ADVERTISEMENT

ಬೀದರ್ | ಗಾಂಜಾ, ಗುಟ್ಕಾ ಸಾಗಾಟ ತಡೆಯಿರಿ; ಸಚಿವ ಖಂಡ್ರೆಗೆ ಖೂಬಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 6:01 IST
Last Updated 6 ಜುಲೈ 2024, 6:01 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ಜಿಲ್ಲೆಯ ಗಡಿಭಾಗದ ಭಂಗೂರ ಹಾಗೂ ಇತರೆಡೆ ತೆಲಂಗಾಣದ ಉದ್ಯಮಿಗಳು ಗೋವಾ ಮಾದರಿಯಲ್ಲಿ ‘ಕಸಿನೊ’ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ಆಗ್ರಹಿಸಿದ್ದಾರೆ.

ಸುಮಾರು 10 ವರ್ಷಗಳಿಂದ ಕಸಿನೆ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ನಾನು ಸಚಿವನಿದ್ದಾಗ ನನ್ನ ಮೇಲೆ ಸಾಕಷ್ಟು ಒತ್ತಡಗಳು ಬಂದರೂ ಅದಕ್ಕೆ ಆಸ್ಪದ ನೀಡಿರಲಿಲ್ಲ. ಅದನ್ನು ಯಶಸ್ವಿಯಾಗಿ ತಡೆದಿದ್ದೆ ಎಂದು ನೆನಪಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಖೂಬಾ, ಕೇವಲ ಊಟೋಪಚಾರಕ್ಕೆಂದು ಅನುಮತಿ ಪಡೆದು, ನಡೆಸಬಾರದ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ. ಜಿಲ್ಲೆಯಲ್ಲಿ ರೈತರ ಮಕ್ಕಳು, ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಸಲ ಕಸಿನೊ ಪ್ರಭಾವಕ್ಕೆ ಒಳಗಾದರೆ ಅದರಿಂದ ಹೊರಬರಲು ಸಾಧ್ಯವಿಲ್ಲ. ಅವರ ಕುಟುಂಬಗಳು ಬೀದಿಪಾಲಾಗುತ್ತದೆ. ಈ ಕಾರಣಕ್ಕಾಗಿಯೇ ತೆಲಂಗಾಣದಲ್ಲಿ ಅಲ್ಲಿನ ಸರ್ಕಾರ ಕಸಿನೊ ತೆರೆಯಲು ಅವಕಾಶ ಕೊಟ್ಟಿಲ್ಲ. ಹೀಗಾಗಿಯೇ ಅಲ್ಲಿನ ಉದ್ಯಮಿಗಳು ನಮ್ಮ ಜಿಲ್ಲೆಯಲ್ಲಿ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ADVERTISEMENT

ಸದ್ಯ ರಾಜಕೀಯ ಪರಿಸ್ಥಿತಿಗಳು ಬದಲಾಗಿರುವುದರಿಂದ ಮತ್ತೆ ಈ ಪ್ರಯತ್ನ ಮುಂದುವರೆಸುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯ ಯುವಕರು, ಬಡವರು, ಮಹಿಳೆಯರು, ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕಾರಣಕ್ಕೂ ಕಸಿನೊ ಆರಂಭಿಸಲು ಅನುಮತಿ ಕೊಡಬಾರದು ಎಂದು ಒತ್ತಾಯ ಮಾಡಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಗುಟ್ಕಾ ತಯಾರಿಸಿ, ಅಮಾಯಕ ಯುವಕರನ್ನು ಬಳಸಿಕೊಂಡು ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸಾಗಿಸುತ್ತಿದ್ದಾರೆ. ಇದರಲ್ಲಿ ಜಿಲ್ಲೆಯ ಯುವಕರು ಬಲಿಯಾಗುತ್ತಿದ್ದಾರೆ. ಇದರ ಹಿಂದೆ ಜಿಲ್ಲೆಯ ಪ್ರಭಾವಿಗಳ ಕೈವಾಡ ಇದೆ. ದೊಡ್ಡವರ ದುಡ್ಡಿನ ಆಸೆಗೆ ಯುವಕರ ಉತ್ತಮ ಭವಿಷ್ಯ ಹಾಳಾಗುತ್ತಿದೆ. ಆದಕಾರಣ ಅಕ್ರಮ ಗುಟ್ಕಾ ತಯಾರಿಕೆಯ ಮೇಲೆ ಅಧಿಕಾರಿಗಳಿಂದ ದಾಳಿ ಮಾಡಿಸಿ, ಗುಟ್ಕಾ ತಯಾರಿಕೆ ಬಂದ ಮಾಡಿಸಬೇಕು. ಅಕ್ರಮ ಸಾಗಾಣಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಔರಾದ್‌ ಮತ್ತು ಬಸವಕಲ್ಯಾಣ ತಾಲ್ಲೂಕು ಸರಹದ್ದುಗಳ ಮೂಲಕ ನಡೆಯುತ್ತಿರುವ ಗಾಂಜಾ ಸರಬರಾಜಿಗೆ ಕಡಿವಾಣ ಹಾಕಬೇಕು. ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದರು. ಇದು ನಿರಂತರವಾಗಿ ನಡೆಯುವಂತಹದ್ದು. ಎಲ್ಲ ಸರಹದ್ದುಗಳಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಸ್ಥಾಪಿಸಿ, ಸಿಬ್ಬಂದಿ ನೇಮಕ ಮಾಡಿ ಗಸ್ತು ಹೆಚ್ಚಿಸಬೇಕು. ಜಿಲ್ಲೆ ಗಾಂಜಾ ಮುಕ್ತ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.