ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ: ಬೀದರ್‌ನ ಬೀದಿಗಳಿಗೆ ಬಂತು ಬೆಳಕು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 15:59 IST
Last Updated 18 ನವೆಂಬರ್ 2024, 15:59 IST
<div class="paragraphs"><p>ಬೀದರ್‌ನ ನೌಬಾದ್‌ ಸಮೀಪದ ಬೀದರ್‌–ನಾಂದೇಡ್‌ ರಸ್ತೆಯಲ್ಲಿ ದೀಪಗಳು ಬೆಳಗುತ್ತಿರುವುದು</p></div>

ಬೀದರ್‌ನ ನೌಬಾದ್‌ ಸಮೀಪದ ಬೀದರ್‌–ನಾಂದೇಡ್‌ ರಸ್ತೆಯಲ್ಲಿ ದೀಪಗಳು ಬೆಳಗುತ್ತಿರುವುದು

   

ಬೀದರ್‌: ಕತ್ತಲೆಯಲ್ಲಿ ಮುಳುಗಿದ್ದ ನಗರದ ಪ್ರಮುಖ ರಸ್ತೆಗಳು ಸೋಮವಾರ ಬೆಳಕು ಕಂಡಿವೆ.

‘ಮಹಾ’ನಗರದ ಬೀದಿಗಳಿಗಿಲ್ಲ ಬೀದಿದೀಪ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಸೋಮವಾರ (ನ.18) ವರದಿ ಪ್ರಕಟಿಸಿತ್ತು. ವರದಿಗೆ ನಗರಸಭೆ ಸ್ಪಂದಿಸಿ, ಕ್ರಮ ಕೈಗೊಂಡಿದೆ.

ADVERTISEMENT

‘ಲೋಕೋಪಯೋಗಿ ಇಲಾಖೆಯವರು ನಗರದ ಬರೀದ್‌ ಷಾಹಿ ಉದ್ಯಾನದಿಂದ ನೌಬಾದ್‌ ಬಸವೇಶ್ವರ ವೃತ್ತದ ವರೆಗೆ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಮಾಹಿತಿ ಕೊಡದೆ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ವಿದ್ಯುತ್‌ ಸಂಪರ್ಕದ ತಂತಿಗಳು ಕಡಿದು ಹೋಗಿದ್ದರಿಂದ ಆ ಭಾಗದಲ್ಲಿ ಬೀದಿ ದೀಪಗಳು ಉರಿಯುತ್ತಿರಲಿಲ್ಲ. ಅದನ್ನೀಗ ಸರಿಪಡಿಸಲಾಗಿದೆ’ ಎಂದು ನಗರಸಭೆಯ ಕಿರಿಯ ಎಂಜಿನಿಯರ್‌ ಸಂಗಮೇಶ ಶೇರಿಕಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಗರದ ಗುರುದ್ವಾರದಿಂದ ಜನವಾಡ ರಸ್ತೆ, ಚಿದ್ರಿ–ಮೈಲೂರ್‌ ರಸ್ತೆಯಲ್ಲೂ ಬೀದಿದೀಪಗಳಿಗೆ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಒಟ್ಟು 9 ಕಡೆಗಳಲ್ಲಿ ಸಂಜೆಯಾಗುತ್ತಲೇ ಬೀದಿದೀಪ ಹಾಕಲು ಹಾಗೂ ಬೆಳಕು ಹರಿಯುತ್ತಿದ್ದಂತೆ ತೆಗೆಯಲು ಸಿಬ್ಬಂದಿ ನೇಮಕ ಮಾಡಲಾಗಿದೆ. ಬೀದಿ ದೀಪಗಳು ಹಾಳಾದರೂ ಗಮನಕ್ಕೆ ತರುವುದು ಅವರ ಕೆಲಸ. ಕೆಲವರು ನಿರ್ಲಕ್ಷ್ಯ ವಹಿಸಿದ್ದರಿಂದ ಬೀದಿ ದೀಪಗಳು ಉರಿದಿರಲಿಲ್ಲ. ಈಗ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದ್ದು, ಎಲ್ಲೆಲ್ಲಿ ವಿದ್ಯುತ್‌ ತಂತಿಗಳು ಕಡಿದು ದೀಪಗಳು ಉರಿಯುತ್ತಿರಲಿಲ್ಲವೋ ಅಲ್ಲೆಲ್ಲ ಸರಿಪಡಿಸಲಾಗಿದೆ. ಹಾಳಾದ ವಿದ್ಯುತ್‌ ದೀಪಗಳನ್ನು ಇಷ್ಟರಲ್ಲೇ ದುರಸ್ತಿಪಡಿಸಲಾಗುವುದು’ ಎಂದು ಹೇಳಿದ್ದಾರೆ.

‘ನೌಬಾದ್‌ ಬಸವೇಶ್ವರ ವೃತ್ತದಿಂದ ಕೊಳಾರ ಕೈಗಾರಿಕೆ ಪ್ರದೇಶದ ವರೆಗೆ ಹೊಸ ರಸ್ತೆ ಅಭಿವೃದ್ಧಿಪಡಿಸಿ, ಬೀದಿ ದೀಪಗಳನ್ನು ಅಳವಡಿಸಿದ್ದು ಲೋಕೋಪಯೋಗಿ ಇಲಾಖೆಯವರು. ಆ ಭಾಗ ಇನ್ನೂ ನಗರಸಭೆಗೆ ಹಸ್ತಾಂತರಿಸಿಲ್ಲ. ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲಿ ಬೀದಿ ದೀಪಗಳು ಹಾಳಾಗಿರುವುದನ್ನು ಸಂಬಂಧಿಸಿದವರ ಗಮನಕ್ಕೆ ತರಲಾಗುವುದು. ಇನ್ನು, ನಗರದ ಬಸವೇಶ್ವರ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಅಳವಡಿಸಿರುವಂತೆ ಹೊಸ ಬೀದಿ ದೀಪಗಳನ್ನು ನಗರದ ಬಹುತೇಕ ಭಾಗಗಳಲ್ಲಿ ಹಾಕಲು ನಿರ್ಧರಿಸಲಾಗಿದೆ. ಕೆಕೆಆರ್‌ಡಿಬಿ ಅನುದಾನದ ಅಡಿಯಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.