ADVERTISEMENT

ಪೊದೆಯಲ್ಲಿ ಮರೆಯಾಗುತ್ತಿದೆ ಬೀದರ್ ಕೋಟೆ: ನಿರ್ವಹಣೆಗೆ ಇಚ್ಛಾಶಕ್ತಿ ಕೊರತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಅಕ್ಟೋಬರ್ 2024, 4:39 IST
Last Updated 28 ಅಕ್ಟೋಬರ್ 2024, 4:39 IST
ಬೀದರ್‌ ಕೋಟೆಯ ಸುತ್ತ ಹಾಗೂ ಕಟ್ಟಡದ ಮೇಲೆಲ್ಲಾ ಬೆಳೆಯುತ್ತಿರುವ ಗಿಡ, ಗಂಟೆ
ಬೀದರ್‌ ಕೋಟೆಯ ಸುತ್ತ ಹಾಗೂ ಕಟ್ಟಡದ ಮೇಲೆಲ್ಲಾ ಬೆಳೆಯುತ್ತಿರುವ ಗಿಡ, ಗಂಟೆ   

ಬೀದರ್‌: ದಕ್ಷಿಣ ಭಾರತದ ಅತಿ ದೊಡ್ಡ ಕೋಟೆ ಎಂಬ ಖ್ಯಾತಿ ಗಳಿಸಿರುವ ನಗರದ ಬಹಮನಿ ಕೋಟೆ ಈಗ ಪೊದೆಯಲ್ಲಿ ಮರೆಯಾಗಿದೆ.

ಕೋಟೆಯ ಬಹುತೇಕ ಕಡೆಗಳಲ್ಲಿ ಗೋಡೆಗಳ ಸುತ್ತ ಮುಳ್ಳು ಕಂಟಿ, ದಟ್ಟವಾದ ಪೊದೆ ಬೆಳೆದಿದೆ. ಪ್ರವಾಸಿಗರು ನಡೆದಾಡುತ್ತ ಕೋಟೆ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಕೋಟೆಯ ಗೋಡೆಗಳನ್ನೂ ಬಿಡದೆ ಗಿಡ, ಗಂಟೆಗಳು ಬೆಳೆದಿವೆ. ನಿರಂತರವಾಗಿ ಬೆಳೆಯುತ್ತಿವೆ. ಅವುಗಳ ಬೇರು ದೊಡ್ಡದಾಗಿ ಬೆಳೆದು ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಇದೇ ರೀತಿ ಮುಂದುವರಿದರೆ ಅವುಗಳು ಕುಸಿದು ಬೀಳುವ ಆತಂಕವಿದೆ.

ಇನ್ನು, ಕೋಟೆಯ ಸುತ್ತಲೂ ಇರುವ ಕಂದಕವಂತೂ ತ್ಯಾಜ್ಯ ಹಾಕುವ ಸ್ಥಳವಾಗಿ ಬದಲಾಗಿದೆ. ಮನೆಯ ಹಾಗೂ ಮಾಂಸದಂಗಡಿಗಳ ತ್ಯಾಜ್ಯವನ್ನು ಅದರೊಳಗೆ ಚೆಲ್ಲುತ್ತಿರುವುದರಿಂದ ಪರಿಸರದಲ್ಲಿ ದುರ್ಗಂಧಕ್ಕೆ ಕಾರಣವಾಗಿದೆ.

ADVERTISEMENT

ಇನ್ನು, ಕೋಟೆಯ ಕೆಲವು ಭಾಗಗಳಲ್ಲೂ ರಾಜಾರೋಷವಾಗಿ ಕಸ ಎಸೆಯಲಾಗುತ್ತಿದೆ. ಆದರೆ, ಅದನ್ನು ತಡೆಯುವವರು ಯಾರೂ ಇಲ್ಲದಂತಾಗಿದೆ. ಇದೇ ರೀತಿ ಇದನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ಕೋಟೆಯ ಕುರಿತು ಇತಿಹಾಸದ ಪುಟಗಳಲ್ಲಷ್ಟೇ ನೋಡಲು ಸಾಧ್ಯವಾಗಬಹುದು ಎಂಬ ಆತಂಕ ಸ್ಮಾರಕ ಪ್ರಿಯರದ್ದು.

ಪೊದೆಗಳಲ್ಲಿ ಮರೆಯಾದ ಬೀದರ್‌ ಕೋಟೆ

2022ರಲ್ಲಿ ‘ಬೀದರ್‌ ಉತ್ಸವ’ದ ಸಂದರ್ಭದಲ್ಲಿ ಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಅದಾದ ಬಳಿಕ ಯಾವುದೇ ರೀತಿಯ ಕೆಲಸ ನಡೆದಿಲ್ಲ. ನಿತ್ಯ ಮನೆಯಲ್ಲಿ ಕಸ ಹೊಡೆದು ಸ್ವಚ್ಛವಾಗಿಡುವಂತೆ ಕೋಟೆಯೂ ಸ್ವಚ್ಛವಾಗಿಡಬೇಕು. ಆದರೆ, ಯಾವುದೋ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅದರ ಬಗ್ಗೆ ಮುತುವರ್ಜಿ ವಹಿಸಲಾಗುತ್ತದೆ. ಈ ಧೋರಣೆ ಬದಲಾಗಬೇಕಿದೆ ಎನ್ನುತ್ತಾರೆ.

‘ಬೀದರ್‌ ಕೋಟೆ ಗ್ರೇಡ್‌–1 ಸ್ಮಾರಕ. ಇದನ್ನು ಬಹಳ ಜತನದಿಂದ ನೋಡಿಕೊಳ್ಳಬೇಕು. ಇದರ ನಿರ್ವಹಣೆ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಕೋಟೆ ವೀಕ್ಷಣೆಗೆ ಬರುವವರಿಗೆ ಯಾವುದೇ ರೀತಿಯ ಶುಲ್ಕ ಇಲ್ಲ. ಶುಲ್ಕ ವಿಧಿಸಬೇಕು. ಅದರಿಂದ ಬರುವ ಆದಾಯದಿಂದ ಸುರಕ್ಷತಾ ಸಿಬ್ಬಂದಿಯ ಗೌರವ ಧನ, ಕೋಟೆಯನ್ನು ನಿರ್ವಹಣೆ ಮಾಡಬಹುದು. ದೇಶದ ಇತರೆ ಕಡೆಗಳಲ್ಲಿ ಈ ವ್ಯವಸ್ಥೆ ಇದೆ. ಹೀಗಾಗಿಯೇ ಅಲ್ಲಿನ ಸ್ಮಾರಕಗಳು ಸ್ವಚ್ಛ ಹಾಗೂ ಸುಂದರವಾಗಿ ಕಂಗೊಳಿಸುತ್ತವೆ’ ಎನ್ನುತ್ತಾರೆ ಅಂತರ್ಜಲ, ಪರಿಸರ ಮತ್ತು ಸ್ಮಾರಕಗಳ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ವಿನಯ್‌ ಮಾಳಗೆ.

ಎಲ್ಲಿದೆ ಕೋಟೆ? ಪೊದೆಗಳ ಹಿಂದೆ ಎಂದು ಉತ್ತರಿಸಬಹುದೇ?

‘ಹಂಪಿಯಲ್ಲಿ ಬ್ಯಾಟರಿಚಾಲಿತ ವಾಹನಗಳ ಮೂಲಕವೇ ಹೆಚ್ಚಿನ ಆದಾಯ ಬರುತ್ತದೆ. ನಮ್ಮ ಕೋಟೆಯಲ್ಲೂ ಅದರ ಸಾಧ್ಯತೆಗಳಿವೆ. ಹೈದರಾಬಾದ್‌, ಸೋಲಾಪುರ, ಲಾತೂರ್‌, ನಾಂದೇಡ್‌, ಪುಣೆ ಸನಿಹದಲ್ಲಿ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಭೇಟಿ ಕೊಡುತ್ತಾರೆ. ವಿಶಾಲವಾದ ಪ್ರದೇಶದಲ್ಲಿ ಕೋಟೆಯ ಸ್ಮಾರಕಗಳು ಇರುವುದರಿಂದ ನಡೆದಾಡುತ್ತ ಕೋಟೆ ವೀಕ್ಷಿಸುವುದು ವಯಸ್ಕರು, ಅಂಗವಿಕಲರಿಗೆ ಸಾಧ್ಯವಾಗುವುದಿಲ್ಲ. ಬ್ಯಾಟರಿಚಾಲಿತ ವಾಹನಗಳಿಗೆ ವ್ಯವಸ್ಥೆ ಮಾಡದರೆ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಆದಾಯವೂ ಬರುತ್ತದೆ’ ಎಂದು ಹೇಳಿದರು.

ಕೋಟೆಗೆ ಹೊಂದಿಕೊಂಡಂತೆ ಬಿದ್ದಿರುವ ತ್ಯಾಜ್ಯದ ರಾಶಿ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಅಲಿ ಬರೀದ್‌ ಕಡೆಗಣನೆ

ಬೀದರ್‌ನ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಅಲಿ ಬರೀದ್‌ ಕೂಡ ಕಡೆಗಣನೆಗೆ ಒಳಗಾಗಿದೆ. ನಗರದ ಮಧ್ಯ ಭಾಗದಲ್ಲಿರುವ ಈ ಪ್ರದೇಶದಲ್ಲಿ ಸ್ಮಾರಕಗಳಿದ್ದು ಸುಮಾರು 50 ಎಕರೆ ಜಾಗ ಇದೆ. ಅನೇಕ ಮರಗಿಡಗಳು ಬೆಳೆದಿವೆ. ಉತ್ತಮ ಪರಿಸರ ಇದೆ. ಆದರೆ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎನ್ನುತ್ತಾರೆ ಸ್ಥಳೀಯ ವಾಯು ವಿಹಾರಿಗಳು.

ಬೆಂಗಳೂರಿನ ಲಾಲ್‌ಬಾಗ್‌ ಮಾದರಿಯಲ್ಲಿ ಅಲಿ ಬರೀದ್‌ ಅಭಿವೃದ್ಧಿಪಡಿಸಿ ಅದರಿಂದ ವರಮಾನ ಗಳಿಸುವ ಎಲ್ಲ ಸಾಧ್ಯತೆಗಳಿವೆ. ಆದರೆ ಆ ನಿಟ್ಟಿನಲ್ಲಿ ಯಾವುದೇ ರೀತಿಯ ಯೋಚನೆಗಳಿಲ್ಲ. ಈ ಹಿಂದೆ ಜಿಲ್ಲಾಧಿಕಾರಿ ಹರ್ಷ ಗುಪ್ತಾ ಅವರು ಅದರ ಸುತ್ತಲೂ ಕೌಂಪಾಂಡ್‌ ನಿರ್ಮಿಸಿ ಒಳ ಭಾಗದಲ್ಲಿ ಗಿಡಗಳನ್ನು ಬೆಳೆಸಲು ಕ್ರಮ ಕೈಗೊಂಡಿದ್ದರ ಪರಿಣಾಮ ಅದರ ಸಂರಕ್ಷಣೆಯಾಗಿದೆ. ಆದರೆ ಆನಂತರದಲ್ಲಿ ಯಾರೂ ಅದರ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ.

ತಾತ್ಕಾಲಿಕ ರಸ್ತೆ ಕುಸಿಯುವ ಭೀತಿಯಲ್ಲಿ

ಬೀದರ್‌ ಉತ್ಸವದ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಕೋಟೆ ಪ್ರವೇಶಿಸುವ ಮುಖ್ಯ ದ್ವಾರದ ಬಲಭಾಗದಲ್ಲಿ ಪಾರ್ಕಿಂಗ್‌ ಸ್ಥಳದಿಂದ ಒಳಹೋಗಿ ಬರಲು ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಕುಸಿಯುವ ಭೀತಿಯಲ್ಲಿದೆ. ಮಣ್ಣು ಹಾಕಿ ಎತ್ತರಗೊಳಿಸಿ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಲಾಗಿದೆ. ಎರಡೂ ಕಡೆ ಜಾಲರಿಗಳನ್ನು ಹಾಕಲಾಗಿದೆ. ಆದರೆ ಮಳೆ ವಾಹನಗಳ ಓಡಾಟದಿಂದ ರಸ್ತೆಯ ಎರಡೂ ಕಡೆಗಳಲ್ಲಿ ಮಣ್ಣು ಕುಸಿಯುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಇದೇ ಮಾರ್ಗದ ಮೂಲಕ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ರಸ್ತೆ ಕಿರಿದಾಗಿರುವುದರಿಂದ ಎದುರು ಬದುರು ವಾಹನಗಳು ಬಂದರೆ ಸಮಸ್ಯೆ ಉಂಟಾಗುತ್ತದೆ. ಮಾಮನಕೇರಿ ಮೂಲಕ ಕೋಟೆ ಪ್ರವೇಶಿಸುವ ಹಳೆಯ ಮಾರ್ಗವನ್ನು ದುರಸ್ತಿಗೊಳಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.