ಬೀದರ್: ‘ರಾಜ್ಯದಲ್ಲಿ ಬಿಜೆಪಿ ಕಣ್ಣು ಬಿಡುವ ಮೊದಲೇ ಜೆಡಿಎಸ್ ಸರ್ಕಾರ ರಚಿಸಿತ್ತು. ಅಭಿವೃದ್ಧಿ ಕಾರ್ಯಗಳ ಮೂಲಕ ಸಾಧನೆ ಪರಿಚಯಿಸಬೇಕಿದ್ದ ಡಬಲ್ ಎಂಜಿನ್ ಸರ್ಕಾರಕ್ಕೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ ವಾಗ್ದಾಳಿ ನಡೆಸಿದರು.
‘ರಾಜ್ಯದಲ್ಲಿರುವುದು ಉದ್ರಿ ಸರ್ಕಾರ. ಬಿಜೆಪಿ, ಸಾಲ ಮಾಡಿ ಸರ್ಕಾರ ನಡೆಸಲು ಹೊರಟಿದೆ. ಅಧಿಕಾರದಲ್ಲಿದ್ದಾಗ ಕೆಲಸ ಮಾಡಿ ತೋರಿಸಬೇಕು. ಅದನ್ನು ಬಿಟ್ಟು ಬಿಜೆಪಿಯವರು ಯಾತ್ರೆ ಹೊರಟು ದಮ್ಮು, ತಾಕತ್ತು ಎಂದು ಮಾತನಾಡುತ್ತಿದ್ದಾರೆ’ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಟೀಕಿಸಿದರು.
‘ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತರ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಜನಪರವಾದ ಯೋಜನೆಗಳನ್ನು ಜಾರಿಗೊಳಿಸಿದೆ. ಜೆಡಿಎಸ್‌ನದ್ದು ನಗದು ಸರ್ಕಾರ, ಬಿಜೆಪಿಯದ್ದು ಉದ್ರಿ ಸರ್ಕಾರ’ ಎಂದು ಮೊನಚಾದ ಮಾತಿನಿಂದ ಚುಚ್ಚಿದರು.
‘ಡಬಲ್ ಎಂಜಿನ್ ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಹಿಂದಿನ ಎರಡು ವಿಧಾನಸಭೆ ಚುನಾವಣೆಗಳಲ್ಲಿ 105ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಆಗಿಲ್ಲ. ಜೆಡಿಎಸ್ ಇಂದಿಗೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಪ್ರಾಬಲ್ಯ ಉಳಿಸಿಕೊಂಡಿದೆ. ಚುನಾವಣೆಯಲ್ಲಿ ಸ್ವತಂತ್ರವಾಗಿಯೇ ಸ್ಪರ್ಧಿಸಲಿದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಎಷ್ಟೋ ಪಕ್ಷಗಳು ಬಂದಿವೆ. ಬಾಗಿಲು ಮುಚ್ಚಿಕೊಂಡೂ ಹೋಗಿವೆ. ಜನಾರ್ಧನ ರೆಡ್ಡಿ ಪಕ್ಷದಿಂದ ರಾಜ್ಯ ರಾಜಕೀಯದ ಮೇಲೆ ಪರಿಣಾಮ ಆಗದು’ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಚ್‌ಡಿಕೆ ಪ್ರವಾಸ:
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಜ.5ರಿಂದ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
‘ಮಿಷನ್ 123 ಸಂಕಲ್ಪದೊಂದಿಗೆ ಪಂಚಯಾತ್ರೆ ಆರಂಭಿಸಿದ್ದಾರೆ. ಜನವರಿ 5ರಂದು ಸಂಜೆ 5 ಗಂಟೆಗೆ ಬೀದರ್ ನಗರದ ಗಣೇಶ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನವಾಡದಲ್ಲಿ ವಾಸ್ತವ್ಯ ಮಾಡುವರು. 6ರಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಮಲಾಪುರದಿಂದ ರಥಯಾತ್ರೆ ಆರಂಭವಾಗಿ ಮನ್ನಳಿ, ಬೇಮಳಖೇಡ, ಚಾಂಗಲೇರಾ ಮೂಲಕ ಮನ್ನಾಎಖ್ಖೆಳ್ಳಿತಲುಪಲಿದೆ. ಅಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರ್ಣಾದಲ್ಲಿ ವಾಸ್ತವ್ಯ ಮಾಡುವರು’ ಎಂದು ಹೇಳಿದರು.
‘7ರಂದು ಹುಮಾನಾಬಾದ್ ಕ್ಷೇತ್ರದಲ್ಲಿ ರಥಯಾತ್ರೆ ಸಂಚರಿಸಲಿದೆ.. ಹುಮಾನಾಬಾದ್‌ನ ತೇರು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ 8ರಂದು ಬಸವಕಲ್ಯಾಣದ ಅಕ್ಕಮಹಾದೇವಿ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮೋರ್ಕಂಡಿ ಗ್ರಾಮದಲ್ಲಿ ವಾಸ್ತವ್ಯ ಮಾಡುವರು. ಅಲ್ಲಿಂದ ರಥಯಾತ್ರೆ ಕಲಬುರಗಿ ಜಿಲ್ಲೆಗೆ ರಥಯಾತ್ರೆ ಸಾಗಲಿದೆ’ ಎಂದು ತಿಳಿಸಿದರು.
‘ಪಕ್ಷ ಅಧಿಕಾರಕ್ಕೆ ಬಂದು ಐದು ವರ್ಷ ಕೆಲಸ ಮಾಡದಿದ್ದರೆ ವಿಸರ್ಜಿಸಲಾಗುವುದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಕಾಂಗ್ರೆಸ್‌ನವರು ಭಾರತ ಜೋಡೋ ಯಾತ್ರೆ ನಡೆಸಿದರೂ ಜನರಿಗೆ ಸ್ಪಷ್ಟ ಸಂದೇಶ ಕೊಟ್ಟಿಲ್ಲ. ಬಿಜೆಪಿಯವರು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ. ಅವರ ಬಳಿ ಸ್ಪಷ್ಟ ಗುರಿ ಇಲ್ಲ’ ಎಂದು ಟೀಕಿಸಿದರು.
ಅಧಿಕಾರಕ್ಕೆ ಬಂದರೆ ಕಾರಂಜಾ ಸಂತ್ರಸ್ತರಿಗೆ ನೆರವು
ಬೀದರ್: ‘ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರಂಜಾ ಸಂತ್ರಸ್ತರು ಸೇರಿ ನಾಲ್ಕು ಯೋಜನೆಗಳ ಸಂತ್ರಸ್ತರಿಗೆ ₹ 1,150 ಕೋಟಿ ಪ್ಯಾಕೇಜ್ ಕೊಡಲು ಸಂಪುಟದಲ್ಲಿ ಚರ್ಚೆ ನಡೆಸಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅದನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ’ ಎಂದು ಶಾಸಕ ಬಂಡೆಪ್ಪ ಕಾಶೆಂಪುರ ತಿಳಿಸಿದರು.
‘ಜ.5 ರಂದು ಬೀದರ್ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕಾರಂಜಾ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬೀದರ್ ಬಂದ್ ಬೆಳಿಗ್ಗೆ ಇದೆ. ಜೆಡಿಎಸ್ ಕಾರ್ಯಕ್ರಮ ಸಂಜೆ ಇದೆ. ಹೀಗಾಗಿ ಪಕ್ಷದ ಕಾರ್ಯಕ್ರಮಕ್ಕೆ ತೊಡಕಾಗದು’ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಮುಖಂಡರಾದ ಮಾರುತಿ ಬೌದ್ಧೆ, ಐಲಿನ್‌ಜಾನ್ ಮಠಪತಿ, ಅಸಾದುದ್ದೀನ್, ಅಶೋಕುಮಾರ ಕರಂಜೆ, ಸಜ್ಜದ್ ಸಾಹೇಬ್, ರಾಜಶೇಖರ ಜವಳೆ, ಅಶೋಕ ಕೋಡಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.