ಹುಮನಾಬಾದ್: ಕಳೆದೊಂದು ವಾರದಿಂದ ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಂಜಿನಿಂದಾಗಿ ತೊಗರಿ ಬೆಳೆಗೆ ಕೀಟ ಬಾಧೆ ಕಾಡುತ್ತಿದೆ. ಇದರಿಂದಾಗಿ ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ರೈತರು ನಷ್ಟದ ಆತಂಕದಲ್ಲಿದ್ದಾರೆ.
ಈ ಬಾರಿಯ ಮುಂಗಾರು ಆರಂಭದಿಂದಲೂ ಸಕಾಲದಲ್ಲಿ ಮುಂಗಾರು ಮಳೆ ಆಗಿರುವುದರಿಂದ ಒಣ ಬೇಸಾಯ ಆಶ್ರಿತ ಗ್ರಾಮಗಳಲ್ಲಿ ತೊಗರಿ ಬೆಳೆ ಉತ್ತಮವಾಗಿದೆ. ಈಗಾಗಲೇ ಗಿಡಗಳಲ್ಲಿ ಹೂ ಮುಡಿದು, ಇನ್ನೂ ಅರ್ಧದಷ್ಟು ಕಾಯಿಗಳು ಕಟ್ಟುವ ಹಂತದಲ್ಲಿದೆ. ಆದರೆ, ಮೋಡ ಕವಿದ ವಾತಾವರಣ ಹಾಗೂ ಮಂಜಿನಿಂದಾಗಿ ಕಾಯಿಕೊರಕ ಕೀಟಬಾಧೆ ಹರಡುವ ಭೀತಿ ಮೂಡಿದೆ.
ಹುಮನಾಬಾದ್ ತಾಲ್ಲೂಕಿನ ಹುಡಗಿ, ಹಳಿಖೇಡ್(ಬಿ), ಮದರಗಾಂವ, ನಂದಗಾಂವ, ಹಳಿಖೇಡ್(ಕೆ), ಘಾಟಬೋರಾಳ, ಘೋಡವಾಡಿ ಹಾಗೂ ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಬೇಮಳಖೆಡಾ, ಚಾಂಗಲೇರಾ, ಮನ್ನಾಏಖೇಳ್ಳಿ ಸೇರಿ 30 ಗ್ರಾಮಗಳಲ್ಲಿ ಈ ವರ್ಷ ಮುಕ್ಕಾಲು ಭಾಗದ ಜಮೀನುಗಳಲ್ಲಿ ರೈತರು ತೊಗರಿ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷ ಆರಂಭದಲ್ಲಿ ತೊಗರಿಗೆ ಕ್ವಿಂಟಲ್ ₹ 7.5 ಸಾವಿರದಿಂದ 8 ಸಾವಿರದವರೆಗೂ ದರ ಇತ್ತು. ಕೊನೆಗೆ ಕ್ವಿಂಟಲ್‌ಗೆ 12 ಸಾವಿರಕ್ಕೆ ಮಾರಾಟವಾಗಿತ್ತು. ಹೀಗಾಗಿ ರೈತರು ಈ ಬಾರಿಯೂ ಉತ್ತಮ ದರ ದೊರೆಯುವ ವಿಶ್ವಾಸದಲ್ಲಿದ್ದಾರೆ.
‘ತೊಗರಿ ಬೆಳೆಗೆ ಉತ್ತಮ ಬೆಲೆ ದೊರೆಯಲಿದೆ ಎಂಬ ಆಶಾಭಾವನೆಯಿದೆ. ಆದರೆ, ಕಳೆದ ಒಂದು ವಾರದಿಂದ ತೊಗರಿ ಬೆಳೆಗೆ ಪ್ರತಿಕೂಲ ವಾತಾವರಣದಿಂದಾಗಿ ಕಾಯಿಕೊರಕ ಕೀಟಗಳು ಹೆಚ್ಚಾಗಿದ್ದು, ಎಲೆ, ಹೂವು ಹಾಗೂ ಕಾಯಿಗಳಲ್ಲಿ ತತ್ತಿ ಇಟ್ಟು ಗೂಡು ಕಟ್ಟಿ ಬೆಳೆಹಾನಿ ಸಂಭವಿಸಿ ಇಳುವರಿ ಕಡಿಮೆ ಬರಲಿದೆ’ ಎಂದು ರೈತರು ಅಳಲನ್ನು ತೋಡಿಕೊಂಡರು.
ಕಳೆದ ವರ್ಷ ಮಳೆಯ ಕೊರತೆಯಿಂದ ಒಂದು ಎಕರೆಗೆ 4ರಿಂದ 5 ಕ್ವಿಂಟಲ್ ಇಳುವರಿ ಬಂದಿತ್ತು. ಆದರೆ ಉತ್ತಮ ಮಳೆಯಿಂದಾಗಿ 8ರಿಂದ 9 ಕ್ವಿಂಟಲ್ ಇಳುವರಿ ಬರಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹12 ಸಾವಿರದಿಂದ ₹15 ಸಾವಿರ ಮಾರಾಟವಾದರೆ ಬೆಳೆಗೆ ಮಾಡಿದ ಖರ್ಚು ಹೋಗಿ ಸ್ವಲ್ಪ ಹಣ ಉಳಿತಾಯ ಮಾಡಬಹುದು ಎಂದು ರೈತ ಕರಬಸಪ್ಪ ಆಶಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.