ADVERTISEMENT

ರಾಜಕೀಯ ಭಾಷಣಕ್ಕೆ ದಿನಾಂಕ, ವೇದಿಕೆ ಸ್ಥಳ ತಿಳಿಸಿ: ಸಿದ್ದಲಿಂಗಪ್ಪ ಪಾಟೀಲ ಸವಾಲು

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಸವಾಲು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 8:43 IST
Last Updated 11 ಡಿಸೆಂಬರ್ 2023, 8:43 IST
ಡಾ.ಸಿದ್ದಲಿಂಗಪ್ಪ ಪಾಟೀಲ
ಡಾ.ಸಿದ್ದಲಿಂಗಪ್ಪ ಪಾಟೀಲ   

ಹುಮನಾಬಾದ್: ‘ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಅವರು ರಾಜಕೀಯ ಭಾಷಣ ಮಾಡುವುದಕ್ಕೆ ದಿನಾಂಕ ಮತ್ತು ವೇದಿಕೆ ಸ್ಥಳ ತಿಳಿಸಿದರೆ ನಾನೇ ಬರುತ್ತೇನೆ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಸವಾಲು ಹಾಕಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನ.22ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿನ ರಾಜಕೀಯವನ್ನು ಭೀಮರಾವ್ ಪಾಟೀಲ ಅವರು ಈಚೆಗೆ ನಡೆದ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಎಳೆದಿದ್ದಾರೆ‌. ವಿದ್ಯಾರ್ಥಿಗಳು ಇರುವ ಕಾರಣ ನಾನು ರಾಜಕೀಯ ಭಾಷಣ ಮಾಡುವುದಕ್ಕೆ ಹೋಗಲಿಲ್ಲ. ಒಂದು ವೇದಿಕೆ ಮಾಡಿ ಎಂದಿದ್ದೆ. ಅಧಿವೇಶನ ಮುಗಿದ ನಂತರ ವಿಧಾನ ಪರಿಷತ್ ಸದಸ್ಯರು ಯಾವ ದಿನ ಎಂದು ತಿಳಿಸಿದರೆ ನಾನು ಆ ವೇದಿಕೆಗೆ ಬರಲು ಸಿದ್ಧನಿದ್ದೇನೆ’ ಎಂದರು.

ADVERTISEMENT

‘ನ.22ರಂದು ಜಿಲ್ಲೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಬಂದಿದ್ದರು. ಹೀಗಾಗಿ ನಾನು ಮುಂಚಿತವಾಗಿ ತಾ.ಪಂ ಇಒ ಗೋವಿಂದ್ ಅವರಿಗೆ ಕರೆ ಮಾಡಿ ಕೆಡಿಪಿ ಸಭೆಗೆ ಸದಸ್ಯರು ಹಾಗೂ ಅಧಿಕಾರಿಗಳನ್ನು ಮಧ್ಯಾಹ್ನ 1 ಗಂಟೆಗೆ ಬರಲು ತಿಳಿಸಿದ್ದೇನೆ. ಆದರೂ ಸಹ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ ಹಾಗೂ ಭೀಮರಾವ್ ಪಾಟೀಲ ಕೆಡಿಪಿ ಸಭೆ ಮುಂದೂಡುವಂತೆ ತಾಪಂ ಇಒ ಅವರಿಗೆ ಮನವಿಗಳನ್ನು ಕಳಿಸಿದರು. ಅಲ್ಲದೇ ತಾಪಂ ಇಒ ಅವರಿಗೆ ಪದೇಪದೆ ಕರೆ ಮಾಡಿ ಸಭೆ ನಿಲ್ಲಿಸುವಂತೆ ಒತ್ತಡ ಹಾಕುತ್ತಿದ್ದರು. ಇಲ್ಲಿಯ ಕಾಂಗ್ರೆಸ್ ನಾಯಕರಿಗೆ ಅವರ ಪ್ರತಿಷ್ಠೆ ಮುಖ್ಯವಾಗಿದೆ. ಜನರ ಕಷ್ಟಗಳು ಅವರಿಗೆ ಬೇಕಾಗಿಲ್ಲ’ ಎಂದು ದೂರಿದರು.

‘ಹುಮನಾಬಾದ್ ಅಭಿವೃದ್ಧಿ ವಿಷಯದಲ್ಲಿ ಬರೀ ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ ವಿವಿಧ ತಾಲ್ಲೂಕುಗಳು ಬರಗಾಲ ಘೋಷಣೆ ಆಗಿದ್ದವು. ಆದರೆ ಹುಮನಾಬಾದ್ ಆಗಿರಲಿಲ್ಲ. ಆ ಸಂದರ್ಭದಲ್ಲಿ ಇವರು ಒಬ್ಬರು ಸಹ ಮುಖ್ಯಮಂತ್ರಿ ಸೇರಿದಂತೆ ಯಾರೊಬ್ಬರಿಗೂ ಹುಮನಾಬಾದ್ ತಾಲ್ಲೂಕು ಬರಗಾಲ ಘೋಷಣೆ ಮಾಡುವಂತೆ ಆಗ್ರಹಿಸಿಲ್ಲ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ ಪಾಟೀಲ, ಮಲ್ಲಿಕಾರ್ಜುನ ಸೀಗಿ, ನಾಗಭೂಷಣ ಸಂಗಮ್, ಗಿರೀಶ್ ತುಂಬಾ, ಅನೀಲ ಪಸರ್ಗಿ, ಸಂಜು ವಾಡೇಕರ್ ಹಾಜರಿದ್ದರು.

ಹಾಡಹಗಲೇ ಕೊಲೆ ಆರೋಪ

‘ಹುಮನಾಬಾದ್‌ನಲ್ಲಿ ಹಾಡಗಲೇ ಕೊಲೆ, ದರೋಡೆ ನಡೆಯುತ್ತಿವೆ. ಪಟ್ಟಣದಲ್ಲಿನ ಮೋತಿಮಾಲ್ ಸಂಗಮ್ ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಆರೋಪದ ಮೇರೆಗೆ ಬೀದರ್ ‌ಅಧಿಕಾರಿಗಳು ದಾಳಿ ಮಾಡಿದ್ದರು. ಸ್ಥಳೀಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಇಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ದಾರಿ ತಪ್ಪಿದೆ. ಹುಮನಾಬಾದ್ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಇಲ್ಲಿಯ ಸ್ಥಳೀಯ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುವುದು ಸರಿಯಲ್ಲ. ನನ್ನ ನಿಮ್ಮ ರಾಜಕೀಯ ಪ್ರತಿಷ್ಠೆ ಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ನೋಡೋಣ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಸವಾಲು ಹಾಕಿದರು.

‘ಭಕ್ತರ ಬಂಗಾರ ನಮ್ಮದು ಎನ್ನುತ್ತಿದ್ದಾರೆ

‘ಭಕ್ತರು ನೀಡಿದ ಬಂಗಾರದಲ್ಲಿ ವೀರಭದ್ರೇಶ್ವರ ದೇವರಿಗೆ ಬಂಗಾರದ ಕಿರೀಟ ಮಾಡಲಾಗಿದೆ. ಆದರೆ ಈ ಬಂಗಾರ ನಮ್ಮ ಮನೆಯಿಂದ ನೀಡುತ್ತಿದ್ದೇವೆ ಎಂದು ಮಾಜಿ ಶಾಸಕ ರಾಜಶೇಖರ ಪಾಟೀಲ ಅವರು ಬಸವಕಲ್ಯಾಣ ಉಪವಿಭಾಗಾಧಿಕಾರಿಗೆ ತಿಳಿಸಿ ದೇವರಿಗೆ ಕಿರೀಟ ಅರ್ಪಿಸಿದ್ದಾರೆ. ಹಾಗಾದರೆ 1 ಕೆ.ಜಿ. ಬಂಗಾರ ಎಲಿಂದ ಬಂತ್ತು. ಇದರ ರಸೀದಿ ತೋರಿಸಿ’ ಎಂದರು.

‘ಇಬ್ಬರು ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ’

‘ನನಗೆ ಮಾಹಿತಿ ಇಲ್ಲದೆ ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಾಲಯದಲ್ಲಿ ದಸರಾ ಹಬ್ಬದ ದಿನದಂದು 1 ಕೆ.ಜಿ. ಬಂಗಾರದ ಕಿರೀಟ ವೀರಭದ್ರೇಶ್ವರ ದೇವರಿಗೆ ಅರ್ಪಿಸಿದ ಕುರಿತು ಬಸವಕಲ್ಯಾಣ ಉಪವಿಭಾಗಾಧಿಕಾರಿಗೆ ಹಾಗೂ ಹುಮನಾಬಾದ್ ಪಟ್ಟಣದಲ್ಲಿ ನ.22ರಂದು ನಡೆದ ಕೆಡಿಪಿ ಸಭೆಯಲ್ಲಿ ಸಭೆಗೆ ಅಗೌರವ ತೋರಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ್ ಅವರ ವಿರುದ್ಧ ಹಕ್ಕುಚ್ಯುತಿ ಹಾಕಿದ್ದೇನೆ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.