ಭಾಲ್ಕಿ: ಹಿರೇಮಠ ಸಂಸ್ಥಾನದ ಅಡಿಯಲ್ಲಿ ಮೇ 25ರಂದು ಚನ್ನಬಸವಾಶ್ರಮದಲ್ಲಿ ರಾಜ್ಯಮಟ್ಟದ 11ನೇ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ವೈಚಾರಿಕ ಚಿಂತಕ, ಸಾಹಿತಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಆಯ್ಕೆ ಮಾಡಿದ್ದಾರೆ ಎಂದು ಪಟ್ಟಣದ ಹಿರೇಮಠದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಂಡಿತಾರಾಧ್ಯ ಶಿವಾಚಾರ್ಯರು ಶಿವ ಸಂಚಾರ ತಂಡದ ಮೂಲಕ ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಅವರ ಆಯ್ಕೆ ಬಹಳ ಸಂತೋಷ ತಂದಿದೆ. ಅವರು ವಚನ, ಚುಟುಕು ಸಾಹಿತ್ಯದಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ಬಸವತತ್ವ ಅನುಷ್ಠಾನಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಪೂಜ್ಯರು ಉತ್ತಮ ವಾಗ್ಮಿಗಳಾಗಿದ್ದಾರೆ. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಶ್ರಮಿಸುವ ಮೂಲಕ ಮಾದರಿ ಸಮ್ಮೇಳನ ಮಾಡೋಣ ಎಂದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಚುಟುಕು ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ, ವ್ಯವಸ್ಥಿತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳೋಣ ಎಂದರು.
ದೂರವಾಣಿ ಮುಖಾಂತರ ಮಾತನಾಡಿದ ಪರಿಷತ್ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಸರ್ಕಾರದ ಯಾವುದೇ ಅನುದಾನವಿಲ್ಲದೆ ನಿರಂತರವಾಗಿ 10 ರಾಜ್ಯಮಟ್ಟದ, 5 ರಾಜ್ಯಮಟ್ಟದ ಲೇಖಕಿಯರ, 5 ಶಿಕ್ಷಕ ಸಾಹಿತಿಗಳ ಸಮ್ಮೇಳನಗಳನ್ನು ಪರಿಷತ್ ಸಾಹಿತಿಗಳು, ಸಾಹಿತ್ಯಾಸಕ್ತರ, ಮಠಗಳ ಸಹಕಾರದಲ್ಲಿ ಸಾಹಿತ್ಯ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಎನ್.ಜವಾದಿ, ತಾಲ್ಲೂಕು ಅಧ್ಯಕ್ಷ ಕಾಶಿನಾಥ ಭೂರೆ, ಮಹಾಲಿಂಗ ಸ್ವಾಮೀಜಿ, ಶಂಭುಲಿಂಗ ಕಾಮಣ್ಣ, ರಾಜಶೇಖರ ಮಠಪತಿ, ವಿಶ್ವನಾಥ ಮುಕ್ತಾ, ಸಂಗಮೇಶ ಮುರ್ಕೆ, ಎನ್.ಎಸ್. ಮಲ್ಲಶೆಟ್ಟಿ, ಗುಂಡಪ್ಪ ಸಂಗಮಕರ್, ಶಿವಕುಮಾರ್ ಘಂಟೆ, ನಾಗಶೆಟ್ಟೆಪ್ಪಾ ಲಂಜವಾಡೆ, ಶಾಂತಯ್ಯ ಸ್ವಾಮಿ, ಸಂತೋಷ ಬಿ.ಜಿ.ಪಾಟೀಲ ಸಂತೋಷ ಹಡಪದ, ಮೀನಾಕ್ಷಿ ಪ್ರಭಾ, ಶಂಕುತಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.