ADVERTISEMENT

ಬೇಡಿಕೆ ಈಡೇರಿಕೆಗೆ ಜೈನ ಸಮುದಾಯದಿಂದ ಸುವರ್ಣಸೌಧ ಮುತ್ತಿಗೆ: ಗುಣಧರನಂದಿ ಮಹಾರಾಜ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 14:30 IST
Last Updated 23 ನವೆಂಬರ್ 2024, 14:30 IST
ಬೆಳಗಾವಿ ಸುವರ್ಣಸೌಧ
ಬೆಳಗಾವಿ ಸುವರ್ಣಸೌಧ   

ಹುಬ್ಬಳ್ಳಿ: 'ಜೈನ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ಸಂದರ್ಭ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾ‌ನಿಸಲಾಗಿದೆ' ಎಂದು ವರೂರು ನವಗ್ರಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜ ಹೇಳಿದರು.

'ಹುಬ್ಬಳ್ಳಿಯಿಂದ ಪಾದಯಾತ್ರೆ ಹೊರಟು ಡಿಸೆಂಬರ್ 9ರಂದು ಬೆಳಗಾವಿಯ ಬಸ್ತವಾಡ ಗ್ರಾಮದಿಂದ 30 ಸಾವಿರದಷ್ಟು ಸಮುದಾಯದ ಮಂದಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ. ಆಗಲೂ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು' ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

'ಸರ್ಕಾರ ಎಲ್ಲ ಸಮಾಜಕ್ಕೂ ನಿಗಮ‌ ಮಂಡಳಿ ನೀಡಿದೆ. ಆದರೆ, ಅತಿಚಿಕ್ಕ ಜೈನ ಸಮುದಾಯಕ್ಕೆ ಇನ್ನೂ ನಿಗಮಮಂಡಳಿ ನೀಡಿಲ್ಲ. ಗೃಹಸಚಿವ ಜಿ. ಪರಮೇಶ್ವರ ಆಶ್ವಾಸನೆ ನೀಡಿ ಒಂದೂವರೆ ವರ್ಷ ಗತಿಸಿವೆ‌. ಆ ಕುರಿತು ಪ್ರಶ್ನಿಸಿದರೆ ವಿಧಾನಸೌಧದಲ್ಲಿ ಕಡತ ಪರಿಶೀಲನೆಯ ಪ್ರಕ್ರಿಯೆಯಲ್ಲಿ ಇದೆ ಎನ್ನುತ್ತಿದ್ದಾರೆ. ಈ ಅವಧಿಯಲ್ಲಿ ಮೂರು-ನಾಲ್ಕು ಸಮಾಜಕ್ಕೆ ನಿಗಮಂಡಳಿ ನೀಡಲಾಗಿದೆ. ನಮಗೆ ನೀಡಲು ಸಮಸ್ಯೆ ಏನಿದೆ' ಎಂದು ಪ್ರಶ್ನಿಸಿದರು.

ADVERTISEMENT

'ವರೂರು ಕ್ಷೇತ್ರದಲ್ಲಿ ಜನವರಿಯಲ್ಲಿ ಮಹಾಮಸ್ತಾಕಾಭಿಷೇಕ ನಡೆಯಲಿದ್ದು, ತಮಿಳನಾಡು, ಕೇರಳ, ಗುಜರಾತ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಬರುತ್ತಾರೆ. ಚಳಿಗಾಲದ ಸಮಯವಾಗಿರುವುದರಿಂದ ರಾತ್ರಿವೇಳೆ ವಿಶ್ರಾಂತಿ ಪಡೆಯಲು ಸರ್ಕಾರಿ ಕಟ್ಟಡಗಳನ್ನು ನೀಡಬೇಕು' ಎಂದು ಒತ್ತಾಯಿಸಿದರು.

'ಜೈನ ಸಮಾಜ ಸಾಕ್ಷರತೆ ಹೊಂದಿದ್ದರೂ, ಸಾಕಷ್ಟು ಕುಟುಂಬ ಬಡತನದಲ್ಲಿಯೇ ಇದೆ. ಅಂಥವರನ್ನು ಗುರುತಿಸಿ ಸರ್ಕಾರ ನಿವೇಶನ ನೀಡಿದರೆ, ಮನೆ ಕಟ್ಟಿಸಿಕೊಳ್ಳಲು ನಾವು ಸಹಾಯ ಮಾಡುತ್ತೇವೆ. ಅಲ್ಲದೆ, ಸಮಾಜದ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು' ಎಂದ ಗುಣಧರನಂದಿ ಮಹಾರಾಜರು, 'ಚಳಿಗಾಲ ಅಧಿವೇಶನದ ಒಳಗೆ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರಪ್ರತಿಭಟನೆ ಹಮ್ಮಿಕೊಳ್ಳಲಾಗುವುದು' ಎಂದರು.

'ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಕಡ್ಡಾಯ' ಸರ್ಕಾರದ ಆದೇಶದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, 'ರಾಜ್ಯದಲ್ಲಿನ ಬಹುತೇಕ ಮಠಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಧಾರ್ಮಿಕ‌ ಪರಂಪರೆ, ಅಹಿಂಸಾ ಧರ್ಮ ಪಾಲಿಸುತ್ತ ಮಾಂಸ ಸೇವನೆಯಿಂದ ದೂರ ಇದ್ದಾರೆ. ಆದರೆ, ಸರ್ಕಾರದ ಆದೇಶ ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಮಠಗಳಲ್ಲಿ ಓದುವ ಮಕ್ಕಳಿಗೆ ಮೊಟ್ಟೆ ತಿನ್ನುವ ಆದೇಶದಿಂದ ವಿನಾಯ್ತಿ ನೀಡಿ, ಆದೇಶ ಹಿಂಪಡೆಯಬೇಕು' ಎಂದು ಆಗ್ರಹಿಸಿದರು.

ಜೈನ ಸಮುದಾಯದ ಮುಖಂಡರಾದ ಸಂದೀಪ ಸೈಬಣ್ಣವರ, ದೇವೇಂದ್ರಪ್ಪ ಕಾಗೇನವರ, ರಾಜೇಂದ್ರ ಬಿಳಗಿ, ಮುರುಗಿ ಪಾಟೀಲ, ವಿಮಲ ತಾಳಿಕೋಟೆ ಇದ್ದರು.

ಅಧ್ಯಕ್ಷ ಸ್ಥಾನ: ಗುಣಧರನಂದಿ ಅಸಮಾಧಾನ

'ಅಲ್ಪಸಂಖ್ಯಾತರ ನಿಗಮ‌ ಮಂಡಳಿಗೆ ಒಂದೇ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡುತ್ತ ಬರಲಾಗಿದೆ. ಜೈನ್, ಬೌದ್ಧ, ಕ್ರಿಶ್ಚಿಯನ್, ಸಿಖ್ ಸಮುದಾಯದವರು ಸಹ ಇದೇ ನಿಗಮ ಮಂಡಳಿಗೆ ಒಳಪಡುತ್ತಾರೆ. ಎಲ್ಲ ಸಮುದಾಯದವರಿಗೂ ಅಧ್ಯಕ್ಷ ಸ್ಥಾನ ನೀಡಬೇಕು. ಎರಡು, ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರನ್ನು ಬದಲಾಯಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಬೇಕು' ಎಂದು ಗುಣಧರನಂದಿ ಮಹಾರಾಜ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.