ADVERTISEMENT

ಪಪ್ಪಾಯ ‘ಸಿಹಿ’ ಕಂಡ ಯುವ ರೈತ: ₹6 ಲಕ್ಷ ಆದಾಯ ಗಳಿಕೆ

ಸಾವಯವ ಗೊಬ್ಬರದಿಂದ ಉತ್ತಮ ಫಸಲು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 4:51 IST
Last Updated 26 ಮಾರ್ಚ್ 2022, 4:51 IST
ಹುಮನಾಬಾದ್ ತಾಲ್ಲೂಕಿನ ಮೀನಕೇರಾ ಗ್ರಾಮದ ರಾಜಕುಮಾರ ಗಬಾಡಿ ಅವರ ಹೊಲದಲ್ಲಿ ಬೆಳೆದ ಪಪಾಯಿ ಬೆಳೆ
ಹುಮನಾಬಾದ್ ತಾಲ್ಲೂಕಿನ ಮೀನಕೇರಾ ಗ್ರಾಮದ ರಾಜಕುಮಾರ ಗಬಾಡಿ ಅವರ ಹೊಲದಲ್ಲಿ ಬೆಳೆದ ಪಪಾಯಿ ಬೆಳೆ   

ಹುಮನಾಬಾದ್: ಸಮೀಪದ ಮೀನಕೇರಾ ಗ್ರಾಮದ ಯುವ ರೈತ ರಾಜಕುಮಾರ ಗಬಾಡಿ ಎಂಬುವವರು ತಮ್ಮ 4 ಎಕರೆಯಲ್ಲಿ ಪಪ್ಪಾಯ ನಾಟಿ ಮಾಡಿ ಯಶಸ್ಸು
ಕಂಡಿದ್ದಾರೆ.

ಪ್ರತಿ ಎಕರೆಗೆ 900 ಸಸಿಗಳಂತೆ ನರ್ಸರಿಯಿಂದ ಸುಮಾರು 3,600 ಸಸಿಗಳನ್ನು ತಂದು ಹೊಲದಲ್ಲಿ ನೆಟ್ಟಿದ್ದಾರೆ. ನಾಟಿಗೂ ಮುಂಚೆ ಹೊಲಕ್ಕೆ ತಿಪ್ಪೆ ಗೊಬ್ಬರ ಹಾಕಿದ್ದಾರೆ. 6 ರಿಂದ 7 ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ.

ರಾಸಾಯನಿಕ ಗೊಬ್ಬರ ಬಳಕೆಯ ಬದಲು, ಸಾವಯವ ಗೊಬ್ಬರ ಉಪಯೋಗ ಮಾಡಿದ್ದರಿಂದ ಖರ್ಚಿನ ಪ್ರಮಾಣವೂ ಕಡಿಮೆಯಾಯಿತು ಹಾಗೂ ಗುಣಮಟ್ಟದ ಇಳುವರಿ ಬರಲು ಸಾಧ್ಯವಾಗಿದೆ ಎನ್ನುತ್ತಾರೆ ರಾಜಕುಮಾರ ಅವರು.

ADVERTISEMENT

ಸಸಿಗಳನ್ನು ನೆಟ್ಟ ಮೂರು ತಿಂಗಳಿಗೆ ಫಲ ಆರಂಭವಾಗಿದ್ದು, ಪ್ರತಿ ಗಿಡಗಳೂ ಉತ್ತಮ ಕಾಯಿಗಳನ್ನು ಹೊಂದಿವೆ. ಅಲ್ಲದೆ ಸಾಮಾನ್ಯವಾಗಿ ಪ್ರತಿ ಕಾಯಿಗಳು 5 ರಿಂದ 12 ಕೆ.ಜಿ ತೂಕ ಹೊಂದಿವೆ. ಇಲ್ಲಿಯವರೆಗೆ ಪಪ್ಪಾಯ ಬೆಳೆಗೆ ₹2.5 ಲಕ್ಷ ಖರ್ಚು ವೆಚ್ಚ ಮಾಡಲಾಗಿದೆ. ನಾಲ್ಕು ಎಕರೆಯಲ್ಲಿ ಇಲ್ಲಿಯವರೆಗೆ 65 ಟನ್ ಇಳುವರಿ ಬಂದಿದೆ.

ಇನ್ನು 20 ಟನ್‌ಗಿಂತಲು ಹೆಚ್ಚು ಫಸಲು ಹೊಲದಲ್ಲಿ ಇದೆ.

ದೆಹಲಿ ಮಾರುಕಟ್ಟೆಯ ಖರೀದಿದಾರರು ಪ್ರತಿ ಕೆ.ಜಿಗೆ 12ರಂತೆ ತಾವೇ ಕೊಯ್ಲು ಮಾಡಿಕೊಂಡು ಹೋಗುತ್ತಿದ್ದಾರೆ. ಪಪ್ಪಾಯ ಬೆಳೆಯು ಕೇವಲ ಆರು ತಿಂಗಳಲ್ಲೇ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ಬೆಳೆಯಿಂದ ಇಲ್ಲಿಯವರೆಗೆ ಸುಮಾರು ₹ 6 ಲಕ್ಷ ಆದಾಯ ಗಳಿಸಲಾಗಿದೆ ಎಂದು ರೈತ ರಾಜಕುಮಾರ ಮಾಹಿತಿ
ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.