ADVERTISEMENT

ಪೊಲೀಸ್ ದೂರು ಪ್ರಾಧಿಕಾರ ಸದುಪಯೋಗ ಪಡೆಯಿರಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 16:45 IST
Last Updated 25 ಜುಲೈ 2019, 16:45 IST
ಬೀದರ್‌ನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಸಂತ್ರಸ್ತ ಪರಿಹಾರ ಯೋಜನೆ-2011 ಕುರಿತು ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಮಾತನಾಡಿದರು. ಪ್ರಕಾಶ ಡೊಂಗರೆ, ಪ್ರಕಾಶ ವಿ.ಎಂ., ಹಳ್ಳಿಖೇಡ ಎ.ಎಂ., ಅಂಬಾದಾಸ ವಾಘರಾಜ ಇದ್ದರು
ಬೀದರ್‌ನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಸಂತ್ರಸ್ತ ಪರಿಹಾರ ಯೋಜನೆ-2011 ಕುರಿತು ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಮಾತನಾಡಿದರು. ಪ್ರಕಾಶ ಡೊಂಗರೆ, ಪ್ರಕಾಶ ವಿ.ಎಂ., ಹಳ್ಳಿಖೇಡ ಎ.ಎಂ., ಅಂಬಾದಾಸ ವಾಘರಾಜ ಇದ್ದರು   

ಬೀದರ್‌: ‘ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಕಿರುಕುಳ ಅಥವಾ ಅನ್ಯಾಯ ಆಗಿದ್ದಲ್ಲಿ ಪೊಲೀಸ್ ದೂರು ಪ್ರಾಧಿಕಾರದ ಸಹಾಯ ಪಡೆಯಬಹುದಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ತಿಳಿಸಿದರು.

ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಸಂತ್ರಸ್ತ ಪರಿಹಾರ ಯೋಜನೆ-2011 ಕುರಿತು ಬುಧವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾನ್ಯವಾಗಿ ಯಾವುದೇ ರೀತಿಯ ಅನ್ಯಾಯಗಳು ನಡೆದಲ್ಲಿ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ. ರಕ್ಷಣೆ ನೀಡುವ ಪೊಲೀಸರಿಂದಲೇ ತೊಂದರೆಯಾದಲ್ಲಿ ಜನ ಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಪೊಲೀಸ್ ದೂರು ಪ್ರಾಧಿಕಾರ ರಚಿಸಲಾಗಿದೆ. ಡಿವೈಎಸ್‌ಪಿ ದರ್ಜೆಗಿಂತ ಕೆಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಹಾಗೂ ಡಿವೈಎಸ್‌ಪಿ ದರ್ಜೆಗಿಂತ ಮೇಲ್ಪಟ್ಟ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದರು.

ADVERTISEMENT

‘ಯಾವುದೋ ಒಂದು ಸನ್ನಿವೇಶದಲ್ಲಿ ಕೊಲೆ ನಡೆದಲ್ಲಿ ಅಂತಹ ಕುಟುಂಬಸ್ಥರು ಬೀದಿಗೆ ಬರುವ ಸಾಧ್ಯತೆ ಇರುತ್ತದೆ. ಅಂತಹವರಿಗೆ ನೆರವಾಗಲು ಹೈಕೋರ್ಟ್‌ ನಿರ್ದೇಶನದಂತೆ ರಾಜ್ಯದಲ್ಲಿ ಸಂತ್ರಸ್ತ ಪರಿಹಾರ ಯೋಜನೆ-2011 ಅನ್ನು ಜಾರಿಗೆ ತರಲಾಗಿದೆ. ಅಪರಾಧ ಕೃತ್ಯದಲ್ಲಿ ವ್ಯಕ್ತಿ ಮರಣ ಹೊಂದಿದಲ್ಲಿ ಆತನನ್ನು ಅವಲಂಬಿಸಿದ ವ್ಯಕ್ತಿಗೆ ಪರಿಹಾರ ನೀಡಲಾಗುತ್ತದೆ. ಮರಣ ಹೊಂದಿದ ವ್ಯಕ್ತಿ 20 ರಿಂದ 40 ವರ್ಷದವರಾಗಿದ್ದರೆ ₹ 3 ಲಕ್ಷ, 40 ರಿಂದ 60 ವರ್ಷದೊಳಗಿದ್ದಲ್ಲಿ ₹ 2 ಲಕ್ಷ ಹಾಗೂ 60 ವರ್ಷಕ್ಕಿಂತ ಮೇಟ್ಟವರಿದ್ದರೆ ₹ 1 ಲಕ್ಷ ಸಹಾಯಧನ ನೀಡಲು ಅವಕಾಶ ಇದೆ’ ಎಂದು ಹೇಳಿದರು.

‘ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪರಿಹಾರ ಧನ ಕೊಡಲು ಕಾನೂನಿನಲ್ಲಿ ಅವಕಾಶ ಇದೆ. ಇಂತಹ ಕೃತ್ಯಗಳು ನಡೆದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆಯಬಹುದು’ ಎಂದು ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಹಳ್ಳಿಖೇಡ ಎ.ಎಂ, ಉಪ ಪ್ರಾಚಾರ್ಯ ಪ್ರಕಾಶ ಡೊಂಗರೆ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ ವಿ.ಎಂ, ಜಂಟಿ ಕಾರ್ಯದರ್ಶಿ ಅಂಬಾದಾಸ ವಾಘರಾಜ ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಬಾಲಕರ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.