ADVERTISEMENT

ಜನವಾಡ | ಕಟ್ಟಡ ಅಪೂರ್ಣ, ಆಟಕ್ಕಿಲ್ಲ ಮೈದಾನ

ಕಮಠಾಣ, ಮಂದಕನಳ್ಳಿ, ಮನ್ನಳ್ಳಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಮೂಲಸೌಕರ್ಯ ಕೊರತೆ

ನಾಗೇಶ ಪ್ರಭಾ
Published 16 ಜೂನ್ 2024, 6:59 IST
Last Updated 16 ಜೂನ್ 2024, 6:59 IST
ಬೀದರ್ ತಾಲ್ಲೂಕಿನ ಕಮಠಾಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಠ ಆಲಿಸುತ್ತಿರುವುದು
ಬೀದರ್ ತಾಲ್ಲೂಕಿನ ಕಮಠಾಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಠ ಆಲಿಸುತ್ತಿರುವುದು   

ಜನವಾಡ: ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆ ಆಗಿರುವ ಬೀದರ್ ತಾಲ್ಲೂಕಿನ ಕಮಠಾಣ, ಮಂದಕನಳ್ಳಿ ಹಾಗೂ ಮನ್ನಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿವೆ.

ಖಾಲಿ ಇರುವ ಪ್ರಾಚಾರ್ಯ, ಉಪನ್ಯಾಸಕ, ಸೇವಕ ಹುದ್ದೆಗಳು, ಕೋಣೆ, ಆಟದ ಮೈದಾನ ಮೊದಲಾದ ಕೊರತೆಗಳು ಗುಣಮಟ್ಟದ ಶಿಕ್ಷಣಕ್ಕೆ ತೊಡಕಾಗಿ ಪರಿಣಮಿಸಿವೆ. ವಿಶೇಷ ಅಂದರೆ, ಮೂರೂ ಕಾಲೇಜುಗಳಲ್ಲಿ ಕಚೇರಿ ಸಹಾಯಕರೇ  ಇಲ್ಲ. ನಿತ್ಯ ಪ್ರಾಚಾರ್ಯರೇ ಬಂದು ಕಾಲೇಜು ಬೀಗ ತೆರೆಯುವ ಪರಿಸ್ಥಿತಿ ಇದೆ.

ಕಮಠಾಣ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟದ ಮೈದಾನವೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಒಳಾಂಗಣ ಕ್ರೀಡೆಗಳಿಷ್ಟೇ ಸೀಮಿತರಾಗುವಂತಾಗಿದೆ.

ADVERTISEMENT

ಕಾಲೇಜಿನಲ್ಲಿ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಉಪನ್ಯಾಸಕ ಹಾಗೂ ಸೇವಕ ಹುದ್ದೆ ಖಾಲಿ ಇವೆ. ಎಫ್‍ಡಿಎ 2017 ರಿಂದ ಕರ್ತವ್ಯಕ್ಕೆ ನಿರಂತರ ಗೈರಾಗಿದ್ದಾರೆ. ಒಟ್ಟು ಒಂಬತ್ತು ಹುದ್ದೆಗಳಲ್ಲಿ ಆರು ಮಾತ್ರ ಭರ್ತಿ ಇವೆ.
ಕಾಲೇಜಿನಲ್ಲಿ ಕಲಾ ವಿಭಾಗವಷ್ಟೇ ಇದೆ. ಉತ್ತಮ ಉಪನ್ಯಾಸಕರಿರುವ ಕಾರಣ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ ಎಂದು ಪ್ರಾಚಾರ್ಯೆ ಪ್ರತಿಭಾ ಡಿ. ತಿಳಿಸುತ್ತಾರೆ.

2022ರಲ್ಲಿ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸೇರಿ ಒಟ್ಟು 73 ವಿದ್ಯಾರ್ಥಿಗಳಿದ್ದರು. ಕಳೆದ ವರ್ಷ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ತಲಾ 27 ಸೇರಿ 54 ವಿದ್ಯಾರ್ಥಿಗಳಿದ್ದರು. ಈ ವರ್ಷ ಈವರೆಗೆ ಪ್ರಥಮ ಪಿಯುಸಿಗೆ 23 ಮಂದಿ ಪ್ರವೇಶ ಪಡೆದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 24 ವಿದ್ಯಾರ್ಥಿಗಳು ಇದ್ದಾರೆ ಎಂದು ಹೇಳುತ್ತಾರೆ.

ಮಂದಕನಳ್ಳಿ ಕಾಲೇಜಿನಲ್ಲಿ 10 ಹುದ್ದೆಗಳಲ್ಲಿ ಇತಿಹಾಸ ಉಪನ್ಯಾಸಕ ಹಾಗೂ ಸಹಾಯಕರ ಹುದ್ದೆ ಖಾಲಿ ಇವೆ.
ಅಂತರ್ಜಲ ಮಟ್ಟ ಆಳಕ್ಕೆ ಹೋದ ಕಾರಣ ಆವರಣದಲ್ಲಿನ ಕೊಳವೆಬಾವಿ ಸದ್ಯ ನಿರುಪಯುಕ್ತವಾಗಿದೆ. ಅದರ ಮೋಟಾರ್ ಕೂಡ ಹಾಳಾಗಿದೆ. ಕಾರಣ, ಪ್ರೌಢಶಾಲೆಯಿಂದ ನೀರು ಪಡೆಯಲಾಗುತ್ತಿದೆ. ಏಳು ವರ್ಷದ ಹಿಂದೆ ಕಾಲೇಜು ಆವರಣದಲ್ಲಿ ಎರಡು ಕೋಣೆಗಳ ಕಾಮಗಾರಿ ಆರಂಭಿಸಿ ಅರ್ಧಕ್ಕೆ ಬಿಡಲಾಗಿದೆ.

ಸದ್ಯ ಐದು ಕೋಣೆಗಳಿದ್ದು, ಇನ್ನೆರಡು ಕೋಣೆಗಳಿದ್ದರೆ ಕಂಪ್ಯೂಟರ್ ಕೋಣೆ ಹಾಗೂ ಗ್ರಂಥಾಲಯಕ್ಕೆ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ಪಾಲಕರು.

ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗಗಳಿವೆ. ಎರಡೂ ಸೇರಿ ಪ್ರತಿ ವರ್ಷ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ತಲಾ 35 ವಿದ್ಯಾರ್ಥಿಗಳು ಇರುತ್ತಾರೆ. ಈ ವರ್ಷ ಈವರೆಗೆ ಪ್ರಥಮ ಪಿಯುಸಿಯಲ್ಲಿ 25 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 27 ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿಸುತ್ತಾರೆ ಪ್ರಾಚಾರ್ಯ ಚಂದ್ರಕಾಂತ ಗಂಗಶೆಟ್ಟಿ.

ಮನ್ನಳ್ಳಿ ಕಾಲೇಜಿನಲ್ಲಿ ಪ್ರಾಚಾರ್ಯ, ಉರ್ದು ಉಪನ್ಯಾಸಕ, ಸಹಾಯಕ ಸೇರಿ ಮೂರು ಹುದ್ದೆಗಳು ಖಾಲಿ ಇವೆ. ಕನ್ನಡ ಉಪನ್ಯಾಸಕರು ಪ್ರಭಾರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾಲೇಜಿನಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗಗಳು ಇವೆ. ಪ್ರತಿ ವರ್ಷ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸರಾಸರಿ 105 ವಿದ್ಯಾರ್ಥಿಗಳು ಇರುತ್ತಾರೆ. ಕಳೆದ ವರ್ಷ ಪ್ರಥಮ ಪಿಯುಸಿಯಲ್ಲಿ 106 ಹಾಗೂ ದ್ವಿತೀಯ ಪಿಯುಸಿಯಲ್ಲಿ 116 ವಿದ್ಯಾರ್ಥಿಗಳು ಇದ್ದರು ಎಂದು ಹೇಳುತ್ತಾರೆ ಪ್ರಭಾರ ಪ್ರಾಚಾರ್ಯ ಪ್ರೇಮನಾಥ ಪಾಂಚಾಳ.

ಈ ವರ್ಷ ಈವರೆಗೆ 67 ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 90 ವಿದ್ಯಾರ್ಥಿಗಳಿದ್ದಾರೆ ಎಂದು ಅವರು ಹೇಳಿದರು.

ಬೀದರ್ ತಾಲ್ಲೂಕಿನ ಮಂದಕನಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅರ್ಧಕ್ಕೆ ಬಿಡಲಾದ ಕೋಣೆಗಳ ಕಾಮಗಾರಿ
ಬೀದರ್ ತಾಲ್ಲೂಕಿನ ಮನ್ನಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನಿಂತ ವಿದ್ಯಾರ್ಥಿಗಳು
ಪ್ರತಿಭಾ ಡಿ
ಚಂದ್ರಕಾಂತ ಗಂಗಶೆಟ್ಟಿ
ಪ್ರೇಮನಾಥ ಪಾಂಚಾಳ
ಮುಬಾರಕ್ ಮಂದಕನಳ್ಳಿ
ಭೀಮರೆಡ್ಡಿ

ಎಲ್ಲೆಡೆ ಇಲ್ಲ ಎಲ್ಲ ವಿಭಾಗಗಳು ಕಲಾ ವಿಭಾಗಕ್ಕೆ ಅಧಿಕ ಬೇಡಿಕೆ ಮೂಲಸೌಕರ್ಯ ಕಲ್ಪಿಸಲು ಪಾಲಕರ ಒತ್ತಾಯ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದು ಸರ್ಕಾರಿ ಕಾಲೇಜುಗಳ ಉದ್ದೇಶವಾಗಿದೆ. ಶುಲ್ಕವೂ ತೀರಾ ಕಡಿಮೆ ಇದ್ದು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳಬೇಕು.

- ಪ್ರತಿಭಾ ಡಿ. ಪ್ರಾಚಾರ್ಯರು ಕಮಠಾಣ ಸರ್ಕಾರಿ ಪಿಯು ಕಾಲೇಜು

ಕಾಲೇಜಿನಲ್ಲಿ ಇತಿಹಾಸ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮತಿ ಕೊಡಲಾಗಿದೆ. ಕೊಳವೆಬಾವಿಯಲ್ಲಿ ನೀರಿಲ್ಲದ ಮೋಟಾರ್ ಕೆಟ್ಟಿರುವ ಕಾರಣ ಪ್ರೌಢಶಾಲೆ ಕೊಳವೆಬಾವಿಯಿಂದ ನೀರು ಪಡೆಯಲಾಗುತ್ತಿದೆ.

-ಚಂದ್ರಕಾಂತ ಗಂಗಶೆಟ್ಟಿ ಪ್ರಾಚಾರ್ಯ ಮಂದಕನಳ್ಳಿ ಸರ್ಕಾರಿ ಪಿಯು ಕಾಲೇಜು

ಕಲಾ ಹಾಗೂ ವಿಜ್ಞಾನ ವಿಭಾಗಕ್ಕೆ ಹೋಲಿಸಿದರೆ ಕಾಲೇಜಿನಲ್ಲಿ ಶೇ 65 ರಷ್ಟು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.

-ಪ್ರೇಮನಾಥ ಪಾಂಚಾಳ ಪ್ರಾಚಾರ್ಯ ಮನ್ನಳ್ಳಿ ಸರ್ಕಾರಿ ಪಿಯು ಕಾಲೇಜು

ಹೊಸ ಕೊಳವೆಬಾವಿ ಕೊರೆದು ಮಂದಕನಳ್ಳಿ ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಹೆಚ್ಚುವರಿ ಕೋಣೆಗಳನ್ನು ನಿರ್ಮಿಸಬೇಕು.

-ಮುಬಾರಕ್ ಮಂದಕನಳ್ಳಿ ಗ್ರಾಮಸ್ಥ

ಮನ್ನಳ್ಳಿ ಕಾಲೇಜಿನಲ್ಲಿ ಕಲಾ ಹಾಗೂ ವಿಜ್ಞಾನ ವಿಭಾಗಗಳಷ್ಟೇ ಇವೆ. ವಾಣಿಜ್ಯ ವಿಭಾಗವನ್ನೂ ಆರಂಭಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲವಾಗಲಿದೆ.

-ಭೀಮರೆಡ್ಡಿ ಮನ್ನಳ್ಳಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.