ಔರಾದ್: ಉದ್ಯೋಗ ಖಾತರಿ ಯೋಜನೆಯಡಿ ಮಾದರಿ ಕೆರೆ ನಿರ್ಮಿಸಿ ಹೆಸರು ಮಾಡಿದ್ದ ತಾಲ್ಲೂಕಿನ ಧುಪತಮಹಾಗಾಂವ ಗ್ರಾಮ ಪಂಚಾ ಯಿತಿಯು ಇದೀಗ ಇಡೀ ಪಂಚಾಯಿತಿ ವ್ಯಾಪ್ತಿಯಲ್ಲಿ ಸೌರ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದೆ.
ನವೀಕರಿಸಬಹುದಾದ ಇಂಧನ ಬಳಕೆ ಉತ್ತೇಜಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ನೆರವಿನೊಂದಿಗೆ ಧುಪತಮಹಾಗಾಂವ್ ಪಂಚಾಯಿತಿಯು 14ನೇ ಮತ್ತು 15ನೇ ಹಣಕಾಸು ಯೋಜನೆಯ ಅನುದಾನ ಬಳಸಿ ಸುಮಾರು ₹ 20 ಲಕ್ಷ ವೆಚ್ಚದಲ್ಲಿ ಸೌರ ಬೀದಿ ದೀಪದ ವ್ಯವಸ್ಥೆ ಮಾಡಿದೆ.
ಪಂಚಾಯಿತಿ ವ್ಯಾಪ್ತಿಯ ಧುಪತ ಮಹಾಗಾಂವ್, ಬಾಬಳಿ, ಮಣಿಗೆಂಪುರ, ಜೀರ್ಗಾ(ಬಿ) ಗ್ರಾಮಗಳು ಹಾಗೂ ಬಿಕ್ಕುನಾಯಕ ತಾಂಡಾ, ಚಂದ್ರನಾಯಕ ತಾಂಡಾಗಳಲ್ಲಿ 450 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಎರಡು ಅಂಗನವಾಡಿ ಕೇಂದ್ರಗಳಿಗೂ ಸೌರ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸ ಲಾಗಿದ್ದು, ಇಡೀ ಪಂಚಾಯಿತಿಯು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ.
ಗ್ರಾಮ ಪಂಚಾಯಿತಿ ಕಚೇರಿ ಕೆಲಸ ಹಾಗೂ ಎರಡು ಅಂಗನವಾಡಿ ಕೇಂದ್ರಗಳಲ್ಲೂ ಸೋಲಾರ್ ವಿದ್ಯುತ್ ಬಳಕೆ ಮಾಡುತ್ತಿದ್ದೇವೆ ಎಂದು ಪಿಡಿಒ ನಾಗೇಶ್ ಮುಕ್ರಂಬೆ ತಿಳಿಸಿದ್ದಾರೆ.
‘ಪಂಚಾಯಿತಿಯಲ್ಲಿ ಸೋಲಾರ್ ಬಳಕೆ ವಿಷಯದಲ್ಲಿ ನಾಲ್ಕು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಮೊದಲಿಗೆ ಇದು ಸಾಧ್ಯವಾಗದು ಎಂಬ ಅಭಿಪ್ರಾಯ ಬಂದಿತ್ತು. ಆದರೂ ಅಧಿಕಾರಿಗಳ ಪ್ರೋತ್ಸಾಹ ಹಾಗೂ ನೆರವಿನಿಂದ ನಾವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿ ಸಾಧಿಸಿದ್ದೇವೆ. ಇದರಿಂದ ವರ್ಷಕ್ಕೆ ₹ 20 ರಿಂದ 25 ಲಕ್ಷ ಉಳಿತಾಯವಾಗುತ್ತಿದೆ. ಇಡೀ ಪಂಚಾಯಿತಿಯಲ್ಲಿ ಸೋಲಾರ್ ಬೆಳಕಿನ ವ್ಯವಸ್ಥೆ ಮಾಡಿದ ರಾಜ್ಯದ ಮೊದಲ ಪಂಚಾಯಿತಿ ಎಂಬ ಹೆಗ್ಗಳಿಕೆಯೂ ನಮಗೆ ಸಿಕ್ಕಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನೆಕೇರಿ ಹೆಮ್ಮೆಯಿಂದ ಹೇಳುತ್ತಾರೆ.
ಸ್ಥಳೀಯ ಜನಪ್ರತಿನಿಧಿಗಳ ಕಾಳಜಿ, ಈ ಹಿಂದಿನ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಜ್ಞಾನೇಂದ್ರಕುಮಾರ ಗಂಗ್ವಾರ್, ಜಹೀರಾ ನಸೀಮ್, ಪಿಡಿಒ ಶಿವಾನಂದ ಔರಾದೆ ಅವರ ಪರಿಶ್ರಮದಿಂದ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಈ ಪಂಚಾಯಿತಿ ಈಗ ಅಮೃತ ಯೋಜನೆಯಡಿ ಆಯ್ಕೆ ಯಾಗಿದ್ದು, ₹ 25 ಲಕ್ಷ ಅನುದಾನವೂ ಮಂಜೂರಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.