಿಷ್ಠಾಪಿಸಿರುವ ಶಿವ ಪಾರ್ವತಿ ಗಣಪ   

ಬೀದರ್‌: ಜಿಲ್ಲೆಯಲ್ಲಿ ಬರ ಮುಂದುವರಿದಿದೆ. ಆದರೆ ಗಣೇಶ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗಿಲ್ಲ. ನಗರವೊಂದರಲ್ಲೇ ಸುಮಾರು 200 ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಕೇಂದ್ರ ಸ್ಥಾನದಲ್ಲಿರುವ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಿರುವ ಗಣಪತಿಗಳು ಭಕ್ತರ ಗಮನ ಸೆಳೆಯುತ್ತಿವೆ.

ನಗರದ ಬಹುತೇಕ ಗಣೇಶ ಮಂಡಳಗಳು ಈ ಬಾರಿ ಎತ್ತರದ ಗಣಪತಿಗಳನ್ನೇ ಸ್ಥಾಪಿಸಿವೆ. ಬೃಹದಾಕಾರದ ಗಣಪತಿ ಮೂರ್ತಿಗಳನ್ನು ಹೈದರಾಬಾದ್‌ನ ಧೂಳ್‌ಪೇಟ್‌ ಹಾಗೂ ಜಹೀರಾಬಾದ್‌ನಿಂದ ತರಲಾಗಿದೆ. ಗಣೇಶ ಮಂಡಳಗಳ ಪದಾಧಿಕಾರಿಗಳು ಇದಕ್ಕಾಗಿ ಹದಿನೈದು ದಿನಗಳಿಂದ ತಯಾರಿ ನಡೆಸಿ ವಿಘ್ನ ನಿವಾರಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಿದ್ದಾರೆ. ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಗಳು ವಿಶಿಷ್ಟವಾಗಿವೆ. ಪ್ರತಿಯೊಂದು ಮೂರ್ತಿ ಭಿನ್ನವಾಗಿವೆ.

ಗಾಂಧಿಗಂಜ್ ಮೋತಿಬಜಾರ್‌ ವರಸಿದ್ಧಿ ವಿನಾಯಕ ಗಣೇಶ ಮಂಡಳವು ಗಾಂಧಿ ಗಂಜ್‌ ಪ್ರದೇಶದಲ್ಲಿ ಕಲಾ ಲೋಕವನ್ನೇ ಸೃಷ್ಟಿಸಿದೆ. 40X60 ಅಡಿ ಜಾಗದಲ್ಲಿ ಉತ್ತರ ಭಾರತದ ಪುರಾತನ ಮಂದಿರವೊಂದರ ಪ್ರತಿಕೃತಿಯನ್ನು ನಿರ್ಮಿಸಿದೆ. ರಕ್ತ ಕೆಂಪಿನ ಮಂಟಪ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದೆ.

ADVERTISEMENT

ಪ್ರವೇಶ ದ್ವಾರದಿಂದ ಒಳಗೆ ಪ್ರವೇಶಿಸುತ್ತಲೇ ದೇವಲೋಕಕ್ಕೆ ಪ್ರವೇಶ ಮಾಡಿದಂತೆ ಭಾಸವಾಗುತ್ತಿದೆ. ಪಿಒಪಿಯಲ್ಲಿ ನಿರ್ಮಿಸಿದ ಆನೆಯ ಚಿತ್ರಗಳು ಗಮನ ಸೆಳೆಯುತ್ತಿವೆ. ಮಂಟಪದಲ್ಲಿ ಶಿವ ಪಾರ್ವತಿಯ ಸಮ್ಮುಖದಲ್ಲಿ ಬಾಲ ಗಣಪ ವಿಶ್ರಮಿಸುತ್ತಿದ್ದಾನೆ.

ಶಿವಲಿಂಗದ ಮೇಲೆ ಕ್ಷೀರಾಭಿಷೇಕ ಮಾಡುತ್ತಿರುವ ಗೋವಿನ ಕೆಚ್ಚಲಿನಿಂದ ಬಾಲ ಗಣಪ ಹಾಲು ಕುಡಿಯುತ್ತಿರುವ ದೃಶ್ಯ ಮನಮೋಹಕವಾಗಿದೆ.

‘ಮಹಾರಾಷ್ಟ್ರದ ಉದಗಿರ ಹಾಗೂ ಕೊಲ್ಕತ್ತದ ಕಲಾವಿದರು ಇಲ್ಲಿ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ. ಇದಕ್ಕಾಗಿಯೇ ವರಸಿದ್ಧಿ ವಿನಾಯಕ ಗಣೇಶ ಮಂಡಳವು ಸುಮಾರು ₹ 15 ಲಕ್ಷ ಖರ್ಚು ಮಾಡಿದೆ. ಇಲ್ಲಿ ಬರುವ ಪ್ರತಿಯೊಬ್ಬ ಭಕ್ತನಿಗೆ ಪ್ರಸಾದ ವಿತರಿಸುತ್ತಿದೆ. ಬುಧವಾರ ಅನ್ನ ಪ್ರಸಾದದ ವ್ಯವಸ್ಥೆ ಮಾಡಿದೆ’ ಎಂದು ಮಂಡಳದ ದಿಗಂಬರ ಪೋಲಾ ಹೇಳುತ್ತಾರೆ.

ಯಂತ್ರ ಚಾಲಿತ ಪಾರ್ವತಿ ಗಣಪತಿ: ಭೋವಿ ಸಮಾಜ ಗಜಾನನ ಸಮಿತಿಯು 1981ರಿಂದ ವಿಶಿಷ್ಟ ರೂಪದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದೆ. ಯಂತ್ರಚಾಲಿತ ರೂಪಕಗಳನ್ನು ಪ್ರದರ್ಶಿಸುವುದೇ ಇಲ್ಲಿಯ ವಿಶೇಷತೆಯಾಗಿದೆ. ಈ ಬಾರಿ ಪಾರ್ವತಿ ತನ್ನ ನೆಚ್ಚಿನ ಪುತ್ರ ಬಾಲ ಗಣಪನನ್ನು ಎತ್ತಿ ಆಡಿಸುತ್ತಿರುವ ಮನಮೋಹಕ ದೃಶ್ಯವನ್ನು ಸೃಷ್ಟಿಸಲಾಗಿದೆ.

ಸುನೀಲ ಮದ್ಯಾವರ, ಶ್ರೀಕಾಂತ ಹಿವರೆ ಹಾಗೂ ಶುಭಂ ಭೋಸಲೆ ಅವರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪ್ರತಿಮೆಯನ್ನು ನಿರ್ಮಿಸಿ ಇಲ್ಲಿಗೆ ತರಿಸಿದ್ದಾರೆ. ಸಮಾಜದ ಮಹಿಳೆಯರಾದ ಸುರೇಖಾ ಭೋಸಲೆ, ಕೋಮಲ್ ಯುವರೆ, ಅಂಬಿಕಾ ಚಿಂಕಲವಾರ ಹಾಗೂ ಶುಭಾಂಗಿ ಅವರು ಪ್ರತಿಮೆಗೆ ಇನ್ನಷ್ಟು ಅಲಂಕಾರ ಮಾಡುವ ಮೂಲಕ ಜೀವಕಳೆ ತುಂಬಿದ್ದಾರೆ.

‘ಪಾರ್ವತಿ ಹಾಗೂ ಗಣಪತಿ ಪ್ರತಿಮೆಗಷ್ಟೇ ₹ 50 ಸಾವಿರ ಖರ್ಚು ಮಾಡಲಾಗಿದೆ. ಅಲಂಕಾರ ಸೇರಿ ಒಟ್ಟು ₹ 1 ಲಕ್ಷ ವರೆಗೂ ಖರ್ಚು ಮಾಡಲಾಗಿದ್ದು, ಸಮಾಜದ ಯುವಕರು ಹಾಗೂ ಭಕ್ತರ ಸಹಕಾರದಿಂದ ಮಂಟಪವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ’ ಎಂದು ಹೇಳುತ್ತಾರೆ ಮಂಡಳದ ಅಧ್ಯಕ್ಷ ಶೈಲೇಂದ್ರ ಹಿವಳೆ.

ಯಂತ್ರ ಚಾಲಿತ ದೃಶ್ಯವನ್ನು ನೋಡಲು ಸಂಜೆಯಾಗುತ್ತಲೇ ಎಲ್ಲರೂ ಕುಟುಂಬ ಸದಸ್ಯರೊಂದಿಗೆ ತಂಡೋಪತಂಡವಾಗಿ ಬರುತ್ತಿದ್ದಾರೆ.

ಅತಿ ಎತ್ತರದ ಗಣಪ: ಕೆಇಬಿ ಹನುಮಾನ ಮಂದಿರದ ಆವರಣದಲ್ಲಿ ಯುವ ಹಿಂದೂ ಸೇನಾ ಗಣೇಶ ಮಂಡಳ 22 ಅಡಿ ಎತ್ತರ ಹಾಗೂ 15 ಅಡಿ ಅಗಲವಿರುವ ಗಣಪತಿಯನ್ನು ಹೈದರಾಬಾದ್‌ ಧೂಳ್‌ಪೇಟನಿಂದ ತಂದು ಪ್ರತಿಷ್ಠಾಪನೆ ಮಾಡಿದೆ. ಒಂದೂವರೆ ಟನ್‌ ಭಾರದ ಗಣಪತಿಯನ್ನು ಬೀದರ್‌ಗೆ ತರಲು 11 ತಾಸು ಆಗಿದೆ. ಮಂಡಳದವರು ಮೂರ್ತಿಗೆ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಮಂಟಪದ ಸಿಂಗಾರ, ಅಲಂಕಾರಿಕ ವಿದ್ಯುತ್‌ ದೀಪಗಳ ಅಳವಡಿಕೆ, ಇತರೆ ಸಾಮಗ್ರಿ ಸೇರಿ ಒಟ್ಟು ₹ 6 ಲಕ್ಷ ಖರ್ಚು ಮಾಡಲಾಗಿದೆ.

ಮೂರ್ತಿಯನ್ನು ಹೈದರಾಬಾದ್ನಲ್ಲಿ ಕ್ರೇನ್‌ ಮೂಲಕ ಲಾರಿಯಲ್ಲಿ ಏರಿಸಿ ನಂತರ ಬೀದರ್‌ಗೆ ತಂದು ಕ್ರೇನ್‌ ಮೂಲಕ ಮಂಟಪದಲ್ಲಿ ಇಡಲಾಗಿದೆ. ಗಣಪತಿ ನವಿಲಿನ ಮೇಲೆ ವಿರಾಜಮಾನನಾಗಿದ್ದಾನೆ. ಎತ್ತರದಿಂದಾಗಿಯೇ ಏಕದಂತ ಭಕ್ತರ ಗಮನ ಸೆಳೆಯುತ್ತಿದ್ದಾನೆ.

ಪಾಪನಾಶ ಮಂದಿರದ ಮಾದರಿ: ಕೇಂದ್ರ ಬಸ್‌ ನಿಲ್ದಾಣದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಗುಜರಿ ವಸ್ತುಗಳನ್ನು ಬಳಸಿ ಪಾಪನಾಶ ಮಂದಿರದ ಮಾದರಿ ನಿರ್ಮಿಸಿದ್ದಾರೆ. ಮಣ್ಣಿನ ಗಣಪತಿ ಹಾಗೂ ಪಿಒಪಿ ಲಂಬೋದರನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದಾರೆ.

ಕೆಲ ಬಾಲಕರು ಸೇರಿಕೊಂಡು ಕೆಇಬಿ ಸಮೀಪ ಬಾಲ ಹನುಮಾನ ಗಣೇಶ ಮಂಡಳ ಸ್ಥಾಪಿಸಿ ಕೆಇಬಿ ಹನುಮಾನ ಮಂದಿರದ ಸಮೀಪ ₹ 15 ಸಾವಿರ ಖರ್ಚು ಮಾಡಿ 12 ಅಡಿಯ ಆಕರ್ಷಕ ಲಂಬೋದರನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ.

ದೇವಿ ಕಾಲೊನಿಯಲ್ಲಿ ದೇವಿಕಾಲೊನಿ ಗಣೇಶ ಮಂಡಳದ ಯುವಕರು ಸಿಂಹಾಸನಾರೂಢ ಗಣಪತಿಯನ್ನು ಕೂಡಿಸಿದ್ದಾರೆ. ನವಿಲಿನ ಆಕಾರದ ಸಿಂಹಾಸನವಿದ್ದು, ನವಿಲುಗರಿಯ ಮೇಲೆ ಕೃಷ್ಣ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ.

ಶರಣನಗರದ ಗಣೇಶ ಮಂಡಳದವರು ಏಕದಂತ ನಂದಿ ಹಾಗೂ ಆನೆಯ ಮುಖವಾಡದ ಸಿಂಹಾನನದ ಮೇಲೆ ಕುಳಿತಿತ 12 ಅಡಿಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮಂಟಪದ ಪ್ರವೇಶದಲ್ಲಿ ಕಾರಂಜಿ ನಿರ್ಮಿಸಿದ್ದು, ಶಿವಲಿಂಗದ ಮೇಲೆ ಧಾರಾಕಾರವಾಗಿ ನೀರು ಸುರಿಯುತ್ತಿದೆ. ಸರ್ಪವೊಂದು ಹೆಡೆ ಬಿಚ್ಚಿ ಶಿವಲಿಂಗಕ್ಕೆ ರಕ್ಷಣೆ ಒದಗಿಸಿದೆ.

ರೋಟರಿ ವೃತ್ತದ ಸಾಯಿ ಆದರ್ಶ ಶಾಲೆ, ಪ್ರತಾಪನಗರ, ಗುಂಪಾ, ಮೈಲೂರ, ಹಳೆಯ ನಗರದಲ್ಲಿ ಆಕರ್ಷಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.