ಬೀದರ್: ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ತುರ್ತು ಸೇವೆಗಾಗಿ ಜಾರಿಗೊಳಿಸುತ್ತಿರುವ 112 ತುರ್ತು ಸಹಾಯವಾಣಿ ಸೇವೆಗೆ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ 10 ವಾಹನಗಳು ಬೀದರ್‌ಗೆ ಬಂದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.
ಒಂದೇ ದೇಶ ಒಂದೇ ತುರ್ತು ಕರೆ ಸಂಖ್ಯೆ-112′ ನೂತನ ತುರ್ತು ಸ್ಪಂದನ ಸಹಾಯ ವ್ಯವಸ್ಥೆ ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸೇವೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ತುರ್ತು ಸೇವೆಯು ದಿನದ 24 ಗಂಟೆಯೂ ಲಭ್ಯವಾಗಲಿದೆ.
ಈ ಯೋಜನೆ ಜಾರಿಯಾದ ನಂತರ ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್‍ಗಾಗಿ ಬೇರೆ ಬೇರೆ ಸಂಖ್ಯೆಗಳಿಗೆ ಕರೆ ಮಾಡುವ ಅಗತ್ಯವಿರುವುದಿಲ್ಲ. 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಈ ಎಲ್ಲ ಸಮಸ್ಯೆಗಳಿಗೂ ತುರ್ತು ಸೇವೆ ಲಭಿಸಲಿದೆ. ಕರೆ ಸ್ವೀಕರಿಸಿದ ತಕ್ಷಣ ವಾಹನವು ಅಲ್ಲಿಗೆ ತಲುಪಿ ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ವ್ಯವಸ್ಥೆ ಇದಾಗಿದೆ.
ಕರೆ ಸ್ವೀಕರಿಸುವಾಗಲೇ ಕರೆ ಎಲ್ಲಿಂದ ಬಂತು, ಎಷ್ಟು ಸಮಯಕ್ಕೆ ಬಂತು ಎಂಬ ಮಾಹಿತಿ ಕರೆ ಬಂದ ಸ್ಥಳದ ಉಪಗ್ರಹ ಆಧಾರಿತ ಅಕ್ಷಾಂಶ-ರೇಖಾಂಶ ಸಹಿತ ದಾಖಲಾಗುತ್ತದೆ. ಸಂಬಂಧಪಟ್ಟ ಪ್ರದೇಶದ ಹತ್ತಿರದಲ್ಲಿ ನಿಂತಿರುವ ವಾಹನಗಳನ್ನು ಘಟನಾ ಸ್ಥಳಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅತ್ಯಾಧುನಿಕ ವಾಹನದಲ್ಲಿ ಸ್ಟಾರ್ಟ್ ಗುಂಡಿ ಒತ್ತಿದರೆ ಅದು ವಾಹನ ಎಲ್ಲಿ ಹೋಗಬೇಕು ಎಂದು ಡಿಜಿಟಲ್ ಮಾರ್ಗಸೂಚಿಯನ್ನು ತೋರಿಸುವ ವಿನೂತನ ವ್ಯವಸ್ಥೆ ಇರಲಿದೆ.
ತುರ್ತು ಸ್ಪಂದನ ಸಹಾಯದ ವಾಹನ ಎಲ್ಲಿ ಹೋಗುತ್ತಿದೆ, ಎಷ್ಟು ಹೊತ್ತಿಗೆ ಬಿಟ್ಟಿದೆ, ಎಷ್ಟು ಹೊತ್ತಿಗೆ ತಲುಪಿದೆ ಸೇರಿದಂತೆ ಸಮಗ್ರ ಮಾಹಿತಿ ಕೇಂದ್ರ ಕಚೇರಿಯ ಸರ್ವರ್ ಹಾಗೂ ಹಿರಿಯ ಅಧಿಕಾರಿಗಳ ಮೊಬೈಲ್‍ನಲ್ಲಿ ದಾಖಲಾಗುತ್ತದೆ. ಒಂದು ವೇಳೆ ನಿಗದಿತ ಸ್ಥಳಕ್ಕೆ ಹೋಗುವುದು ವಿಳಂಬವಾದರೆ ಅಧಿಕಾರಿಗಳಿಗೆ ಕಾರಣ ಸಹಿತ ತಿಳಿಸಬೇಕಾಗುತ್ತದೆ.
ನೂತನ ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಜಿಲ್ಲೆಯಲ್ಲಿ ಜಾರಿಯಾದ ನಂತರ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.