ಬೀದರ್: ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವ ಪಡೆದಿರುವ ಬೀದರ್ ‘ಮಹಾ’ನಗರದ ಪ್ರಮುಖ ರಸ್ತೆಗಳು ಬೀದಿ ದೀಪಗಳಿಲ್ಲದೆ ಬಡವಾಗಿವೆ.
ಬೀದರ್ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್ ಅವರ ತವರಿನ ರಸ್ತೆಗಳೇ ಅಂಧಕಾರದಲ್ಲಿ ಮುಳುಗಿವೆ. ಜನ ವಾಹನಗಳ ಬೆಳಕಿನ ಆಸರೆಯಲ್ಲಿ ಓಡಾಡುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಇನ್ನು, ಪಾದಚಾರಿಗಳಿಗಂತೂ ದೇವರೇ ಕಾಪಾಡಬೇಕು!
ನಗರದ ನೌಬಾದ್ ಬಸವೇಶ್ವರ ವೃತ್ತದಿಂದ ಆರ್‌ಟಿಒ ಕಚೇರಿ ವರೆಗಿನ ಬೀದರ್–ನಾಂದೇಡ್ ಮುಖ್ಯರಸ್ತೆಯ ಬೀದಿದೀಪಗಳು ಹಾಳಾಗಿ ಅನೇಕ ತಿಂಗಳುಗಳಾಗಿವೆ. ಇಡೀ ಭಾಗ ಅಂಧಕಾರದಲ್ಲಿ ಮುಳುಗಿದೆ. ಇತ್ತೀಚೆಗೆ ರಸ್ತೆ ಅಭಿವೃದ್ಧಿಗೆ ಮಣ್ಣು ತಂದು ಸುರಿಯಲಾಗಿದ್ದು, ದೂಳಿನಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಗುರುದ್ವಾರದಿಂದ ಜನವಾಡ ರಸ್ತೆಗೆ ಸಂಪರ್ಕಿಸುವ ರಸ್ತೆಯೂ ಕತ್ತಲಲ್ಲಿ ಮುಳುಗಿದೆ. ಚಿದ್ರಿ ರಿಂಗ್‌ರೋಡ್‌ನಿಂದ ಮೈಲೂರ್ ವರೆಗೂ ಪರಿಸ್ಥಿತಿ ಭಿನ್ನವಾಗಿಲ್ಲ. ಬೊಮಗೊಂಡೇಶ್ವರ ವೃತ್ತದಿಂದ ಚಿಟ್ಟಾ ಕ್ರಾಸ್ ವರೆಗೆ ಹಲವೆಡೆ ಬೀದಿ ದೀಪಗಳು ಕೆಟ್ಟು ಹೋಗಿವೆ. ಮರಗಳು ದಟ್ಟವಾಗಿ ಬೆಳೆದಿರುವುದರಿಂದ ಅವುಗಳ ನಡುವೆ ಮರೆಯಾಗಿ, ಬೆಳಕು ಹರಿಯುತ್ತಿಲ್ಲ. ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಇರುವ ಭಾಗದ ಮುಖ್ಯರಸ್ತೆಗಳಿಗೆ ಇತ್ತೀಚೆಗೆ ಹೊಸದಾಗಿ ವಿದ್ಯುತ್ ಕಂಬ, ದೀಪಗಳನ್ನು ಅಳವಡಿಸಲಾಗಿದೆ. ಗಣ್ಯರು, ಹೊರಗಿನವರು ಈ ಭಾಗದಲ್ಲಿ ಹೆಚ್ಚಾಗಿ ಓಡಾಡುವುದರಿಂದ ಅವುಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಈ ಭಾಗ ನೋಡಿದವರೂ ಇಡೀ ನಗರ ಇದೇ ರೀತಿ ಸ್ವಚ್ಛ, ಸುಂದರ, ಬೆಳಕಿನಿಂದ ಕಂಗೊಳಿಸುತ್ತಿರಬಹುದು ಎಂದು ಭಾವಿಸಬಹುದು. ಆದರೆ, ಪರಿಸ್ಥಿತಿ ಹಾಗಿಲ್ಲ. ಇತರೆ ಭಾಗಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
2008–09ರಲ್ಲಿ ನಗರದ ಪ್ರಮುಖ ರಸ್ತೆಗಳು ದ್ವಿಪಥವಾಗಿ ಮೇಲ್ದರ್ಜೆಗೇರಿಸಿದಾಗ ಹೊಸದಾಗಿ ವಿದ್ಯುತ್ ಕಂಬ, ದೀಪಗಳನ್ನು ಅಳವಡಿಸಲಾಗಿತ್ತು. ಕೆಲವು ವರ್ಷ ಉತ್ತಮ ಸ್ಥಿತಿಯಲ್ಲೇ ಇದ್ದವು. ಆದರೆ, ಇತ್ತೀಚಿನ ಕೆಲವು ತಿಂಗಳಿಂದ ಅವುಗಳನ್ನು ಕಡೆಗಣಿಸಲಾಗಿದೆ. ಎಲ್ಲೆಲ್ಲಿ ವಿದ್ಯುತ್ ದೀಪಗಳು ಹಾಳಾಗಿವೆಯೋ ಅವುಗಳನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಎನ್ನುವುದು ಸಾರ್ವಜನಿಕರ ದೂರು.
12ನೇ ಶತಮಾತನದಲ್ಲಿ ಬಸವಾದಿ ಶರಣರ ಸಾಮಾಜಿಕ, ಧಾರ್ಮಿಕ ಕ್ರಾಂತಿ ಹಾಗೂ 15ನೇ ಶತಮಾನದಲ್ಲಿ ಬಹಮನಿ ಅರಸರ ಕಾಲದಲ್ಲಿ ಮಹಮೂದ್ ಗಾವಾನ್ ಮಾಡಿದ ಶೈಕ್ಷಣಿಕ ಕ್ರಾಂತಿಯಿಂದ ಈ ನೆಲ ಜಗತ್ತಿನ ಗಮನ ಸೆಳೆದಿತ್ತು. ಜಗತ್ತಿನ ‘ಮಹಾನಗರ’ ಎಂಬ ಕೀರ್ತಿಗೂ ಪಾತ್ರವಾಗಿತ್ತು.
ಇತ್ತೀಚೆಗೆ ರಾಜ್ಯ ಸರ್ಕಾರವು ಬೀದರ್ ನಗರವು ವೇಗವಾಗಿ ಬೆಳೆಯುತ್ತಿರುವುದನ್ನು ನೋಡಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ತೀರ್ಮಾನ ಕೈಗೊಂಡಿದೆ. ಹೆಚ್ಚಿನ ಪ್ರವಾಸಿ ತಾಣಗಳು ಇರುವುದರಿಂದ ಪ್ರವಾಸೋದ್ಯಮ ಬೆಳೆಸುವ ಮಾತುಗಳನ್ನೂ ಸರ್ಕಾರ ಆಡಿದೆ. ಪ್ರವಾಸಿಗರಿಗೆ ಹೆಚ್ಚಿನ ಸೌಕರ್ಯಗಳು ಕಲ್ಪಿಸುವುದು ದೂರದ ವಿಚಾರ. ಇಲ್ಲಿಯೇ ಹುಟ್ಟಿ ಬೆಳೆದಿರುವ ಜನರಿಗೆ ಕನಿಷ್ಠ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನಾಗರಿಕರ ಗೋಳಾಗಿದೆ.
ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಇನ್ನಷ್ಟೇ ಆಡಳಿತಾತ್ಮಕವಾದ ಪ್ರಕ್ರಿಯೆಗಳು ಆರಂಭಗೊಳ್ಳಬೇಕು. ನಗರದಲ್ಲೂ ಮೂಲಭೂತ ಸೌಕರ್ಯಗಳು ದಿನೇ ದಿನೇ ಸುಧಾರಣೆ ಆಗಬೇಕು. ಆದರೆ, ಅದ್ಯಾವುದೂ ಕಾಣಿಸುತ್ತಿಲ್ಲ. ಮುಂದಡಿ ಇಡಬೇಕಾದ ನಗರ ಹಿಂದಡಿ ಇಡುತ್ತಿದೆ. ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಜನ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಜನಪ್ರತಿನಿಧಿಗಳು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಜನ ಕೂಡ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ ನಮ್ಮನ್ನು ‘ಟಾರ್ಗೆಟ್’ ಮಾಡುತ್ತಾರೆ ಎಂಬ ಭಯ ಹಲವರದ್ದು. ಇನ್ನು, ಸಣ್ಣಪುಟ್ಟ ವಿಚಾರಗಳಿಗೆ ಹೋರಾಟ ನಡೆಸುವ ಅನೇಕ ಸಂಘಟನೆಗಳಿವೆ. ಆದರೆ, ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ದನಿ ಎತ್ತಬೇಕೆಂದು ಅವುಗಳಿಗೂ ಅನಿಸಿದಂತಿಲ್ಲ.
‘ನಮ್ಮ ಭಾಗದವರೇ ಆದ ಶಾಸಕ ರಹೀಂ ಖಾನ್ ಅವರು ಪೌರಾಡಳಿತ ಸಚಿವರಾದ ನಂತರ ಬೀದರ್ ನಗರ ಸುಂದರವಾಗಿ ಬದಲಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಏನೂ ಬದಲಾಗಿಲ್ಲ. ಸೌಕರ್ಯಗಳ ವಿಷಯದಲ್ಲಿ ಇನ್ನಷ್ಟು ಹಿಂದಕ್ಕೆ ಹೋಗುತ್ತಿದೆ’ ಎಂದು ಪ್ರತಾಪ್ ನಗರದ ನಿವಾಸಿ ವಿಠಲ್ ಬೇಸರ ವ್ಯಕ್ತಪಡಿಸಿದರು.
‘ಪೌರಾಡಳಿತ ಸಚಿವರಿಗೆ ಇದು ಒಳ್ಳೆಯ ಅವಕಾಶ. ಹಿಂದೆ ಶಾಸಕರಿದ್ದಾಗ, ‘ನನಗೆ ಬರುವ ಅನುದಾನ ಸೀಮಿತ. ಅದರಲ್ಲಿಯೇ ಉತ್ತಮ ಕೆಲಸ ಮಾಡಲು ಪ್ರಯತ್ನಿಸುವೆ’ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದರು. ಈಗ ಅವರು ಸಂಪುಟ ದರ್ಜೆ ಸಚಿವರು. ಮೇಲಿಂದ ಪೌರಾಡಳಿತ ಖಾತೆ ಅವರ ಬಳಿ ಇದೆ. ಅವರ ತವರು ಕ್ಷೇತ್ರದ ಹೆಚ್ಚಿನ ಭಾಗ ಬೀದರ್ ನಗರದ ಮತದಾರರೇ ಆಗಿದ್ದಾರೆ. ನಗರದ ಮುಖ್ಯರಸ್ತೆಗಳು ಹಾಳಾಗಿವೆ. ವಿದ್ಯುತ್ ದೀಪಗಳಿಲ್ಲ. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಹಲವು ಬಡಾವಣೆಗಳಲ್ಲಿ ಕನಿಷ್ಠ ನಾಗರಿಕ ಸೌಕರ್ಯಗಳಿಲ್ಲ. ತಿಂಗಳಿಗೊಮ್ಮೆಯಾದರೂ ಸಚಿವರು ಒಂದೊಂದು ವಾರ್ಡ್‌ನಲ್ಲಿ ಸಭೆ ನಡೆಸಿ, ಜನರ ಸಮಸ್ಯೆ ಆಲಿಸಿ ಬಗೆಹರಿಸಲು ಗಮನ ಹರಿಸಬೇಕು’ ಎಂದು ರಾಂಪೂರೆ ಕಾಲೊನಿಯ ಗಣೇಶ ಆಗ್ರಹಿಸಿದರು.
‘ಬಡಾವಣೆಗಳಿಗೆ ಎರಡ್ಮೂರು ದಿನಗಳಿಗೊಮ್ಮೆ ಕಸ ಸಂಗ್ರಹಿಸುವ ವಾಹನಗಳು ಬರುತ್ತಿವೆ. ದುರ್ಗಂಧ ಬರುವುದರಿಂದ ಜನ ಮನೆಯಲ್ಲಿ ಇರಿಸಲಾಗದೆ ಅನಿವಾರ್ಯವಾಗಿ ನಿವೇಶನಗಳು, ಉದ್ಯಾನದ ಜಾಗಗಳಲ್ಲಿ ತಂದು ಸುರಿಯುತ್ತಿದ್ದಾರೆ. ಜನರಿಗೆ ಓಡಾಡಲು ಉತ್ತಮ ರಸ್ತೆ, ಬೀದಿ ದೀಪ ಹಾಗೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾದರೆ ಸಾಕು. ಆದರೆ, ಅದೇ ಇಲ್ಲಿಲ್ಲ’ ಎಂದು ಅಲ್ಲಮಪ್ರಭು ಕಾಲೊನಿಯ ವಿಜಯ ಮಹಾಂತೇಶ ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧ ಪೌರಾಡಳಿತ ಸಚಿವ ರಹೀಂ ಖಾನ್ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.